ಕೊಡಿ ಹಬ್ಬಕ್ಕೂ ತಟ್ಟಿದ ‘ಧರ್ಮ’ ಸಂಘರ್ಷ – ಉಪ್ಪುಂದ ಜಾತ್ರೆಯಲ್ಲೂ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ

ಕೊಡಿ ಹಬ್ಬಕ್ಕೂ ತಟ್ಟಿದ ‘ಧರ್ಮ’ ಸಂಘರ್ಷ – ಉಪ್ಪುಂದ ಜಾತ್ರೆಯಲ್ಲೂ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ

ಉಡುಪಿ : ಕಳೆದ ವರ್ಷದಿಂದಲೇ ಜಾತ್ರೆಗಳಲ್ಲಿ ಧರ್ಮ ಸಂಘರ್ಷದ ದಳ್ಳುರಿ ಶುರುವಾಗಿದ್ದು, ಈಗಲೂ ಜಾತ್ರೆಗಳುದ್ದಕ್ಕೂ ವ್ಯಾಪಿಸುತ್ತಿದೆ. ಈ ಬಾರಿ ಕೂಡಾ ಅದು ನಿಂತಿಲ್ಲ. ಮೊನ್ನೆ ಮೊನ್ನೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯ ಚಂಪಾ ಚಷ್ಠಿ ಉತ್ಸವದಲ್ಲಿ ಧರ್ಮಕ್ಕಾಗಿ ದಂಗಲ್ ಜೋರಾಗಿಯೇ ಸಾಗಿತ್ತು. ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ವಹಿವಾಟು ಬಹಿಷ್ಕರಿಸಲಾಗಿತ್ತು. ಇದೀಗ ಮತ್ತೆ ಕರಾವಳಿಯಲ್ಲಿ ಅದೇ ರಾಗ ಶುರುವಾಗಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಡಿ ಹಬ್ಬದಲ್ಲೂ ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಅನ್ನೋ ಮಾತು ಕೇಳಿಬರುತ್ತಿದೆ.  ಡಿಸೆಂಬರ್ 8ರಂದು ನಡೆಯಲಿರುವ ಐತಿಹಾಸಿಕ ಜಾತ್ರೆ ಕೊಡಿಹಬ್ಬಕ್ಕೆ ಮುಸ್ಲಿಂ ವ್ಯಾಪಾರಿಗಳು ಬಂದು ವ್ಯಾಪಾರ ವಹಿವಾಟು ನಡೆಸಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ :  ‘ಬಿಜೆಪಿ ಗೆದ್ದು ಬೀಗುವುದು ಖಚಿತ ‘- ಗುಜರಾತ್ ರಾಜ್ಯ ಸರ್ಕಾರದ ಆಡಳಿತವನ್ನು ಮೆಚ್ಚಿ ಜನ ವೋಟ್ ಹಾಕಿದ್ರಾ?

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಕೊಡಿ ಹಬ್ಬ, ಮತ್ತೊಂದು ಉಪ್ಪುಂದ ಜಾತ್ರೆ. ಈಗ ಎರಡೂ ಜಾತ್ರೆಗಳಿಗೂ ಧರ್ಮ ಸಂಘರ್ಷದ ಬಿಸಿ ಮುಟ್ಟಿದೆ. ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ತಮ್ಮ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಪತ್ರದ ಮೂಲಕವಾಗಿ ದೇಗುಲದ ಆಡಳಿತ ಮಂಡಳಿ ಬಳಿ ಮನವಿ ಸಲ್ಲಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಪೋಸ್ಟರ್‌ಗಳು ಹರಿದಾಡುತ್ತಿವೆ. ಇನ್ನು ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಆಡಳಿತ ಮಂಡಳಿಯೇ ಈ ತೀರ್ಮಾನ ಕೈಗೊಂಡಿದೆ. ಇಷ್ಟೇ ಅಲ್ಲದೇ, ಕಂಬಳ, ದೈವಾರಾಧನೆ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ಕೂಗು ಕೂಡಾ ಕೇಳಿಬರುತ್ತಿದೆ.

suddiyaana