ಮೊದಲ ಮಹಿಳಾ ಕಾವಡಿಯಾಗಿ ʼದಿ ಎಲಿಫೆಂಟ್ ವಿಸ್ಪರರ್ಸ್ʼ ಖ್ಯಾತಿಯ ಬೆಳ್ಳಿ ನೇಮಕ
ಚೆನ್ನೈ: ಆಸ್ಕರ್ ಪ್ರಶಸ್ತಿ ಪುರಸ್ಕೃತ ಬೆಳ್ಳಿ, ಬೊಮ್ಮನ್ ದಂಪತಿ ಎಲ್ಲರಿಗೂ ಗೊತ್ತೇ ಇದೆ. ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಕ್ಕೆ ಪ್ರೇರಣೆಯಾಗಿದ್ದ ಬೆಳ್ಳಿ ಅವರನ್ನು ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ತಮಿಳುನಾಡು ಸರ್ಕಾರ ನೇಮಕ ಮಾಡಿದೆ.
ಬೆಳ್ಳಿ ಅವರು ಮುದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಬಿಡಾರದಲ್ಲಿ ತಾತ್ಕಾಲಿಕ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಆಕೆಯನ್ನು ತಮಿಳುನಾಡು ಸರ್ಕಾರ ರಾಜ್ಯದ ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ನೇಮಕ ಮಾಡಿದ್ದು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಬೆಳ್ಳಿ ಅವರಿಗೆ ನೇಮಕ ಪತ್ರ ವಿತರಣೆ ಮಾಡಿದ್ದಾರೆ.
ಇದನ್ನೂ ಓದಿ: ಅನಾಥ ಆನೆಮರಿಯನ್ನ ಮಗುವಿನಂತೆ ಪೋಷಿಸುತ್ತಿದ್ದಾರೆ ಕಾವಾಡಿ ದಂಪತಿ – ಬಂಡೀಪುರದಲ್ಲೊಂದು ‘ದಿ ಎಲಿಫೆಂಟ್ ವಿಸ್ಪರರ್ಸ್’!
ಬೆಳ್ಳಿ ಅವರು ಆನೆ ಮರಿಗಳನ್ನು ಸಾಕಿ-ಸಲಹಿದ ಪರಿಗೆ ಅವರನ್ನು ರಾಜ್ಯದ ಮೊದಲ ಮಹಿಳಾ ಕಾವಡಿಯಾಗಿ ನೇಮಕ ಮಾಡಲಾಗಿದೆ. ಹೀಗಾಗಿ ತಾತ್ಕಾಲಿಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಿ, ಈಗ ರಾಜ್ಯದ ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ನೇಮಕಗೊಂಡಿದ್ದಾರೆ. ಇವರು ನೀಲಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಬಿಡಾರದಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ತಮಿಳು ನಾಡು ಸರ್ಕಾರ ಆದೇಶ ಹೊರಡಿಸಿದೆ.
ದಿ ಎಲಿಫೆಂಟ್ ವಿಸ್ಪರರ್ಸ್ ಬಗ್ಗೆ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಸಾಕಾಣಿಕೆ ಶಿಬಿರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ಇವರು ತೆಂಕಣಿಕೊಟ್ಟೈ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆ ಮರಿಯನ್ನು ಕರೆತಂದು ಸಾಕಿದರು. ಬಳಿಕ 2018ರಲ್ಲಿ ಸತ್ಯಮಂಗಲಂ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಆನೆ ಮರಿಯನ್ನು ಇವರು ಮುದುಮಲೈ ಶಿಬಿರಕ್ಕೆ ಕರೆತಂದು ಸಾಕಿದರು. ಮುದ್ದಾದ ಮರಿಗಳಿಗೆ ರಘು ಮತ್ತು ಬೊಮ್ಮಿ ಎಂದು ಹೆಸರಿಟ್ಟಿದ್ದರು. ಎರಡು ಪುಟ್ಟ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮ್ಮ ಮಕ್ಕಳಂತೆ ಮುದ್ದಾಗಿ ಬೆಳೆಸಿದರು. ಇವರ ಸ್ಫೂರ್ತಿದಾಯಕ ಜೀವನವನ್ನು ಸೆರೆ ಹಿಡಿದು ಆಸ್ಕರ್ ಅಂಗಳಕ್ಕೆ ಕೊಂಡೊಯ್ದಿದ್ದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್.
ಆಸ್ಕರ್ ಮುಡಿಗೇರಿಸಿಕೊಂಡ ಬಳಿಕ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ದಿ ಎಲಿಫೆಂಟ್ ವಿಸ್ಪರರ್ಸ್ ನ ರಿಯಲ್ ಹೀರೋಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೈಗೆ ಪ್ರಶಸ್ತಿ ಇಟ್ಟು ಸಂಭ್ರಮಿಸಿದ್ದರು. ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಡಿದು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಂತೋಷ ವ್ಯಕ್ತಪಡಿಸಿದ್ದರು.