ಬಿಜೆಪಿಗೆ ಟಿಕೆಟ್ ಕಗ್ಗಂಟು – ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದೇ ಬಿಜೆಪಿಗೆ ಸವಾಲು

ಬಿಜೆಪಿಗೆ ಟಿಕೆಟ್ ಕಗ್ಗಂಟು – ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದೇ ಬಿಜೆಪಿಗೆ ಸವಾಲು

ಲೋಕಸಭಾ ಚುನಾವಣೆಗೆ ಈಗಾಗ್ಲೇ ಬಿಜೆಪಿ ಹೈಕಮಾಂಡ್ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಮೂಲಕ ಕ್ಷೇತ್ರಗಳಲ್ಲಿ ಈಗಿಂದಲೇ ಪ್ರಚಾರ ಶುರು ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದ್ರೆ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರಕ್ಕೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ. ಅದಕ್ಕೆ ಕಾರಣವೂ ಇದೆ. ಯಾಕಂದ್ರೆ ಒಂದೆರಡು ಕ್ಷೇತ್ರವನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಮತ್ತೊಂದೆಡೆ ಕೆಲವು ಹಾಲಿ ಸಂಸದರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಪಟ್ಟು ಹಿಡಿದು ಕೂತಿದ್ದಾರೆ. ಕಾರ್ಯಕರ್ತರು ಮತ್ತು  ಸ್ಥಳೀಯ ಮುಖಂಡರೇ ವಿರೋಧ ಮಾಡ್ತಿರೋದು ಬಿಜೆಪಿ ಹೈಕಮಾಂಡಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಎರಡನೇ ಪಟ್ಟಿಯಲ್ಲೂ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಪ್ರಕಟಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಹೆಗಡೆ ಹಳೇ ವರಸೆ – ಸಂಸದ ಅನಂತಕುಮಾರ್ ಹೆಗಡೆ ಸರ್ವಾಧಿಕಾರಿ ವರ್ತನೆ ಬಿಜೆಪಿಗೆ ಮುಜುಗರ

ಅನಂತ್ ಕುಮಾರ್ ಹೆಗಡೆ ಪ್ರತಿನಿಧಿಸುತ್ತಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು ಎಂದು ವಿರೋಧ ವ್ಯಕ್ತವಾಗಿದೆ. ಹಿಂದೂ ಫೈರ್ ಬ್ರ್ಯಾಂಡ್ ಎಂದು ಕರೆಸಿಕೊಳ್ಳುವ ಹೆಗಡೆ, ಸ್ವಪಕ್ಷೀಯರ ವಿರುದ್ಧವೇ ನಾಲಗೆ ಹರಿಬಿಡ್ತಾರೆ. ಹಾಗೇ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರ ಮಾತಿಗೆ ಬೆಲೆ ಕೊಡಲ್ಲ ಎಂಬ ಆರೋಪವಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿರುವ ಹಾಲೀ ಎಂಪಿ ನಳಿನ್ ಕುಮಾರ್ ಕಟೀಲ್ ಕೂಡ ಈ ಬಾರಿ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ವರ್ಷದ ಹಿಂದೆಯೇ ಇವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿತ್ತು. ಮೂಲಗಳ ಪ್ರಕಾರ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ ಇದೆ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿರುವ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಈಗಾಗ್ಲೇ ಗೋಬ್ಯಾಕ್ ಶೋಭಾ, ಪತ್ರ ಚಳುವಳಿ, ವಾಟ್ಸಾಪ್ ಸ್ಟೇಟಸ್, ಬೈಕ್ ರ‍್ಯಾಲಿ ಮುಂತಾದವು ನಡೆದಿವೆ. ಆದರೂ, ಯಡಿಯೂರಪ್ಪನವರ ಬೆಂಬಲ ಇರುವುದರಿಂದ ಕಾರ್ಯಕರ್ತರ ಆಕ್ರೋಶವನ್ನು ಮೀರಿ ಶೋಭಾಗೆ ಟಿಕೆಟ್ ನೀಡಿದರೂ ನೀಡಬಹುದು. ಇನ್ನು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಭಗವಂತ್ ಖೂಬಾ ಕಳೆದ ಎರಡು ಚುನಾವಣೆಯಲ್ಲಿ ಸತತವಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿ ಮತ್ತೆ ಅವರಿಗೆ ಟಿಕೆಟ್ ನೀಡಬಾರದು ಎನ್ನುವ ಕೂಗು ಜೋರಾಗುತ್ತಿದೆ. ಕೊಪ್ಪಳದಲ್ಲಿ 2014 ಮತ್ತು 2019ರ ಚುನಾವಣೆಯಲ್ಲಿ ಗೆದ್ದಿರುವ ಕರಡಿ ಸಂಗಣ್ಣಗೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಯಚೂರು ಕ್ಷೇತ್ರದಲ್ಲಿ ಅಮರೇಶ್ ನಾಯಕ್ ಮರು ಸ್ಪರ್ಧೆಗೂ ವಿರೋಧವಿದೆ. ಸ್ಥಳೀಯವಾಗಿ ಮತ್ತು ಜಿಲ್ಲಾ ವ್ಯಾಪ್ತಿಯ ಕೆಲವು ಅಸೆಂಬ್ಲಿ ಕ್ಷೇತ್ರದಲ್ಲಿ ಇವರ ಸ್ಪರ್ಧೆಗೆ ಪಕ್ಷದಲ್ಲೇ ಬೆಂಬಲ ಇಲ್ಲ. ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದ ನಂತರ ನಡೆದ ಮರುಚುನಾವಣೆಯಲ್ಲಿ ಗೆದ್ದಿದ್ದ ಮಂಗಳಾ ಪರವೂ ಈ ಬಾರಿ ಅಷ್ಟೇನು ಒಲವಿಲ್ಲ. ಹಾಗೇ ಬಳ್ಳಾರಿಯಲ್ಲಿ ಕಳೆದ ಐದು ಚುನಾವಣೆಯಲ್ಲಿ ನಾಲ್ಕು ಬಾರಿ ಬಿಜೆಪಿ ಗೆದ್ದಿತ್ತು. ಹಾಲೀ ಎಂಪಿ ವೈ.ದೇವೇಂದ್ರಪ್ಪ ಬಗ್ಗೆ ಕಾರ್ಯಕರ್ತರಲ್ಲಿ ಒಳ್ಳೆಯ ಮಾತುಗಳಿಲ್ಲ. ಹೀಗಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಇಲ್ಲಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಕೆಲವೇ ಕೆಲ ಕ್ಷೇತ್ರಗಳನ್ನ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಮೂರರಿಂದ ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ನಾಯಕರು ಕೂಡ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಮಂಡ್ಯ ಕ್ಷೇತ್ರ ಕೂಡ ಈ ಬಾರಿಗೆ ಬಿಜೆಪಿಗೆ ಕಗ್ಗಂಟಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಕ್ಷೇತ್ರದಲ್ಲಿ ಯಾರನ್ನ ಕಣಕ್ಕಿಳಿಸಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್ ಟಿಕೆಟ್ ತಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅಳೆದು ತೂಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಸವಾಲು ಬಿಜೆಪಿ ಹೈಕಮಾಂಡ್ ಮೇಲಿದೆ.

 

Sulekha