ವಧುವಿಗೆ ಚಿನ್ನದಲ್ಲೇ ತುಲಾಭಾರ – 70 ಕೆಜಿ ಚಿನ್ನವೂ ವರನ ಪಾಲು!

ಮದುವೆಗೆ ಉಳ್ಳವರು ತಮ್ಮ ಪ್ರತಿಷ್ಟೆಯನ್ನು ಮೆರೆಯಲು ದುಂದು ವೆಚ್ಚ ಮಾಡುತ್ತಾರೆ. ಊಟ, ತಿಂಡಿ, ಕಲ್ಯಾಣ ಮಂಟಪದ ಡೆಕೊರೇಷನ್, ವಧು ಮತ್ತು ವರರಿಗೆ ಬಟ್ಟೆ, ಅಲಂಕಾರ, ಒಡವೆ, ಮದುವೆಗೆ ಆಗಮಿಸುವ ಅತಿಥಿಗಳಿಗೆ ಉಡುಗೊರೆ ಹೀಗೆ ಸಾಕಷ್ಟು ಖರ್ಚು ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಹೆಣ್ಣು ಮಕ್ಕಳು ಹೋದ ಮನೆಯಲ್ಲಿ ಖುಷಿಯಿಂದ ಇರಬೇಕು. ಅಲ್ಲಿ ಅವರಿಗೆ ಯಾವುದೇ ಕುಂದುಕೊರತೆಗಳು ಆಗಬಾರದು ಅಂತಾ ಲಕ್ಷ, ಕೋಟ್ಯಾಂತರ ರೂಪಾಯಿ ಹಣ, ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಇಲ್ಲೊಂದು ಮದುವೆಯಲ್ಲಿ ವಧುವನ್ನು ಚಿನ್ನದಲ್ಲೇ ತೂಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ವಧುವಿನ ಬಾಳಿಗೆ ಶಾಪವಾದ ಬ್ಯೂಟಿಪಾರ್ಲರ್ – ಮೇಕಪ್ ನಿಂದ ಮದುವೆಯೇ ಕ್ಯಾನ್ಸಲ್!
ಅನೇಕ ಮದುವೆಗಳಲ್ಲಿ ಕೊಡುಕೊಳ್ಳುವಿಕೆ ಇದ್ದೇ ಇರುತ್ತದೆ. ವಧುದಕ್ಷಿಣೆ, ವರದಕ್ಷಿಣೆಯನ್ನು ಮದುವೆ ವೇಳೆ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಎಷ್ಟೋ ಸಲ ಈ ವಿಚಾರಕ್ಕೆ ವಾದ ವಿವಾದಗಳಾಗಿ ಮದುವೆಯೇ ಮುರಿದು ಬಿದ್ದ ಘಟನೆಗಳು ನಡೆದಿವೆ. ಈ ಮಧ್ಯೆ ಇಲ್ಲೊಂದು ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ಎಲ್ಲಾ ಮದುವೆಗಳಿಗಿಂತ ಈ ಮದುವೆ ವಿಭಿನ್ನವಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಸಂತರು, ಶರಣರನ್ನು ತಕ್ಕಡಿಯಲ್ಲಿ ತೂಗಿ ಅವರಿಗೆ ದವಸ, ಧಾನ್ಯ, ದುಡ್ಡು ನೀಡುವುದನ್ನು ನೀವು ನೋಡಿರಬಹುದು. ಆದರೆ ಈ ಮದುವೆಯಲ್ಲಿ ವಧುವನ್ನೇ ಚಿನ್ನದಲ್ಲಿ ತುಲಾಭಾರ ಮಾಡಲಾಗಿದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಈ ಮದುವೆ ದುಬೈನಲ್ಲಿ ನಡೆದಿದೆ. ಇಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದ ಗಟ್ಟಿಗಳಿಂದ ತೂಕ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ವಧು ಮತ್ತು ವರರು ಮಂಟಪದತ್ತ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಅವರನ್ನು ಮಂಟಪದ ಮೇಲೆ ನೆರೆದಿದ್ದ ಸಂಬಂಧಿಗಳು ಸ್ವಾಗತಿಸುತ್ತಾರೆ. ನಂತರ ವಧುವು ಅಲಂಕಾರ ಮಾಡಿದ ಬೃಹತ್ ತಕ್ಕಡಿಯಲ್ಲಿ ಬಂದು ಒಂದು ಬದಿ ಕೂರುತ್ತಾಳೆ. ತಕ್ಕಡಿಯ ಇನ್ನೊಂದು ಬದಿಯಲ್ಲಿ ಚಿನ್ನದ ದೊಡ್ಡ ದೊಡ್ಡ ಗಟ್ಟಿಗಳಿಂದ ಆಕೆಯನ್ನು ತೂಕ ಮಾಡಲಾಗುತ್ತದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪಾಕಿಸ್ತಾನಿ ಮೂಲದ ವಧುವಿನ ತೂಕ ಸುಮಾರು 70 ಕೆ.ಜಿ ಇತ್ತು. ವಧುವಿನ ಕುಟುಂಬಸ್ಥರು, ಆಕೆಯ ತೂಕಕ್ಕೆ ಸಮನಾಗಿ ಚಿನ್ನದ ಗಟ್ಟಿಗಳನ್ನು ಇಟ್ಟು ಅಳತೆ ಮಾಡಿದ್ದಾರೆ. ಈ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನದಲ್ಲಿ ಜನರು ಹಸಿವಿನಿಂದ ಒದ್ದಾಡುತ್ತಿದ್ದಾರೆ. ಹೀಗಿದ್ದಾಗ ಅಲ್ಲಿಯವರು ಹಸಿದವರಿಗೆ ಉಣಬಡಿಸುವ ಕೆಲಸ ಮಾಡದೇ ಚಿನ್ನದಲ್ಲಿ ವಧುವನ್ನು ತೂಕ ಮಾಡಿದ್ದಾರೆ ಎಂದು ಒಬ್ಬ ಬಳಕೆದಾರರು ಟ್ವೀಟ್ ಮಾಡಿ ಟೀಕಿಸಿದ್ದಾರೆ. ವಧುವಿನ ತಂದೆ ಯುಎಇ ಮೂಲದ ಪಾಕಿಸ್ತಾನಿ ಉದ್ಯಮಿ ಎಂಬುದು ತಿಳಿದು ಬಂದಿದೆ.
Bride measured in gold in Dubai🙈🙈.
Further proof that all the money in the world will not give class to classless individuals. pic.twitter.com/wfAMTJKCEL— Tawab Hamidi (@TawabHamidi) February 25, 2023