ಸೋಲಿನ ಬಳಿಕ ಕರ್ನಾಟಕದತ್ತ ತಲೆ ಹಾಕದ ಬಿಜೆಪಿ ಹೈಕಮಾಂಡ್ – ವಿಪಕ್ಷನಾಯಕನ ಆಯ್ಕೆ ಇನ್ನೂ ಕಗ್ಗಂಟು

ಸೋಲಿನ ಬಳಿಕ ಕರ್ನಾಟಕದತ್ತ ತಲೆ ಹಾಕದ ಬಿಜೆಪಿ ಹೈಕಮಾಂಡ್ – ವಿಪಕ್ಷನಾಯಕನ ಆಯ್ಕೆ ಇನ್ನೂ ಕಗ್ಗಂಟು

ವಾರಗಳು ಉರುಳಿದ್ವು. ತಿಂಗಳೂ ಕಳೆದಾಯ್ತು. ಆದರೂ ಬಿಜೆಪಿಯಲ್ಲಿ ವಿಪಕ್ಷನಾಯಕನ ಆಯ್ಕೆ ವಿಚಾರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಆಗಿದೆ. ಸರ್ಕಾರ ರಚನೆಯಾಗಿ ತಿಂಗಳಾದ್ರೂ ಶಾಸಕಾಂಗ ಪಕ್ಷದ ನಾಯಕನನ್ನ ಈವರೆಗೂ ಆಯ್ಕೆ ಮಾಡಲು ಆಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋಲನ್ನಪ್ಪಿದ ಬಳಿಕ ಬಿಜೆಪಿ ಹೈಕಮಾಂಡ್ ಕೂಡ ಈ ಕಡೆ ಗಮನ ಹರಿಸುತ್ತಿಲ್ಲ. ರಾಜ್ಯ ನಾಯಕರನ್ನ ಕ್ಯಾರೇ ಅನ್ನುತ್ತಿಲ್ಲ.

ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಕಳ್ಳರು – ಸೇವಾಸಿಂಧು ಹೆಸರಲ್ಲಿ ಫೇಕ್ ಲಿಂಕ್ ಕಳಿಸಿ ಹಣ ಲೂಟಿ

ಈ ನಡುವೆ ಜುಲೈ 3 ರಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಜುಲೈ 7 ಕ್ಕೆ ಬಜೆಟ್ ಮಂಡನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ಆದರೆ ಸದನದಲ್ಲಿ ಆಡಳಿತ ಪಕ್ಷವನ್ನು ಎದುರಿಸಲು ಬಿಜೆಪಿ ಇನ್ನೂ ಸಿದ್ದಗೊಂಡಿಲ್ಲ. ಹೌದು, ವಿಪಕ್ಷ ನಾಯಕನ ಆಯ್ಕೆ ವಿಚಾರ ಇನ್ನೂ ಗೊಂದಲದ ಗೂಡಾಗಿ ಉಳಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತವನ್ನು ಗಳಿಸಿ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ವಿರುದ್ಧ ರಚನಾತ್ಮಕವಾದ ಹೋರಾಟವನ್ನು ರೂಪಿಸಬೇಕಾಗಿದೆ. ಸದನದ ಹೊರಗೂ ಒಳಗೂ ಕಾಂಗ್ರೆಸ್ ವಿರುದ್ಧ ಹೋರಾಟ ರೂಪಿಸಿ ಜನಾಭಿಪ್ರಾಯ ಮೂಡಿಸುವುದು ಬಿಜೆಪಿ ಮುಂದಿರುವ ಅಸ್ತ್ರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ವಿರೋಧ ಪಕ್ಷದ ನಾಯಕನ ಅಗತ್ಯವಿದೆ. ಹಾಗಾದರೆ ಈ ಜವಾಬ್ದಾರಿಯನ್ನು ಯಾರಿಗೆ ನೀಡಲಾಗುತ್ತದೆ ಎಂಬುವುದು ಸದ್ಯಕ್ಕೆ ಸಾಕಷ್ಟು ಕುತೂಹಲ ಕೆರಳಿಸಿದೆ.

ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಬಿಜೆಪಿಯಲ್ಲಿ ಇನ್ನೂ ಗೊಂದಲ ಮುಂದುವರಿದಿದ್ದು, ಈ ನಡುವೆ ಸಂಸದ ಪ್ರತಾಪ ಸಿಂಹ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಕೆಲವು ಹಿರಿಯ ಬಿಜೆಪಿ ನಾಯಕರ ವಿರುದ್ಧ ಮಾಡಿರುವ ಹೊಂದಾಣಿಕೆ ರಾಜಕಾರಣ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರತಾಪ ಸಿಂಹ ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧವೇ ಕೆಲವೊಂದು ಆರೋಪ ಹೊರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕನ ಹೊಣೆ ಯಾರ ಹೆಗಲಿಗೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ.

ವಿಪಕ್ಷ ನಾಯಕನ ರೇಸ್‌ನಲ್ಲಿ ಬಿಜೆಪಿಯ ಪ್ರಮುಖ ನಾಯಕರರ ಹೆಸರು ಚಾಲ್ತಿಯಲ್ಲಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟ ನೀಡಬೇಕು ಎಂಬ ಅಭಿಪ್ರಾಯ ಕೆಲವರಲ್ಲಿದೆ. ಆದರೆ, ಇದೀಗ ಹೊಂದಾಣಿಕೆ ರಾಜಕಾರಣದ ಬಗ್ಗೆ ಕೇಳಿ ಬಂದಿರುವ ಆರೋಪ ಬೊಮ್ಮಾಯಿಗೆ ಹಿನ್ನಡೆಯನ್ನು ಉಂಟು ಮಾಡಿದೆ. ಅವರ ಬದಲಾಗಿ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ, ಆರ್‌. ಅಶೋಕ್ ಹೆಸರು ಮುಂಚೂಣಿಯಲ್ಲಿದೆ. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲೂ ಈ ಆಯ್ಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಶಾಸಕರ ವೈಯಕ್ತಿಕ ಅಭಿಪ್ರಾಯವನ್ನು ಈ ಕುರಿತಾಗಿ ಪಡೆದುಕೊಂಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಶಾಸಕರ ಸಭೆಯಲ್ಲಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಇದನ್ನು ಹೈಕಮಾಂಡ್‌ಗೂ ತಲುಪಿಸಿದ್ದಾರೆ. ಸದ್ಯ ಹೈಕಮಾಂಡ್‌ ಕೂಡಾ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಜಾತಿ ಲೆಕ್ಕಾಚಾರ, ಶಾಸಕರ ಅಭಿಪ್ರಾಯ, ವೈಯಕ್ತಿಕ ವರ್ಚಸ್ಸು, ಸೈದ್ಧಾಂತಿಕ ನಿಲುವು ಎಲ್ಲವನ್ನು ಅವಲೋಕನ ಮಾಡಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ. ಸದ್ಯಕ್ಕೆ ಬಿಜೆಪಿ ಸೋಲಿನ ಬಳಿಕ ಹೈಕಮಾಂಡ್ ಕೂಡ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಷ್ಟೇನು ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲ.

suddiyaana