ಕತ್ತೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! – ಕತ್ತೆ ಏರಿ ಬರಲು ಕಾರಣವೇನು ಗೊತ್ತಾ?

ಕತ್ತೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! – ಕತ್ತೆ ಏರಿ ಬರಲು ಕಾರಣವೇನು ಗೊತ್ತಾ?

ಪಂಚರಾಜ್ಯಗಳ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ಅಭ್ಯರ್ಥಿಗಳು ಸರ್ಕಸ್‌ ಮಾಡುತ್ತಿದ್ದಾರೆ. ಇದೀಗ ಮಧ್ಯಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಲು ಬಂದಿದ್ದು ಭಾರಿ ಸುದ್ದಿಯಾಗಿದ್ದಾರೆ.

ಚುನಾವಣೆ ವೇಳೆ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಹಿಂದೆ ಒಂದು ದೊಡ್ಡ ಜನ ಸಮೂಹವೇ ಇರುತ್ತದೆ. ಜೈಕಾರಗಳನ್ನು ಕೂಗುತ್ತಾ ತಮ್ಮ ನಾಯಕನನ್ನು ಹುರಿದುಂಬಿಸುವುದನ್ನು ನೋಡಿದ್ದೇವೆ. ಅಲ್ಲದೆ, ನಾಮಪತ್ರ ಸಲ್ಲಿಸುವ ವೇಳೆ ಸಾಕಷ್ಟು ಜನರನ್ನು ಸೇರಿಸಿ, ಶಕ್ತಿ ಪ್ರದರ್ಶನ ಮಾಡುವ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಕತ್ತೆಯ ಮೇಲೆ ಬಂದು ನಾಮಪತ್ರ ಸಲ್ಲಿಸಲು ಬರುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ:ತಿಮ್ಮಪ್ಪನ ಭಕ್ತರಿಗೆ ಮತ್ತೆ ಕರಡಿ, ಚಿರತೆ ಕಾಟ! – ಗುಂಪು ಗುಂಪಾಗಿ ತೆರಳಲು ಟಿಟಿಡಿ ಮನವಿ 

ಮಧ್ಯಪ್ರದೇಶದ ಬುರ್ಹಾನ್​​ಪುರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಿಯಾಂಕ್​ ಸಿಂಗ್​ ಠಾಕೂರ್​ ಅವರು ಕತ್ತೆಯ ಮೇಲೆ ಬಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ತಹಸೀಲ್ದಾರ್​ ಕಚೇರಿ ಮುಂದೆ ಕತ್ತೆಯ ಮೇಲೆ ಕುಳಿತು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್​, ಜನರನ್ನು ಕತ್ತೆಯ ರೀತಿ ನಡೆಸಿಕೊಳ್ಳುತ್ತಿರುವ ರಾಜಕಾರಣಿಗಳ ವಿರುದ್ಧ ಈ ರೀತಿಯಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಹೇಳಿದರು.

ಬುರ್ಹಾನ್‌ಪುರ ಕ್ಷೇತ್ರದಲ್ಲಿ ಕೇವಲ ಎರಡು ಅಥವಾ ಮೂರು ಕುಟುಂಬಗಳು ಮಾತ್ರ ಎಲ್ಲವನ್ನು ನಿರ್ಧರಿಸುತ್ತವೆ. ಅವರುಗಳ ಮನೆಯಲ್ಲಿ ಮಾತ್ರ ಅಭಿವೃದ್ಧಿ ನಡೆದಾಗ ಜನರು ಮೂರ್ಖರಾಗುತ್ತಿದ್ದಾರೆ ಎಂದು ಪ್ರಿಯಾಂಕ್ ಸಿಂಗ್ ಠಾಕೂರ್ ಆರೋಪಿಸಿದ್ದಾರೆ. ಬುರ್ಹಾನ್‌ಪುರದಿಂದ ಸ್ಪರ್ಧಿಸಲು ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಕೋರಿದ್ದರೂ, ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಕತ್ತೆಯ ಚಿಹ್ನೆಯಡಿ ಸ್ಪರ್ಧಿಸಲು ಚುನಾವಣಾ ಆಯೋಗದಿಂದ ಅನುಮತಿ ಕೇಳಲಾಗಿತ್ತಾದರೂ ಅದು ಲಭ್ಯವಾಗಿಲ್ಲ ಎಂದು ಪ್ರಿಯಾಂಕ್​ ಅವರು ಹೇಳಿದರು. ನನಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿರುವುದು ಬಿಜೆಪಿಯ ತಪ್ಪು ನಿರ್ಧಾರ. ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿಯನ್ನು ಬೆಂಬಲಿಸುತ್ತೇನೆ. ನನ್ನ ಪ್ರಚಾರ ಶೈಲಿಯೂ ವಿಭಿನ್ನವಾಗಿರುತ್ತದೆ ಎಂದು ಪ್ರಿಯಾಂಕ್ ಸಿಂಗ್ ಠಾಕೂರ್ ಹೇಳಿದ್ದಾರೆ.

Shwetha M