ಸ್ವಿಗ್ಗಿ ಬ್ಯಾಗ್ ಹೊತ್ತು 25 ಕಿ.ಮೀ ನಡಿಗೆ! – ಇದರ ಹಿಂದಿದೆ ಮನಮಿಡಿಯುವ ಕಥೆ
ಲಕ್ನೋ: ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರವಿದ್ರೂ ಕೂಡಾ ಬೇಗನೇ ಜನಸ್ಪಂದನೆ ಸಿಗುತ್ತೆ. ಸಾಕಷ್ಟು ಮನ ಮಿಡಿಯುವ ಕಥೆಗಳನ್ನೂ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಹಲವು ಬಾರಿ ಯಾವುದೋ ವಿಚಾರ, ಇನ್ಯಾವುದೋ ಅರ್ಥಗಳನ್ನು ಕೊಡುವ ಸಾಕಷ್ಟು ಘಟನೆಗಳು ನಡೆದಿವೆ. ಇದೀಗ ಇಂತಹದ್ದೇ ಒಂದು ಘಟನೆ ಜನರ ಮನ ಮುಟ್ಟಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಬುರ್ಖಾ ತೊಟ್ಟ ಮಹಿಳೆಯೊಬ್ಬಳು ಫುಡ್ ಡೆಲಿವರಿ ಸಂಸ್ಥೆಯ ಬ್ಯಾಗ್ ಧರಿಸಿ, ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿತ್ತು. ಇದೀಗ ಈ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.
ಇದನ್ನೂ ಓದಿ: ಮದ್ಯ ಖರೀದಿ ಹಾಗೂ ಮಾರಾಟದ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆ!
ರಿಜ್ವಾನ್ ಎನ್ನುವ ಮಹಿಳೆ ಸ್ವಿಗ್ಗಿ ಬ್ಯಾಗ್ ಧರಿಸಿ ನಡೆಯುತ್ತಿದ್ದ ಫೋಟೋ ಎಲ್ಲೆಡೆ ಹರಿದಾಡಿತ್ತು. ಅಲ್ಲದೇ ಈಕೆ ನಡೆದುಕೊಂಡು ಹೋಗಿ ಡೋರ್ ಡೆಲಿವರಿ ಮಾಡುತ್ತಿದ್ದಾಳೆ ಅನ್ನೋದೇ ದೊಡ್ಡ ಸುದ್ದಿಯಾಗಿತ್ತು. ಇದೀಗ ಆಕೆ ಫುಡ್ ಡೆಲಿವರಿ ಸಂಸ್ಥೆಯ ಏಜೆಂಟ್ ಅಲ್ಲ ಎಂಬುದು ತಿಳಿದುಬಂದಿದೆ. ಅದರೊಂದಿಗೆ ಆಕೆಯ ಕರುಣಾಜನಕ ಬದುಕಿನ ಕಥೆಯೂ ಹೊರಬಂದಿದೆ.
ರಿಜ್ವಾನ್ ಗಂಡನಿಂದ ಬೇರ್ಪಟ್ಟಿದ್ದಾಳೆ. ಆಕೆಗೆ ಮೂವರು ಮಕ್ಕಳಿದ್ದಾರೆ. ಆ ಮೂರು ಮಕ್ಕಳನ್ನು ಸಾಕುವ ಸಲುವಾಗಿ ಈ ಸ್ವಿಗ್ಗಿ ಬ್ಯಾಗ್ ಅನ್ನು ಹೆಗಲೇರಿಸಿಕೊಂಡು ನಿತ್ಯವು 25 ಕಿ.ಮೀ ನಡೆಯುತ್ತಿದ್ದಾಳೆ. ಪ್ರತಿನಿತ್ಯ ಈ ಸ್ವಿಗ್ಗಿ ಬ್ಯಾಗ್‌ನಲ್ಲಿ ಪೇಪರ್ ಕಪ್‌ಗಳನ್ನು ಇಟ್ಟುಕೊಂಡು, ರಸ್ತೆ ಬದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾಳೆ.
ರಿಜ್ವಾನ್ ಯಾಕೆ ಸ್ವಿಗ್ಗಿ ಬ್ಯಾಗ್ ಅನ್ನು ಹೊತ್ತುಕೊಂಡು ಹೋಗುತ್ತಾಳೆ ಅಂತ ಅನೇಕರಲ್ಲಿ ಪ್ರಶ್ನೆಯಿತ್ತು. ಇದೀಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ತಾನು ಪ್ರತಿನಿತ್ಯ 25 ಕಿ.ಮೀ ದೂರ ನಡೆಯುವುದರಿಂದ ಕಪ್‌ಗಳನ್ನು ಇಟ್ಟುಕೊಳ್ಳಲು ಗಟ್ಟಿ ಬ್ಯಾಗ್ ಬೇಕಿತ್ತು. ಈ ಕಾರಣ ಆಕೆ ಮಾರುಕಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಬಳಿ 50 ರೂ.ಗಳನ್ನು ಕೊಟ್ಟು ಸ್ವಿಗ್ಗಿ ಬ್ಯಾಗ್ ಖರೀದಿಸಿರುವುದಾಗಿ ತಿಳಿಸಿದ್ದಾರೆ.