ಚೋಕರ್ಸ್ ಹಣೆಪಟ್ಟಿಯಿಂದ ಹೊರ ಬಾರದ ಸೌತ್ ಆಫ್ರಿಕಾ – ನಾಕೌಟ್ ನಲ್ಲೇ ಅದೆಷ್ಟು ಸಲ ಸೋಲು?

ಮಾರ್ಚ್ 5ರಂದು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ನಲ್ಲಿ ಸೌತ್ ಆಫ್ರಿಕಾ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲೋ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ. ಕಿವೀಸ್ ಪಡೆ ನೀಡಿದ್ದ 362 ರನ್ಗಳ ಬೃಹತ್ ಟಾರ್ಗೆಟ್ ರೀಚ್ ಆಗೋಕೆ ಆಗದೆ 50 ರನ್ಗಳ ಅಂತರದಲ್ಲಿ ಸೋಲೊಪ್ಪಿಕೊಳ್ತು. ಈ ಸೋಲಿನೊಂದಿಗೆ ಸೌತ್ ಆಫ್ರಿಕಾ ತಂಡಕ್ಕೆ ಮತ್ತೊಮ್ಮೆ ಚೋಕರ್ಸ್ ಅನ್ನೋ ಟ್ಯಾಗ್ಲೈನ್ ಅಂಟಿಕೊಂಡಿದೆ. ಅದಕ್ಕೆ ಕಾರಣ ಬ್ಯಾಡ್ಲಕ್. ಸೌತ್ ಆಫ್ರಿಕಾ ಬಲಿಷ್ಠ ತಂಡವೇ ಆಗಿದ್ರೂ ಕೂಡ ಐಸಿಸಿ ಟೂರ್ನಿಗಳಲ್ಲಿ ಸಾಕಷ್ಟು ಸಲ ನಾಕೌಟ್ ಸುತ್ತುಗಳಲ್ಲಿ ಸೋತು ಪ್ರಶಸ್ತಿ ವಂಚಿತವಾಗಿದೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾಗೆ ಚೋಕರ್ಸ್ ಹಣೆಪಟ್ಟಿ ಹಚ್ಚಲಾಗಿದೆ. ಈ ಸಲವೂ ಕೂಡ ಅದೇ ರಿಪೀಟ್ ಆಗಿದೆ. ಹೀಗಾಗೇ ಸೋಶಿಯಲ್ ಮೀಡಿಯಾ ಬಳಕೆದಾರರು ಸೌತ್ ಆಫ್ರಿಕಾ ಚೋಕರ್ ಅಂತಾ ಪೋಸ್ಟ್ ಗಳನ್ನ ಹಾಕ್ತಿದ್ದಾರೆ.
ಇದನ್ನೂ ಓದಿ : 2023ರ ಸೇಡು ತೀರಿಸುತ್ತಾ ಭಾರತ? – ಆಸಿಸ್ ನ ಈ ಮೂವರೇ ಡೇಂಜರಸ್
ಕ್ರಿಕೆಟ್ ಜಗತ್ತಿನಲ್ಲಿ ಸೌತ್ ಆಫ್ರಿಕಾ ಕೂಡ ಬಲಿಷ್ಠ ತಂಡ. 1992 ರಲ್ಲಿ ಈ ದೇಶವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿತ್ತು. ಬೇರೆ ಬೇರೆ ಟೀಮ್ಗಳಂತೆ ಇವ್ರೂ ಕೂಡ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ. ಅದಾಗ್ಯೂ ಅಲನ್ ಡೊನಾಲ್ಡ್, ಲ್ಯಾನ್ಸ್ ಕ್ಲೂಸ್ನರ್, ಎಬಿ ಡಿವಿಲಿಯರ್ಸ್, ಜಾಕ್ವೆಸ್ ಕಾಲಿಸ್ ಮತ್ತು ಡೇಲ್ ಸ್ಟೇನ್ ಅವರಂತಹ ವಿಶ್ವ ದರ್ಜೆಯ ಆಟಗಾರರನ್ನೂ ಕ್ರಿಕೆಟ್ ಜಗತ್ತಿಗೆ ನೀಡಿದೆ. ಇಷ್ಟಿದ್ರೂ ಈ ತಂಡದ ಜೊತೆ ಜೊತೆಗೆ ಚೋಕರ್ಸ್ ಅನ್ನೋ ಟ್ಯಾಗ್ಲೈನ್ ಕೂಡ ಬರ್ತಾನೇ ಇದೆ. ಅದಕ್ಕೆ ಕಾರಣ ದಕ್ಷಿಣ ಆಫ್ರಿಕಾ ದೊಡ್ಡ ದೊಡ್ಡ ಟ್ರೋಫಿಗಳನ್ನು ಗೆಲ್ಲೋಕೆ ಆಗದೇ ಇರೋದು. ಇಲ್ಲಿಯವರೆಗೆ ಸೌತ್ ಆಫ್ರಿಕಾ ಪಡೆ 1998 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನ ಗೆದ್ದಿತ್ತು. ಅದೊಂದೇ ಅವ್ರ ಐಸಿಸಿ ಟೂರ್ನಿಯಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ನಾಕೌಟ್ ಹಂತದಲ್ಲೇ ಪದೇಪದೆ ಎಡವುತ್ತಾರೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾವನ್ನು ‘ಚೋಕರ್ಸ್’ ಎಂದು ಕರೆಯಲಾಗುತ್ತೆ. ಕೆಲವು ಸಲ ಲಕ್ ಕೈಕೊಟ್ರೆ ಇನ್ನೂ ಕೆಲವು ಸಲ ಅವ್ರದ್ದೇ ವೈಫಲ್ಯಗಳು ಸೋಲಿಗೆ ಕಾರಣವಾಗಿದೆ.
ಚೋಕರ್ಸ್ ಸೌತ್ ಆಫ್ರಿಕಾ!
1992 ರ ವಿಶ್ವಕಪ್ – ಸೆಮಿಫೈನಲ್ ನಿಂದ ನಿರ್ಗಮನ
1999ರ ವಿಶ್ವಕಪ್ – ಸೆಮಿಫೈನಲ್ ನಿರ್ಗಮನ
2011ರ ವಿಶ್ವಕಪ್ – ಕ್ವಾರ್ಟರ್ ಫೈನಲ್ ನಿರ್ಗಮನ
2015ರ ವಿಶ್ವಕಪ್ – ಸೆಮಿಫೈನಲ್ ನಿರ್ಗಮನ
2023ರ ವಿಶ್ವಕಪ್ – ಸೆಮಿಫೈನಲ್ ನಿರ್ಗಮನ
2024ರ ಟಿ20 ವಿಶ್ವಕಪ್ : ಫೈನಲ್ ನಲ್ಲಿ ಸೋಲು
2025ರ ಚಾಂಪಿಯನ್ಸ್ ಟ್ರೋಫಿ – ಸೆಮಿಫೈನಲ್ ನಿರ್ಗಮನ
1992 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ಸೆಮಿಫೈನಲ್ ಪಂದ್ಯವನ್ನ ಆಡಿತ್ತು. ಮಳೆ ಕಾರಣದಿಂದ 45 ಓವರ್ಗಳಿಗೆ ಪಂದ್ಯವನ್ನ ಇಳಿಸಲಾಗಿತ್ತು. ಫಸ್ಟ್ ಬ್ಯಾಟ್ ಮಾಡಿದ ಇಂಗ್ಲೆಂಡ್ 45 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 252 ರನ್ ಕಲೆ ಹಾಕಿತ್ತು. ಮಳೆ ಕಾಟದ ನಡುವೆ ಟಾರ್ಗೆಟ್ ಕಡಿಮೆ ಮಾಡಿದರೂ ಸೌತ್ ಆಫ್ರಿಕಾ 232 ರನ್ ಗಳಿಸಿ ಟೂರ್ನಿಯಿಂದ ಹೊರಬೀಳಬೇಕಾಯ್ತು. ಇನ್ನು 1999ರ ವಿಶ್ವಕಪ್ನಲ್ಲೂ ಇದೇ ಆಯ್ತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು 213 ರನ್ಗಳಿಗೆ ಆಲೌಟ್ ಆಗೋ ಮೂಲಕ ಮ್ಯಾಚ್ ಟೈ ಆಗಿತ್ತು. ಈ ವೇಳೆ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಲೀಡ್ ಸಾಧಿಸಿದ್ದರಿಂದ ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬೀಳಬೇಕಾಯ್ತು. 2011 ರ ವಿಶ್ವಕಪ್ ಪಂದ್ಯಾವಳಿಯು ಹರಿಣಗಳ ಪಡೆಗೆ ಆಘಾತ ನೀಡಿತ್ತು. ನ್ಯೂಜಿಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ತವರಿಗೆ ವಿಮಾನ ಹತ್ತಿದ್ರು. ಇನ್ನು 2015ರ ವಿಶ್ವಕಪ್ನ ಸೆಮಿಫೈನಲ್ನಲ್ಲೂ ಇದೇ ಆಯ್ತು. ಮತ್ತೆ ನ್ಯೂಜಿಲೆಂಡ್ ವಿರುದ್ಧ ಸೋಲಬೇಕಾಯ್ತು. 2023ರ ವಿಶ್ವಕಪ್ನಲ್ಲೂ ಇದೇ ಗೋಳು. ಭಾರತದಲ್ಲೇ ನಡೆದಿದ್ದ ಈ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಿತ್ತು. ಆದ್ರೆ ಸೆಮಿಫೈನಲ್‌ನಲ್ಲಿ ಎದುರಾದ ಆಸ್ಟ್ರೇಲಿಯಾ ಆಘಾತ ನೀಡಿತು. ಮೊದಲು ಬ್ಯಾಟ್ ಮಾಡಿದ್ದ ಸೌತ್ ಆಫ್ರಿಕಾ 212 ರನ್ಗಳಿಗೆ ಆಲೌಟ್ ಆಗಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 47 ಓವರ್ಗಳಲ್ಲೇ 215 ರನ್ ಗಳಿಸಿ ಗೆದ್ದು ಬೀಗಿತು. ಇನ್ನು 2024ರ ಟಿ-20 ವಿಶ್ವಕಪ್ ಫೈನಲ್ ಸೋಲನ್ನ ಮರೆಯೋಕೆ ಸಾಧ್ಯನೇ ಇಲ್ಲ. ದಕ್ಷಿಣ ಆಫ್ರಿಕಾ ಕಳೆದ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ 2024 ರ ಫೈನಲ್ ತಲುಪಿತು. ಹಾಗೇ ಭಾರತದ ವಿರುದ್ಧ ಪೈಪೋಟಿ ನಡೆಸಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ 176 ರನ್ ಕಲೆ ಹಾಕಿತ್ತು. ಚೇಸಿಂಗ್ ಗೆ ಇಳಿದ ಸೌತ್ ಆಫ್ರಿಕಾ 20 ಓವರ್ಗಳಲ್ಲಿ 169 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಅಂತಿಮವಾಗಿ ಭಾರತ 7 ರನ್ಗಳಿಂದ ಗೆದ್ದು ಬೀಗಿತ್ತು. ಇದೀಗ 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಮತ್ತೊಮ್ಮೆ ಹಾರ್ಟ್ ಬ್ರೇಕ್ ಆಗಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿ ಸೆಮೀಸ್ಗೆ ಸೆಲೆಕ್ಟ್ ಆಗಿದ್ದ ಸೌತ್ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಸೋಲಬೇಕಾಯ್ತು .
ಹೀಗೆ ಐಸಿಸಿ ಟೂರ್ನಮೆಂಟ್ಸ್ ಅಂತಾ ಬಂದಾಗ ಸೌತ್ ಆಫ್ರಿಕಾ ಗೆದ್ದಿದ್ದಕ್ಕಿಂದ ಸೋತಿದ್ದೇ ಹೆಚ್ಚು. ಸೌತ್ ಆಫ್ರಿಕಾ 1998ರಲ್ಲಿ ಒಂದು ಸಲ ಮಾತ್ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಐಸಿಸಿ ಟೂರ್ನಿಗಳನ್ನ ಗೆದ್ದಿಲ್ಲ. ಇದೀಗ ಇದೇ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಸೆಲೆಕ್ಟ್ ಆಗಿದೆ.