ದಿ ಎಲಿಫೆಂಟ್ ವಿಸ್ಪರರ್ಸ್ ‘ರಘು’ಗೆ ಸಖತ್ ಡಿಮ್ಯಾಂಡ್ – ವಿದೇಶದಿಂದಲೂ ಬರ್ತಿದ್ದಾರೆ ಫ್ಯಾನ್ಸ್..!
ಜನ್ಮ ನೀಡದಿದ್ದರೂ ಜೀವ ಕೊಡುವಂಥ ಬಂಧ. ಎತ್ತಿ ಆಡಿಸದಿದ್ದರೂ ಬದುಕನ್ನೇ ಮುಡಿಪಿಟ್ಟ ಸಂಬಂಧ. ಕಾಡಲ್ಲಿ ಹುಟ್ಟಿದ ಕಂದನಿಗೆ ನಾಡಿನ ದಂಪತಿ ಆಸರೆಯಾಗಿದ್ರು. ಅನಾಥವಾಗಿದ್ದ ಕಾಡಾನೆ ಮರಿಗೆ ಅಮ್ಮನ ಪ್ರೀತಿಯ ಅಮೃತ ಕೊಟ್ಟು ಬೆಳೆಸಿದ್ದರು. ಇದೇ ನಿಶ್ಕಲ್ಮಶ ಪ್ರೇಮ ಈಗ ಇಡೀ ಜಗತ್ತನ್ನೇ ಗೆದ್ದಿದೆ. ಆನೆ ಮತ್ತು ದಂಪತಿ ನಡುವಿನ ಬಾಂಧವ್ಯಕ್ಕೆ ಆಸ್ಕರ್ ಪ್ರಶಸ್ತಿ ಗರಿಮೆ ಸಿಕ್ಕಿದೆ.
ವಿಶ್ವದ ಉದ್ದಗಲಕ್ಕೂ ಈಗ ‘ಆರ್ಆರ್ಆರ್’ ಸಿನಿಮಾ ಮತ್ತು ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದ್ದೇ ಮಾತು. ಅದ್ರಲ್ಲೂ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವನ್ನ ವಿದೇಶಿಗರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ತಮಿಳುನಾಡಿನ ಮುದುಮಲೈ ಅರಣ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಕಿರುಚಿತ್ರವನ್ನ ಚಿತ್ರೀಕರಿಸಲಾಗಿದೆ. ಸಾಕ್ಷ್ಯಚಿತ್ರದ ಕಥೆಯು ‘ರಘು’ ಎಂಬ ಆನೆಯ ಹಾಗೂ ಬೊಮ್ಮನ್ ಮತ್ತು ಬೆಳ್ಳಿ ಎಂಬ ದಂಪತಿ ನಡುವೆ ಸಾಗುತ್ತದೆ. ಹೀಗಾಗಿ ರಿಯಲ್ ಹೀರೋ ‘ರಘು’ನನ್ನ ನೋಡಲು ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಇದೀಗ ಆಸ್ಕರ್ ಪ್ರಶಸ್ತಿಯ ಹೀರೋ ರಘುನನ್ನ ನೋಡಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ.
ಇದನ್ನೂ ಓದಿ : ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ‘ಆಸ್ಕರ್’ ಗರಿ – ಆನೆ ಮತ್ತು ದಂಪತಿ ನಡುವಿನ ಬಂಧಕ್ಕೆ ಶ್ರೇಷ್ಠ ಪ್ರಶಸ್ತಿ!
ತಮಿಳುನಾಡಿದ ಮದುಮಲೈ ಕಾಡಿನ ಕಟ್ಟುನಾಯಕ ಸಮುದಾಯದ ಬೊಮ್ಮ ಸೇಲಂಗೆ ಹೋಗಿದ್ದ ವೇಳೆ ಪುಟಾಣಿ ಆನೆಮರಿಯೊಂದಿಗೆ ವಾಪಸ್ ಆಗುತ್ತಾರೆ. ಆ ಮರಿಯಾನೆ ನಡೆದಾಡಲು ಕೂಡ ಆಗದಷ್ಟರ ಮಟ್ಟಿಗೆ ದಯನೀಯ ಸ್ಥಿತಿಯಲ್ಲಿತ್ತು. ವಿಷಯ ಏನಂದ್ರೆ ನೀರು ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಗಳ ಹಿಂಡಿನ ತಾಯಿಯಾನೆ ಕರೆಂಟ್ ಶಾಕ್ನಿಂದ ಮೃತಪಟ್ಟಿತ್ತು. ಮರಿಯು ಕಾಡಾನೆಗಳ ಹಿಂಡಿನಿಂದ ತಪ್ಪಿಸಿಕೊಂಡಿತ್ತು. ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಮೇಲೆ ನಾಯಿಗಳ ಗುಂಪು ದಾಳಿ ಮಾಡಿತ್ತು. ಈ ವೇಳೆ ಅದರ ಜವಾಬ್ದಾರಿಯನ್ನ ಬೊಮ್ಮನಿಗೆ ವಹಿಸಲಾಗಿತ್ತು.
ಬೊಮ್ಮ ಹಾಗೂ ಪತ್ನಿ ಬೆಳ್ಳಿ ಇಬ್ಬರೂ ಕಾಡಿನ ಮಕ್ಕಳೇ ಆಗಿದ್ರಿಂದ ಗಾಯಾಳು ಮರಿಯಾನೆಯನ್ನ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸಿದ್ರು. ಮೈತೊಳೆದು, ಹಲ್ಲು ಉಜ್ಜಿ, ಹಾಲು ಕುಡಿಸಿ, ಕೈತುತ್ತು ತಿನ್ನಿಸಿದರು. ಜೊತೆಗೆ ಆರೋಗ್ಯ ಸುಧಾರಿಸಲಿ ಎಂದು ಹರಕೆಯನ್ನೂ ಹೊತ್ತಿದ್ದರು. ರಘು ಎಂದು ಹೆಸರಿಟ್ಟು ತಮ್ಮ ಮಕ್ಕಳಂತೆಯೇ ಸಾಕಿ ಸಲಹಿದ್ದರು. ಬೊಮ್ಮ ಹಾಗೂ ಬೆಳ್ಳಿ ಜೀವನದಲ್ಲಿ ರಘು ಬೆರೆತುಹೋಗಿದ್ದ. ಇದರ ನಡುವೆ ಅಮ್ಮು ಎಂಬ ಪರಿತ್ಯಕ್ತ ಮತ್ತೊಂದು ಆನೆ ಜೊತೆಯಾಗಿತ್ತು.
7 ವರ್ಷ ವಯಸ್ಸಾಗಿದ್ದ ರಘು ಆನೆಯನ್ನ ಬೇರೊಂದು ಶಿಬಿರಕ್ಕೆ ಕಳಿಸಲಾಯಿತು. ಆಗ ಮಗನನ್ನೇ ಕಳೆದುಕೊಂಡಂತೆ ದಂಪತಿ ಕಣ್ಣೀರಿಟ್ಟಿದ್ದರು. ಈ ವೇಳೆ ಅಮ್ಮು ಆನೆ ತನ್ನ ಸೊಂಡಿಲಿನಿಂದ ಬೆಳ್ಳಿಯ ಕಣ್ಣೀರು ಒರೆಸುತ್ತದೆ. ಇಂತಹ ಭಾವುಕತೆ ತುಂಬಿದ ಸಾಕಷ್ಟು ದೃಶ್ಯಗಳು ಕಿರುಚಿತ್ರದಲ್ಲಿವೆ.
Elephant of the moment Raghu 😊 He came to the Mudumalai camp when he was about 6 months old. Today standing tall at 7 yrs. Always very naughty and playful seen with Bommi another orphaned baby elephant about 3 yrs. #ElephantWhisperers #mudumalai #TNForest #oscar #Oscar2023 pic.twitter.com/fsDQC4zYS6
— Supriya Sahu IAS (@supriyasahuias) March 14, 2023
ಮದುಮಲೈ ಆನೆ ಶಿಬಿರದಲ್ಲಿ ಮರಿ ಆನೆಯನ್ನು ಸಾಕುವ ದಂಪತಿಯ ಕಥೆಯನ್ನು ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರ ಹೊಂದಿತ್ತು. ಈ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ಈ ಆನೆ ಶಿಬಿರ ಕೂಡ ಪ್ರಸಿದ್ಧ ಆಗಿದೆ. ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರವು ಏಷ್ಯಾದ ಅತ್ಯಂತ ಹಳೆಯ ಆನೆ ಶಿಬಿರವಾಗಿದ್ದು, ಇದನ್ನು 105 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ಮೊಯಾರ್ ನದಿಯ ತಟದಲ್ಲಿರುವ ಶಿಬಿರದಲ್ಲಿ ಪ್ರಸ್ತುತ 28 ಆನೆಗಳಿದ್ದು, ಪರಿಣಿತ ಮಾವುತರು ಆನೆಗಳಿಗೆ ತರಬೇತಿ ನೀಡುತ್ತಾ, ಅವುಗಳ ಆರೈಕೆಯಲ್ಲಿ ತೊಡಗಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ತಮ್ಮ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಐದು ವರ್ಷಗಳ ಕಾಲ ತಂಗಿದ್ದರು. ಅವರ ಪರಿಶ್ರಮದ ಫಲವಾಗಿ ಆ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಂದಿದೆ. ಇನ್ನು, ಆನೆ ಶಿಬಿರ ವೀಕ್ಷಿಸಲು ಬಂದ ವಿದೇಶಿ ಪ್ರವಾಸಿಗರು ಕೂಡ ಇಲ್ಲಿನ ಕಥೆಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ನಾನು ಲಂಡನ್‌ನಿಂದ ಬಂದಿದ್ದೇನೆ. ಇಲ್ಲಿ ಎರಡು ಮರಿಯಾನೆಗಳಿಗೆ ನಿನ್ನೆ ಆಸ್ಕರ್ ಸಿಕ್ಕಿದೆ ಎಂಬ ಮಾಹಿತಿ ಬಂತು. ಆದ್ದರಿಂದ ಅವುಗಳನ್ನು ನೋಡಲು ಬಂದಿದ್ದು, ಆನೆಗಳನ್ನು ನೋಡಿ ಖುಷಿಯಾಯಿತು. ಆನೆಗಳನ್ನು ನೋಡುವುದು ನನ್ನ ಅದೃಷ್ಟ ಎಂದು ವಿದೇಶಿ ಪ್ರವಾಸಿಗರೊಬ್ಬರು ಸಂತಸ ಹಂಚಿಕೊಂಡಿದ್ದಾರೆ.