ಮನೆಯಲ್ಲಿ ಬೆಂಕಿಯ ರುದ್ರನರ್ತನ – ಬಾತ್‌ರೂಮ್‌ನಲ್ಲಿ ಅಡಗಿ ಕುಳಿತರೂ ಬದುಕಲಿಲ್ಲ ದಂಪತಿ..!

ಮನೆಯಲ್ಲಿ ಬೆಂಕಿಯ ರುದ್ರನರ್ತನ – ಬಾತ್‌ರೂಮ್‌ನಲ್ಲಿ ಅಡಗಿ ಕುಳಿತರೂ ಬದುಕಲಿಲ್ಲ ದಂಪತಿ..!

ಬಟ್ಟೆ ವ್ಯಾಪಾರಿಯೊಬ್ಬರ ಮನೆಯಲ್ಲಿ ಹೊತ್ತಿಕೊಂಡ ಬೆಂಕಿ  ಇಬ್ಬರ ಜೀವವನ್ನು ಬಲಿ ಪಡೆದುಕೊಂಡ ದಾರುಣ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ. ಸೈದಾಪುರ ಪಟ್ಟಣದಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ರಾಘವೇಂದ್ರ ಅಲಿಯಾಸ್ ರಾಗಯ್ಯ (39) ಹಾಗೂ ಅವರ ಪತ್ನಿ ಶಿಲ್ಪ (35) ಬೆಂಕಿಗೆ ಬಲಿಯಾದ ದುರ್ದೈವಿಗಳು. ಸೈದಾಪುರ ಪಟ್ಟಣದಲ್ಲಿ ಇವರದ್ದು ಮೂರು ಅಂತಸ್ತಿನ ಕಟ್ಟಡವಿದ್ದು, ನೆಲಮಟ್ಟದ ಅಂತಸ್ತು ಹಾಗೂ ಮೊದಲ ಮಹಡಿಯಲ್ಲಿ ಇವರು ವಾಸವಾಗಿದ್ದರು. ಕಟ್ಟಡದ ಮೂರನೇ ಅಂತಸ್ತಿನಲ್ಲಿ ಬಟ್ಟೆ ಅಂಗಡಿಯಿದೆ.

ಇದನ್ನೂ ಓದಿ:  ಶಾಸಕ ಸ್ಥಾನಕ್ಕೆ ಎಸ್.ಆರ್ ಶ್ರೀನಿವಾಸ್ ರಾಜೀನಾಮೆ – ಗುಬ್ಬಿ ಕ್ಷೇತ್ರದಲ್ಲಿ ‘ಕೈ’ಗೆ ಸಿಕ್ಕಿತು ಬಲ!

ಬಟ್ಟೆ ಅಂಗಡಿಯಿದ್ದ ಮಹಡಿಯಲ್ಲಿ ಸೋಮವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆಯ ದಾಸ್ತಾನು ಹೆಚ್ಚಾಗಿದ್ದರಿಂದ ಬೆಂಕಿಯ ತೀವ್ರತೆ ಜೋರಾಗಿದೆ. ಬೆಂಕಿ ಜ್ವಾಲೆಗಳು ಜೋರಾಗಿದ್ದರಿಂದ ಮಧ್ಯ ಅಂತಸ್ತಿನಲ್ಲಿದ್ದ ರಾಗಯ್ಯನವರ ಮನೆಗೆ ಆವರಿಸಿದೆ. ಬೆಳಗಿನ ಜಾವ ನಿದ್ರೆಯಲ್ಲಿದ್ದ ದಂಪತಿಗೆ ಬೆಂಕಿಯ ತೀವ್ರತೆ ಗೊತ್ತಾಗುವ ಮೊದಲೇ ಬೆಂಕಿ ಮನೆಯನ್ನು ಆವರಿಸಿಕೊಂಡು ಬಿಟ್ಟಿದೆ. ಗಾಬರಿಯಾದ ದಂಪತಿ ತಮ್ಮ ಜೀವ ಉಳಿಸಿಕೊಳ್ಳಲು ಬೆಡ್ ರೂಂಗೆ ಅಟ್ಯಾಚ್ ಆಗಿರುವ ಬಾತ್ ರೂಂಗೆ ಓಡಿದ್ದಾರೆ. ಮನೆಯ ತುಂಬಾ ದಟ್ಟ ಹೊಗೆ ಆವರಿಸಿದ ಹಿನ್ನೆಲೆಯಲ್ಲಿ, ಬಾತ್ ರೂಮಿನಲ್ಲಿರುವ ಪುಟ್ಟ ಕಿಟಕಿಯನ್ನು ತೆರೆದು ಉಸಿರಾಡಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆಗಳು ಬಾತ್ ರೂಂವರೆಗೂ ಆವರಿಸಿವೆ. ಅಷ್ಟರಲ್ಲಿ ಅವರಿಬ್ಬರೂ ಶೌಚಾಲಾಯದ ಸಿಂಕ್ ನ ಕೆಳಗೆ ಅವಿತಿಟ್ಟುಕೊಳ್ಳಲು ಯತ್ನಿಸಿದರೂ, ಬೆಂಕಿಯೂ ಪೂರ್ತಿ ಆವರಿಸಿದ್ದರಿಂದ ಇಬ್ಬರೂ ಅಲ್ಲೇ ಅರ್ದಂಭರ್ದ ಸುಟ್ಟು ಜೀವ ಬಿಟ್ಟಿದ್ದಾರೆ. ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅವರಿಬ್ಬರು, ರಾಗಯ್ಯನವರ ತಾಯಿಯೊಂದಿಗೆ ನೆಲ ಮಹಡಿಯಲ್ಲಿರುವ ಬೆಡ್ ರೂಂನಲ್ಲಿ ಮಲಗಿದ್ದರು. ಹಾಗಾಗಿ, ಅವರು ಬೆಂಕಿಯಿಂದ ಬಚಾವಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು, ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದರು. ಆದರೆ, ಬಟ್ಟೆಯ ದಾಸ್ತಾನಿನಿಂದಾಗಿ ಬೆಂಕಿಯ ಪ್ರಮಾಣ ಅತಿಯಾಗಿದ್ದರಿಂದಾಗಿ, ಅಷ್ಟು ಸುಲಭವಾಗಿ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಕೆಲ ಸಮಯದ ನಂತರ ಬೆಂಕಿಯು ನಿಯಂತ್ರಣಕ್ಕೆ ಬಂದಿತು. ಆಗ ಮನೆ ಪ್ರವೇಶಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಬಾತ್‌ರೂಮ್‌ನಲ್ಲಿ ದಂಪತಿ ಶವವಿರುವುದು ಗೊತ್ತಾಗಿದೆ. ಆನಂತರ, ಕ್ರೇನ್ ತರಿಸಿ, ಹೊರಗಡೆಯಿಂದ ಬೆಡ್ ರೂಮಿನ ಶೌಚಾಲಯದ ಗೋಡೆಯನ್ನು ಒಡೆದು ಗಂಡ, ಹೆಂಡತಿಯ ಶವವನ್ನು ಹೊರತಗೆಯಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನಲೆ ಈ ದುರಂತ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

suddiyaana