ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣ – ಇನ್ನುಮುಂದೆ ವಿಮಾನ ನಿಲ್ದಾಣ ಮಾದರಿಯಲ್ಲಿ ಸಂಸತ್‌ನಲ್ಲಿ ತಪಾಸಣೆ!

ಕಳೆದ ಡಿಸೆಂಬರ್‌ನಲ್ಲಿ ಸಂಸತ್‌ನಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಮೈಸೂರಿನ ಮನೋರಂಜನ್ ಸೇರಿದಂತೆ ಐವರು ವ್ಯಕ್ತಿಗಳು ಸಂಸತ್ತಿನಲ್ಲಿ ಹೊಗೆ ಬಾಂಬ್ ಸ್ಟೋಟಿಸಿದ್ದರು. ಈ ಪ್ರಕರಣದ ಬಳಿಕ ಭದ್ರತಾ ಪಡೆ ಎಚ್ಚೆತ್ತುಕೊಂಡಿದೆ. ಇನ್ನುಮುಂದೆ ವಿಮಾನ ನಿಲ್ದಾಣ ಮಾದರಿಯಲ್ಲಿ ಸಂಸತ್‌ನಲ್ಲಿ ತಪಾಸಣೆ ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕಣ್ಣನ್ ಅವರ ವೇತನ ವಾಪಸ್ ಪಡೆಯುವ ಕೇಸ್‌ಗೆ ಬಿಗ್ ಟ್ವಿಸ್ಟ್! – ತಹಶೀಲ್ದಾರ್ ಸಂಕಷ್ಟ!
ಸಂಸತ್ತಿನಲ್ಲಿ ನಡೆದ ಹೊಗೆ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಸಂಸತ್‌ನ ಭದ್ರತೆ ಹೊಣೆ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, 140 ಮಂದಿ ಯೋಧರ ತಂಡವನ್ನು ರಕ್ಷಣೆಗಾಗಿ ನೇಮಕ ಮಾಡಿದೆ. ಜ.31ರಿಂದ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಿಂದಲೇ ವಿಮಾನ ನಿಲ್ದಾಣದ ರೀತಿಯ ಭದ್ರತೆ ಆರಂಭವಾಗಲಿದ್ದು, ಸಂದರ್ಶಕರ ಬಾಡಿ ಫ್ರಿಸ್ಕಿಂಗ್, ಬ್ಯಾಗ್‌ಗಳ ತಪಾಸಣೆ ಕಾರ್ಯ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಮತ್ತು ಹಳೆಯ ಸಂಸತ್ ಭವನಗಳನ್ನು ಸಿಐಎಸ್‌ಎಫ್ ಪಡೆ ಸುಪರ್ದಿಗೆ ತೆಗೆದುಕೊಂಡಿದೆ. ಎಕ್ಸ್‌ರೇ ಯಂತ್ರಗಳನ್ನು ಬಳಸಿ ತಪಾಸಣೆ ನಡೆಸುವ ಕಾರ್ಯ ಆರಂಭಿಸಲಿದೆ. ಜೊತೆಗೆ ಸಂದರ್ಶಕರ ಶೂಗಳು, ಪರ್ಸ್, ಜಾಕೆಟ್‌ಗಳು, ಬೆಲ್ಟ್‌ಗಳನ್ನು ಪ್ರತ್ಯೇಕವಾದ ಟ್ರೇನಲ್ಲಿಟ್ಟು ಸ್ಕ್ಯಾನ್ ಮಾಡಲಾಗುತ್ತದೆ.
ಕಳೆದ ವರ್ಷ ಡಿ.13ರಂದು ಸಂಸತ್ ಭವನದಲ್ಲಿ ನಡೆದ ಭದ್ರತಾಲೋಪದ ಬಳಿಕ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಸತ್ ಭವನದ ರಕ್ಷಣೆಯ ಹೊಣೆಯನ್ನು ಸಿಐಎಸ್‌ಎಫ್‌ಗೆ ವಹಿಸಿತ್ತು. ಕೇಂದ್ರ ಗೃಹ ಸಚಿವಾಲಯದಡಿ ಕೆಲಸ ನಿರ್ವಹಿಸುವ ಸಿಐಎಸ್‌ಎಫ್‌ನಲ್ಲಿ 1.7 ಲಕ್ಷ ಮಂದಿ ಸಿಬ್ಬಂದಿಯಿದ್ದು, ಇವರು 68 ವಿಮಾನ ನಿಲ್ದಾಣಗಳು, ಅಣು ವಿದ್ಯುತ್ ಸ್ಥಾವರಗಳು ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ರಕ್ಷಣೆ ಒದಗಿಸುತ್ತಿದೆ.