ಅಯ್ಯಪ್ಪ ಮಾಲಾಧಾರಿಗಳ ಬಸ್ ಅಡ್ಡಗಟ್ಟಿದ ಒಂಟಿ ಸಲಗ! – ಆಮೇಲೆ ನಡೆದಿದ್ದು ಅಚ್ಚರಿ ಘಟನೆ!

ಕಾಡಿನ ರಸ್ತೆ ಮಧ್ಯೆ ಹೋಗುವಾಗ ಕಾಡು ಪ್ರಾಣಿಗಳು ರಸ್ತೆಯಲ್ಲಿ ಆಗಾಗ ಕಾಣಸಿಗುತ್ತವೆ. ಕೆಲವೊಂದು ಪ್ರಾಣಿಗಳು ವಾಹನಗಳ ಮೇಲೆ ದಾಳಿ ಮಾಡಿದ್ರೆ ಇನ್ನು ಕೆಲವು ಪ್ರಾಣಿಗಳು ಆಹಾರ ಸಿಕ್ಕ ಕೂಡಲೇ ಹೊರಡು ಹೋಗುತ್ತವೆ. ಇನ್ನೂ ಕೆಲವು ಪ್ರಾಣಿಗಳು ರಸ್ತೆಯಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಸತಾಯಿಸುತ್ತವೆ. ಇದೀಗ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಅಯ್ಯಪ್ಪ ಮಾಲಾಧಾರಿಗಳು ತೆರಳುತ್ತಿರುವ ವಾಹನವನ್ನು ಆನೆಯೊಂದು ಅಡ್ಡಗಟ್ಟಿದೆ. ಬಳಿಕ ವಾಹನದಲ್ಲಿದ್ದ ಹೂವಿನ ಹಾರಗಳನ್ನು ತನ್ನ ತಲೆಮೇಲೆ ಹಾಕಿಕೊಂಡು ಅಲ್ಲಿಂದ ಹೊರಟು ಹೋಗಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಕಾಡಾನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭ – ಕಾಡಾನೆಗಳನ್ನು ಹೆಡೆಮುರಿ ಕಟ್ಟಲು ಅಭಿಮನ್ಯು ಎಂಟ್ರಿ!
ಈ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ. ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅಯ್ಯಪ್ಪ ಮಾಲಾಧಾರಿಗಳ ಮಿನಿ ಬಸ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಒಂಟಿ ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರನ್ನ ತಡೆದಿದೆ. ಇನ್ನೂ ಆಶ್ಚರ್ಯ ಏನಂದ್ರೆ ದಾಳಿ ಮಾಡಲು ಬಂದ ಕಾಡಾನೆ ಮಿನಿ ಬಸ್ಗೆ ಹಾಕಲಾಗಿದ್ದ ಹೂವಿನ ಹಾರಗಳನ್ನ ಕಿತ್ತುಕೊಂಡು ತಲೆ ಮೇಲೆ ಹಾಕಿಕೊಂಡು ಹೋಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಬಸ್ ತಿತಿಮತಿ ದೇವಸ್ಥಾನ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಎದುರಾದ ಕಾಡಾನೆ ಬಸ್ ಬಳಿಗೆ ಬಂದಿದೆ. ಬಸ್ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಮಂತ್ರ ಜಪಿಸಿದ್ದಾರೆ. ಬಳಿಕ ಕಾಡಾನೆಗೆ ಅದು ಏನಾಯ್ತೋ ಗೊತ್ತಿಲ್ಲ. ಬಸ್ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ಹೂವಿನ ಹಾರಗಳನ್ನು ತಲೆ ಮೇಲೆ ಹಾಕಿಕೊಂಡ ಆನೆ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ಸುಮ್ಮನೆ ಹೊರಟಿದೆ.
ಆನೆ ಬರುತ್ತಿದ್ದಂತೆ ಬಸ್ನಲ್ಲಿದ್ದ 25 ರಿಂದ 30 ಮಾಲಾಧಾರಿಗಳು ಭಯಭೀತರಾಗಿದ್ದರು. ಸದ್ಯ ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ಅಯ್ಯಪ್ಪನ ಭಕ್ತರು, ಇದೆಲ್ಲಾ ಸ್ವಾಮಿ ಅಯ್ಯಪ್ಪನ ಮಹಿಮೆ ಎಂದು ಕೊಂಡಾಡಿದ್ದಾರೆ.