ಪ್ರೇಮಿ ಜೊತೆ ಸೇರಿ ಮಗಳಿಂದಲೇ ತ್ರಿಬಲ್ ಮರ್ಡರ್ – ಸಾಯುವ ಮೊದಲು ಸತ್ಯ ಬಾಯ್ಬಿಟ್ಟ ತಂದೆ

ಪ್ರೇಮಿ ಜೊತೆ ಸೇರಿ ಮಗಳಿಂದಲೇ ತ್ರಿಬಲ್ ಮರ್ಡರ್ – ಸಾಯುವ ಮೊದಲು ಸತ್ಯ ಬಾಯ್ಬಿಟ್ಟ ತಂದೆ

ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಪ್ರೇಮಿ ಜೊತೆ ಸೇರಿಕೊಂಡು ಹೆತ್ತ ಮಗಳೇ ತಂದೆ ತಾಯಿಗೆ ಚಾಕು ಇರಿದು ಕೊಲೆ ಮಾಡಿದ್ದಾಳೆ. ಜೊತೆಗೆ ಒಡಹುಟ್ಟಿದ ತಂಗಿಗೂ ಚಾಕು ಇರಿದು ಸಾಯಿಸಿದ್ದಾಳೆ. ಸಾಯುವ ಮೊದಲು ತಂದೆ ಪಾಪಿ ಮಗಳ ಕೃತ್ಯವನ್ನು ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ:ಪ್ರೇಮಿ ಜೊತೆ ಸೇರಿ ತಂದೆ, ತಾಯಿ, ತಂಗಿಯ ಬರ್ಬರ ಹತ್ಯೆ – ಪಾಪಿ ಮಗಳಿಂದಲೇ ಭೀಕರ ಕೃತ್ಯ

ಬೆಂಗಳೂರು ಕೆ.ಆರ್. ಪುರದ ಸಿಗೇಹಳ್ಳಿಯಲ್ಲಿ ತಡರಾತ್ರಿ ನಡೆದ ತ್ರಿಬಲ್ ಮರ್ಡರ್ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ.. ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಮಗಳು ಸುಪ್ರಿಯಾ (20) ಕೊಲೆಯ ಮತ್ತಷ್ಟು ವಿಚಾರಗಳು ಪೊಲೀಸ್ ತನಿಖೆಯಲ್ಲಿ ಲಭ್ಯವಾಗಿದೆ. ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ, ಕೆನತ್ ಎಂಬಾತನ ಜೊತೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್ ಗೆ ಬಂದಿದ್ದರು. ಈ ವೇಳೆ ಪೋಷಕರು ಹಾಗೂ ಶ್ವೇತಾ-ಕೆನತ್ ಜೋಡಿ ನಡುವೆ ತೀವ್ರ ಗಲಾಟೆ ನಡೆದಿದೆ. ನಂತರ ಶ್ವೇತಾ ಮತ್ತು ಕೆನತ್ ಸೋಮಸುಂದರ್ , ಅವರ ಪತ್ನಿ ಮತ್ತು ಮಗಳಿಗೆ ಚಾಕುವಿನಿಂದ ಇರಿದಿದ್ದಾರೆ. ಮನೆಯೊಳಗೆ ಹೆಂಡತಿ, ಕಿರಿಯ ಮಗಳು ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ನೋಡಿ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ ತಕ್ಷಣವೇ ಸೋಮಸುಂದರ್ ಅವರನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ತೀವ್ರ ರಕ್ತಸ್ರಾವದಿಂದ ಸೋಮಸುಂದರ್ ಕೊನೆಯುಸಿರೆಳೆದಿದ್ದಾರೆ.

ಸಾವನ್ನಪ್ಪುವ ಮುನ್ನ ಸೋಮಸುಂದರ್ ಅವರು ಪೊಲೀಸರಿಗೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನನ್ನ ದೊಡ್ಡ ಮಗಳು ಶ್ವೇತಾ ತನ್ನ ಬಾಯ್ ಫ್ರೆಂಡ್ ಜೊತೆ ಲಿವಿಂಗ್‌ನಲ್ಲಿದ್ದಳು. ಇದು ಸರಿಯಲ್ಲ ಎಂದು ಬುದ್ಧಿ ಹೇಳಲು ಬಂದಿದ್ದೆವು. ಆದರೆ ಮಗಳು ಮತ್ತು ಆಕೆಯ ಬಾಯ್ ಫ್ರೆಂಡ್ ನಮ್ಮ ಮೇಲೆ ಚಾಕುವಿನಿಂದ ಇರಿದರು. ನನ್ನ ಹೆಂಡತಿ ಮತ್ತು ಚಿಕ್ಕ ಮಗಳು ಮನೆ ಒಳಗಡೆಯೇ ಇದ್ದಾರೆ ಎಂದು ಸೋಮಸುಂದರ್ ಪೊಲೀಸರ ಎದುರು ಕಣ್ಣೀರಿಡುತ್ತಾ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಮೂವರನ್ನು ಕೊಲೆ ಮಾಡಿದ ಪಾತಕಿಗಳು ಪರಾರಿಯಾಗಿದ್ದಾರೆ. ಅದು ಕೂಡಾ ತಮ್ಮ ಅಪಾರ್ಟ್‌ಮೆಂಟ್‌ನಿಂದ ಮತ್ತೊಂದು ಬಿಲ್ಡಿಂಗ್‌ಗೆ ಜಂಪ್ ಮಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಯಾಕೆಂದರೆ, ಇವರ ಅಪಾರ್ಟ್‌ಮೆಂಟ್ ಬಳಿ ಸೆಕ್ಯೂರಿಟಿ ಇದ್ದ ಕಾರಣ ಬೇರೊಂದು ಮಾರ್ಗ ಬಳಸಿ ಪರಾರಿಯಾಗಿದ್ದಾರೆ. ಕೊಲೆಪಾತಕ ಪ್ರೇಮಿಗಳು ಗೇಟ್‌ನಿಂದ ಹೊರಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

Kishor KV

Leave a Reply

Your email address will not be published. Required fields are marked *