ನಾಲ್ಕು ಗಂಟೆ ಕಾದರೂ ನಿಲ್ಲಿಸದ ಬಸ್! – ಕಾದು ಕಾದು ಸುಸ್ತಾಗಿ ಬಸ್‌ಗೆ ಕಲ್ಲೆಸೆದ ಮಹಿಳೆ
ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ, ಕೆಲವು ಭಾಗಗಳಲ್ಲಿ ಅನುಕೂಲಕ್ಕಿಂತ ಹೆಚ್ಚಾಗಿ ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇಲ್ಲೊಬ್ಬರು ಮಹಿಳೆ ತನ್ನೂರಿಗೆ ತೆರಳಲು ಬಸ್ ಗಾಗಿ ಗಂಟೆಗಟ್ಟಲೆ ಕಾದಿದ್ದಾಳೆ. ನಾಲ್ಕು ಗಂಟೆ ಕಾದರೂ ಊರಿಗೆ ತೆರಳಲು ಯಾವ ಬಸ್‌ಗಳು ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಬಸ್ ಮೇಲೆ ಕಲ್ಲೆಸೆದಿದ್ದಾಳೆ.
ಆಗಿದ್ದೇನು?
ಕೊಪ್ಪಳ ತಾಲೂಕಿನ ಮುನಿರಾಬಾದ್ ಎಂಬಲ್ಲಿ ಲಕ್ಷ್ಮೀ ಎಂಬ ಮಹಿಳೆ ತನ್ನ ಊರಿಗೆ ತೆರಳಲು ಸುಮಾರು 4 ಗಂಟೆಗಳ ಕಾಲ ಕಾದಿದ್ದಾಳೆ. ಆದರೆ ಯಾವೊಂದು ಬಸ್ ಕೂಡ ನಿಲ್ಲಿಸಿಲ್ಲ. ಕಾದು ಕಾದು ಬೇಜಾರಾಗಿದ್ದ ಆಕೆ ಕೊಪ್ಪಳದಿಂದ – ಹೊಸಪೇಟೆಗೆ ಹೊರಟಿದ್ದ ನಾನ್‌ಸ್ಟಾಪ್ ಬಸ್‌ಗೆ ಕಲ್ಲೆಸೆದಿದ್ದಾಳೆ. ಇದರಿಂದಾಗಿ ಬಸ್ ಗಾಜು ಪುಡಿಪುಡಿಯಾಗಿತ್ತು. ಬಸ್ ಗೆ ಏಕೆ ಕಲ್ಲು ಹೊಡೆದೆ ಎಂದು ಬಸ್ಸಿನ ಚಾಲಕ ಮತ್ತು ನಿರ್ವಾಹಕ ಕೇಳಿದ್ದಕ್ಕೆ, ಯಾವ ಬಸ್ಸು ನಿಲ್ಲಿಸದಿದ್ದರೆ ನಾವು ಪ್ರಯಾಣ ಮಾಡುವುದು ಹೇಗೆ ಎಂದು ಮಹಿಳೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಮಹಿಳೆ ಕಲ್ಲು ಎಸೆದ ಸಿಟ್ಟಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಪ್ಯಾಸೆಂಜರ್ ಸಮೇತ ಬಸ್ ಅನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ತಂದಿದ್ದರು.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಹೆಚ್ಚಾದ ಮಹಿಳಾ ಭಕ್ತರು – ರಾಜ್ಯದ ದೇಗುಲಗಳಲ್ಲಿ ಹೆಚ್ಚಾದ ಹುಂಡಿ ಸಂಗ್ರಹ
ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಬಸ್ ಡ್ಯಾಮೇಜ್ ಆಗಿದ್ದರಿಂದ 5,000 ರೂ. ದಂಡ ನೀಡಬೇಕೆಂದು ಬಸ್ ಡಿಪೋ ಮ್ಯಾನೇಜರ್ ಕೇಳಿದ್ದಾರೆ. ಒಂದು ವೇಳೆ ದಂಡ ಕಟ್ಟದೇ ಇದ್ದರೆ ಪ್ರಕರಣ ದಾಖಲಿಸುವುದಾಗಿ ಲಕ್ಷ್ಮೀ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟೊತ್ತಿಗೆ ಕೋಪ ಶಮನವಾಗಿದ್ದರಿಂದ ಕ್ಷಮೆ ಕೇಳಿದ ಲಕ್ಷ್ಮೀ ಪೊಲೀಸರಿಗೆ ಮನವಿ ಮಾಡಿ 5,000 ರೂ. ದಂಡ ಪಾವತಿಸಿದ್ದಾಳೆ. ಬಳಿಕ ಅದೇ ಬಸ್ ನಲ್ಲಿ ತನ್ನೂರಿಗೆ ಪ್ರಯಾಣಿಸಿದ್ದಾಳೆ.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿರುವುದು ಒಂದುಕಡೆ, ಇನ್ನೊಂದು ಕಡೆ ವಿದ್ಯಾರ್ಥಿಗಳಿಗೆ, ಕಚೇರಿಗೆ ತೆರಳುವವರಿಗೆ ತೊಂದರೆಯಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ಮೇಲೆ ಬಸ್ ಡ್ರೈವರ್ ಗಳು, ನಿರ್ವಾಹಕರು ನಿಲ್ಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಶಕ್ತಿ ಯೋಜನೆಯಿಂದ ಒಂದು ಕಡೆ ಅನುಕೂಲವಾದರೆ, ಮತ್ತೊಂದು ಕಡೆ ಸಮಸ್ಯೆಯಾಗಿ ಪರಿಣಮಿಸಿದೆ.