ರೈಲು ದುರಂತಕ್ಕೆ ಮರುಗಿದ ಕ್ರಿಕೆಟಿಗರು – ಟ್ವೀಟ್ ಮೂಲಕ ನೊಂದ ಕುಟುಂಬಗಳಿಗೆ ಸಂತಾಪ

ರೈಲು ದುರಂತಕ್ಕೆ ಮರುಗಿದ ಕ್ರಿಕೆಟಿಗರು – ಟ್ವೀಟ್ ಮೂಲಕ ನೊಂದ ಕುಟುಂಬಗಳಿಗೆ ಸಂತಾಪ

ಒಡಿಶಾದಲ್ಲಿ ನಡೆದ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.  ದುರಂತದ ತೀವ್ರತೆಗೆ ಟೀಂ ಇಂಡಿಯಾ ಆಟಗಾರರು ಕೂಡಾ ಸಂತಾಪ ಸೂಚಿಸಿದ್ದಾರೆ. ರೈಲು ದುರಂತದಲ್ಲಿ ಇದುವರೆಗೆ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 900ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಇಡೀ ದೇಶವೇ ಮರುಗುತ್ತಿದೆ. ಗಣ್ಯಾತಿಗಣ್ಯರು ಕೂಡಾ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. ಟೀಂ ಇಂಡಿಯಾ ಆಟಗಾರರು ಕೂಡಾ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ: ತುರ್ತು ಸಭೆ ನಡೆಸುತ್ತಿರುವ ಪ್ರಧಾನಿ – ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ

ಸದ್ಯ ಡಬ್ಲ್ಯುಟಿಸಿ ಫೈನಲ್‌ಗಾಗಿ ಇಂಗ್ಲೆಂಡ್ನಲ್ಲಿರುವ ವಿರಾಟ್ ಕೊಹ್ಲಿ, ಶನಿವಾರ ಈ ದುರಂತದ ಬಗ್ಗೆ ಟ್ವೀಟ್ ಮಾಡಿದ್ದು, ಒಡಿಶಾದಲ್ಲಿ ಸಂಭವಿಸಿರುವ ರೈಲು ಅಪಘಾತದ ಸುದ್ದಿ ಕೇಳಿ ಬೇಸರವಾಗಿದೆ. ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಇಡೀ ದೇಶ ಅವರ ಜೊತೆ ನಿಂತಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.

ಒಡಿಶಾ ರೈಲು ಅಪಘಾತದ ಬಗ್ಗೆ ತಿಳಿದು ತುಂಬಾ ನೋವಾಗಿದೆ. ಆದಷ್ಟು ಬೇಗ ಪ್ರಯಾಣಿಕರನ್ನು ರಕ್ಷಿಸುವಂತೆ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಒಡಿಶಾ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

suddiyaana