ನಾಯಕರ ಪೈಪೋಟಿ.. ಹೈಕಮಾಂಡ್ ಅಸಡ್ಡೆ – ತಿಂಗಳಾದ್ರೂ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು!

ನಾಯಕರ ಪೈಪೋಟಿ.. ಹೈಕಮಾಂಡ್ ಅಸಡ್ಡೆ – ತಿಂಗಳಾದ್ರೂ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು!

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ದೊಡ್ಡ ಪೈಪೋಟಿಯೇ ನಡೆದಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಕುರ್ಚಿಗೇರಲು ಜಟಾಪಟಿ ನಡೆಸಿದ್ರು. ವಾರದ ಬಳಿಕ ಸಿದ್ದರಾಮಯ್ಯರನ್ನ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಬಿಜೆಪಿಯಲ್ಲಿ ವಿಪಕ್ಷನಾಯಕನ ಆಯ್ಕೆ ಕಸರತ್ತು ಸಿಎಂ ಆಯ್ಕೆಗಿಂತಲೂ ಜೋರಾಗಿದೆ.

ವಿಧಾನಸಭೆ ಫಲಿತಾಂಶ ಬಂದು ತಿಂಗಳಾದರೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿಯಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕೇವಲ 66 ಶಾಸಕರು ಗೆಲ್ಲುವ ಮೂಲಕ ಬಿಜೆಪಿ ಪ್ರತಿಪಕ್ಷಕ್ಕೆ ತಳ್ಳಲ್ಪಟ್ಟಿದೆ. ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಎಲ್ಲವನ್ನೂ ಮುಗಿಸಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಆದರೆ ಪ್ರತಿಪಕ್ಷ ಬಿಜೆಪಿಯ ವಿಳಂಬ ಧೋರಣೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಇದನ್ನೂ ಓದಿ : ಬೆಂಗಳೂರು ಮೈಸೂರು ದಶಪಥ ರಸ್ತೆ ಸವಾರರಿಗೆ ಶಾಕ್ – ಮತ್ತೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಹಜವಾಗಿ ಬಿಜೆಪಿಯಲ್ಲಿ ಪೈಪೋಟಿ ಇದೆ. ಆದರೆ ವರಿಷ್ಠರ ಲೆಕ್ಕಾಚಾರ ಏನು? ಅವರ ಕೃಪೆ ಯಾರ ಮೇಲೆ ಇದೆ ಎನ್ನುವುದು ಮಾತ್ರ ನಿಗೂಢ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಯತ್ನಾಳ್, ಡಾ. ಅಶ್ವಥ್‌ ನಾರಾಯಣ್, ಸುನಿಲ್ ಕುಮಾರ್ ಸೇರಿದಂತೆ ಹಲವು ಪ್ರಮುಖರ ಹೆಸರು ಈ ಹುದ್ದೆಗೆ ಕೇಳಿ ಬರುತ್ತಿದೆಯಾದರೂ ಹೈಕಮಾಂಡ್ ಮಾತ್ರ ಏನನ್ನೂ ಹೇಳುತ್ತಿಲ್ಲ.

ಇತ್ತೀಚೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವರದಿ ಕೊಂಡೊಯ್ದಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಅವರೇ ಬಹುತೇಕ ಪ್ರತಿಪಕ್ಷ ನಾಯಕರಾಗ್ತಾರೆ ಅಂತ ಹೇಳಲಾಗುತ್ತಿದೆಯಾದರೂ, ಯಾರಿಗೂ ಖಚಿತತೆ ಇಲ್ಲ. ಬಿಜೆಪಿ ನಾಯಕರ ಮುಸುಕಿನ ಗುದ್ದಾಟ, ಯಾರಲ್ಲೂ ಒಮ್ಮತ ಇಲ್ಲದಿರುವುದೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಸಹಜವಾಗಿ ಆಡಳಿತಾರೂಢ ಕಾಂಗ್ರೆಸ್‌ನವರು ಬಿಜೆಪಿಯ ಈ ವಿದ್ಯಮಾನವನ್ನು ಲೇವಡಿ ಮಾಡಲು ತೊಡಗಿದ್ದಾರೆ. ಇದು ಬಿಜೆಪಿಯ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದ್ದು, ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆ ಮುಗಿಸುವಂತೆ ಒತ್ತಡ ಹೇರ ತೊಡಗಿದ್ದಾರೆ.

ಇದರ ನಡುವೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆಗೂ ಕಾಲ ಸನ್ನಿಹಿತವಾಗಿದೆ. ಕಳೆದ ಆಗಸ್ಟ್‌ನಲ್ಲಿ ಅವರ ಅಧಿಕಾರಾವಧಿ ಮುಗಿದಿದ್ದರೂ, ಚುನಾವಣೆ ಹಿನ್ನೆಲೆಯಲ್ಲಿ ಮುಂದುವರಿಸಲಾಗಿತ್ತು. ಪಕ್ಷದ ಹೀನಾಯ ಸೋಲಿನ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಈಗ ಜೋರಾಗ ತೊಡಗಿದೆ. ಆದರೂ ರಾಷ್ಟ್ರೀಯ ನಾಯಕರು ಕರ್ನಾಟಕದ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಂತ ರಾಜ್ಯದ ನಾಯಕರು ಕೂಡ ವರಿಷ್ಠರ ಮೇಲೆ ಒತ್ತಡ ಹಾಕುವುದಿರಲಿ, ಪ್ರಶ್ನಿಸುವ ಗೋಜಿಗೂ ಹೋಗಿಲ್ಲ. ಈ ಎಲ್ಲ ಕಾರಣಗಳಿಂದ ಬಿಜೆಪಿಯ ಎರಡು ಪ್ರಮುಖ ಹುದ್ದೆಗಳೂ ಸೇರಿದಂತೆ ಯಾವುದೇ ಜವಾಬ್ದಾರಿಯನ್ನು ಹಂಚುವ ಪ್ರಕ್ರಿಯೆ ನಡೆಯುತ್ತಿಲ್ಲ. ಜುಲೈ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರಲ್ಲಿ ಕನಿಷ್ಟ ಪ್ರತಿಪಕ್ಷ ನಾಯಕ ಯಾರು ಎನ್ನುವ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಘೋಷಿಸಬೇಕಿದೆ.

suddiyaana