2 ವರ್ಷ, 2 ಸಲ ಹೃದಯ ಛಿದ್ರ – ನನಸಾಗದ ರೋಹಿತ್ ಕನಸು!

ರೋಹಿತ್ ಶರ್ಮಾ. ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ. ಇದೀಗ ಟಿ-20 ವಿಶ್ವಕಪ್ ಯುದ್ಧ ಗೆಲ್ಲೋಕೆ ತನ್ನ ಸೈನ್ಯದೊಂದಿಗೆ ಅಮೆರಿಕದಲ್ಲಿ ಶಸ್ತ್ರಾಭ್ಯಾಸ ನಡೆಸ್ತಿದ್ದಾರೆ. ಆದ್ರೆ ರೋಹಿತ್ ಶರ್ಮಾ ಎಷ್ಟೇ ಎಫರ್ಟ್ ಹಾಕ್ತಿದ್ರೂ ಆ 2 ವಿಚಾರದಲ್ಲಿ ಮಾತ್ರ ನತದೃಷ್ಟ ನಾಯಕ. 2 ವರ್ಷ, 2 ಸಲ ಹೃದಯ ಛಿದ್ರವಾಗಿದೆ. ಜೀವನದ ಅತಿದೊಡ್ಡ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ರೋಹಿತ್ ಶರ್ಮಾ 2 ಸಲ ನಿರಾಸೆ ಅನುಭವಿಸಿದ್ದಾರೆ. ಆದ್ರೀಗ ಮೂರನೇ ಸಲನಾದ್ರೂ ಕನಸು ನನಸು ಮಾಡಿಕೊಳ್ಳೋಕೆ ಪಣತೊಟ್ಟಿದ್ದಾರೆ. ಚುಟುಕು ವಿಶ್ವಕಪ್ ಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ ಪ್ರತಿಷ್ಟಿತ ಟ್ರೋಫಿಗೆ ಮುತ್ತಿಕ್ಕಲು ವಿಶ್ವ ಶ್ರೇಷ್ಟ ತಂಡಗಳ ನಡುವೆ ಪೈಪೋಟಿ ಜೋರಾಗಿದೆ. ಇದ್ರ ನಡುವೆ ಪ್ರಾಕ್ಟೀಸ್ ಕೂಡ ಭರ್ಜರಿಯಾಗೇ ನಡೀತಿದೆ. ಆದ್ರೆ ಟೀಂ ಇಂಡಿಯಾದ ಎಲ್ಲಾ ಆಟಗಾರರಿಗಿಂತ ರೋಹಿತ್ ಶರ್ಮಾಗೆ ಈ ಟೂರ್ನಿ ತುಂಬಾನೇ ಸ್ಪೆಷಲ್ ಮತ್ತು ಇಂಪಾರ್ಟೆಂಟ್. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್ ಫಿಕ್ಸಾ?
ನನಸಾಗದ ರೋಹಿತ್ ಕನಸು!
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಸಾರಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಸಮರ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಸತತವಾಗಿ 9ನೇ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ರೋಹಿತ್ ಶರ್ಮಾ ಸಜ್ಜಾಗಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಡಿದು ಈವರೆಗೆ ಒಟ್ಟಾರೆ 8 ಟಿ20 ಟೂರ್ನಿಗಳು ನಡೆದಿವೆ. ಈ ಎಲ್ಲಾ ಟೂರ್ನಿಗಳಲ್ಲಿ ಆಡಿದ ಹೆಗ್ಗಳಿಕೆ ರೋಹಿತ್ ಶರ್ಮಾರದ್ದು. ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ರೆಕಾರ್ಡ್ ಹೊಂದಿರೋ ರೋಹಿತ್, ಈ ಬಾರಿ ರನ್ ಗಡಿ ದಾಟಿದ ಸಾಧನೆ ಮಾಡಲು ಕಾತರರಾಗಿದ್ದಾರೆ.
ಈ ಬಾರಿ 36 ರನ್ಗಳಿಸಿದ್ರೆ, ಟಿ20 ವಿಶ್ವಕಪ್ ಇತಿಹಾಸದಲ್ಲೇ ಸಾವಿರ ರನ್ಗಳಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಬ್ಯಾಟ್ಸ್ಮನ್ ಆಗಿರೋ ರೋಹಿತ್53 ರನ್ಗಳಿಸಿದ್ರೆ, ಕ್ರಿಸ್ ಗೇಲ್, ಮಾಹೇಲ ಜಯವರ್ಧನೆಯನ್ನ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ. T20 ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ 36 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ, 34.39ರ ಸರಾಸರಿಯಲ್ಲಿ 963 ರನ್ಗಳಿಸಿದ್ದಾರೆ. 8 ಬಾರಿ ಅರ್ಧಶತಕದ ಗಡಿದಾಟಿರುವ ರೋಹಿತ್ 127.38ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಚೊಚ್ಚಲ ಟಿ20 ಆರಂಭವಾದಾಗ ಸಾಮಾನ್ಯ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಇದೀಗ ಟೀಮ್ ಇಂಡಿಯಾ ನಾಯಕನಾಗಿದ್ದಾರೆ. ನಾಯಕನಾಗಿ 2ನೇ ಬಾರಿ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ.
ಮೊದಲ ಬಾರಿ 2022ರ ಟಿ20 ವಿಶ್ವಕಪ್ನಲ್ಲಿ ರೋಹಿತ್ ತಂಡವನ್ನ ಮುನ್ನಡೆಸಿದ್ರು. ಆದ್ರೆ ದುರಾದೃಷ್ಟ ಅಂದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಚನ್ನಾಗೇ ಆಡಿದ ಟೀಮ್ ಇಂಡಿಯಾ, ಸೆಮಿಫೈನಲ್ನಲ್ಲಿ ಮುಗ್ಗರಿಸಿಬಿಡ್ತು. ಬರಿಗೈಯಲ್ಲಿ ಭಾರತಕ್ಕೆ ಮುಂಬೈಕರ್ ವಾಪಾಸ್ಸಾಗಿದ್ರು. ಹಾಗೇ 2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ನಲ್ಲೂ ರೋಹಿತ್ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ರು. ಅದ್ಭುತ ಆಟವನ್ನಾಡಿದ ಟೀಮ್ ಇಂಡಿಯಾ ಫೈನಲ್ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿತ್ತು. ಆದ್ರೆ ಫೈನಲ್ನಲ್ಲಿ ಮತ್ತದೇ ನಿರಾಸೆ. ಆಸ್ಟ್ರೇಲಿಯಾ ಎದುರಿನ ಸೋಲಿನೊಂದಿಗೆ ಕಪ್ ಗೆಲ್ಲೋ ಕನಸು ನುಚ್ಚು ನೂರಾಯ್ತು.
ರೋಹಿತ್ ಶರ್ಮಾ ಎರಡೆರಡು ಸಲ ಕೈ ಸುಟ್ಟುಕೊಂಡಿದ್ದಾರೆ. ನಾಯಕನಾದ ಬಳಿಕ 2 ವರ್ಷಗಳಲ್ಲಿ 2 ವಿಶ್ವಕಪ್ ಟೂರ್ನಿಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಆದ್ರೆ, ಟ್ರೋಫಿ ಗೆಲ್ಲೋ ಕನಸು ಕನಸಾಗೇ ಉಳಿದಿದೆ. ಇದೀಗ ಮತ್ತೊಂದು ಮಹತ್ವದ ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸಲು ರೋಹಿತ್ ರೆಡಿಯಾಗಿದ್ದಾರೆ. ಮೂರನೇ ಸಲನಾದ್ರೂ ಕಪ್ ಗೆಲ್ಲೋ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಈ ಸಲ ಭಾರತ ಗೆಲುವಿನ ಮೂಲಕ ಐಸಿಸಿ ಟ್ರೋಫಿ ಭಾರತದ ಪಾಲಾಗಲಿ, ರೋಹಿತ್ ಶರ್ಮಾ ಕನಸು ನನಸಾಗಲಿ ಅಂತಾ ಕೋಟ್ಯಂತರ ಭಾರತೀಯರು ಹಾರೈಸುತ್ತಿದ್ದಾರೆ. ಯಾಕಂದ್ರೆ ಮುಂದಿನ ಐಸಿಸಿ ಟೂರ್ನಿಯಲ್ಲಿ ರೋಹಿತ್ ಆಡೋದು ಅನುಮಾನ.