ಒಂದೇ ಪಂದ್ಯದಲ್ಲಿ 400 ರನ್!! ಲಾರಾ ಲೈಪ್ ಜಿಂಗಲಾಲಾ
ಮಗಳಿಗೆ ಸಿಡ್ನಿ ಹೆಸರಿಟ್ಟಿದ್ದೇಕೆ ಗೊತ್ತಾ?

ಬ್ರಿಯನ್ ಲಾರಾ.. 1990 ರಲ್ಲಿ 21 ನೇ ವಯಸ್ಸಿನಲ್ಲೇ ವೆಸ್ಟ್ ಇಂಡೀಸ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು.. ಜನವರಿ 1993 ರಲ್ಲಿ, ಲಾರಾ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 277 ರನ್ ಗಳಿಸಿದರು . ಅವರ ಐದನೇ ಟೆಸ್ಟ್ ಪಂದ್ಯದಲ್ಲಿ ಇವರ ಚೊಚ್ಚಲ ಟೆಸ್ಟ್ ಶತಕವು ಸರಣಿಯ ಮಹತ್ವದ ತಿರುವು ನೀಡಿತು, ವೆಸ್ಟ್ ಇಂಡೀಸ್ ಕೊನೆಯ ಎರಡು ಟೆಸ್ಟ್‌ಗಳನ್ನು ಗೆದ್ದು ಸರಣಿಯನ್ನು 2- 1 ಅಂತರದಿಂದ ಗೆದ್ದಿತು. SCGಯಲ್ಲಿ 277 ರನ್ ಗಳಿಸಿದ ನಂತರ ಲಾರಾ ತಮ್ಮ ಮಗಳಿಗೆ ಸಿಡ್ನಿ ಎಂದು ಹೆಸರಿಟ್ಟರು.
400 ರನ್‌ಗಳಿಸಿ ಲಾರಾ ದಾಖಲೆ
ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ, ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್ ಒಂದರಲ್ಲಿ 400 ರನ್ ಬಾರಿಸಿದ ಮೊತ್ತ ಮೊದಲ ಹಾಗೂ ಏಕಮಾತ್ರ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಅಂದು ಆ ಟೆಸ್ಟ್ ಪಂದ್ಯಲ್ಲಿ ವೆಸ್ಟ್ ಇಂಡೀಸ್ ಸೋತಿದ್ದರೆ ಇಂಗ್ಲೆಂಡ್ ಎದುರು ಸರಣಿ ವೈಟ್‌ವಾಷ್ ಸೋಲಿನ ಮುಖಭಂಗ ಅನುಭವಿಸುವಂತಾಗುತ್ತಿತ್ತು. ಆದರೆ ಆಂಟಿಗಾದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿಶ್ವರೂಪ ತಾಳಿದ ಲಾರಾ, 582 ಎಸೆತಗಳಲ್ಲಿ ಅಜೇಯ 400 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿ ತಂಡಕ್ಕೆ ವೈಟ್‌ವಾಷ್ ಮುಖಭಂಗವನ್ನು ತಪ್ಪಿಸಿದರು. ಅಂದಹಾಗೆ ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಿಯಾನ್ ಲಾರಾ ಅವರ ಹೆಸರಲ್ಲಿದ್ದ ಗರಿಷ್ಟ ರನ್ ಸ್ಕೋರ್‌ನ ವಿಶ್ವ ದಾಖಲೆ ಮುರಿದು ಕೇವಲ 6 ತಿಂಗಳಷ್ಟೇ ಕಳೆದಿತ್ತು. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಜಿಂಬಾಬ್ವೆ ವಿರುದ್ಧ 380 ರನ್ ಬಾರಿಸಿ ಲಾರಾ ಅವರ ದಾಖಲೆಯನ್ನು ಮುರಿದಿದ್ದರು. ಆದರೆ, ಕೇವಲ ಆರೇ ತಿಂಗಳಲ್ಲಿ ಲಾರಾ ಮರಳಿ ತಮ್ಮ ದಾಖಲೆ ಸಂಪಾದಿಸಿದರು. ಆ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕೇವಲ 100 ರನ್ ಮಾತ್ರ ಗಳಿಸಿದ್ದ ಲಾರಾ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಕೇವಲ 36 ರನ್ ಆಗಿತ್ತು. ಬಳಿಕ ಇದ್ದಕ್ಕಿದ್ದಂತೆ ಲಯಕ್ಕೆ ಮರಳಿ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ 400 ರನ್ ಬಾರಿಸಿದ್ದರು. ಟೆಸ್ಟ್ ಪಂದ್ಯದ ಮೊದಲ ದಿನದಂದು 86 ರನ್ ಗಳಿಸಿದ್ದ ಲಾರಾ, 2ನೇ ದಿನ 313 ರನ್ ಬಾರಿಸಿ ನಾಟ್‌ಔಟ್ ಆಗಿದ್ದರು. ಈ ಸಂದರ್ಭದಲ್ಲಿ ಸ್ಟೀವನ್ ಹಾರ್ಮಿಸನ್ ಅವರ ಬೌಲಿಂಗ್‌ನಲ್ಲಿ ಕಾಟ್ ಬಿಹೈಂಡ್ ತಪ್ಪಿಸಿಕೊಂಡರಲ್ಲದೆ, 127 ರನ್ ಗಳಿಸಿದ್ದಾಗ ರನ್‌ಔಟ್ ಆಘಾತದಿಂದಲೂ ತಪ್ಪಿಸಿಕೊಂಡಿದ್ದರು. ಬಳಿಕ 373 ರನ್‌ಗಳಿಸಿದ್ದಾಗಲೂ ಗ್ಯಾರತ್ ಬ್ಯಾಟಿ ಬೌಲಿಂಗ್‌ನಲ್ಲಿ ಜೀವದಾನ ಪಡೆದರು ಇದು ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ದಾಖಲೆಯಾಗಿಯೇ ಉಳಿದಿದೆ.
1998 ರಿಂದ 99 ರವರೆಗೆ ಲಾರಾ ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿದ್ದರು, ಆಗ ವೆಸ್ಟ್ ಇಂಡೀಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ಸೋತಿತ್ತು . ಇದಾದ ನಂತರ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಸರಣಿಯನ್ನು 2-2 ರಲ್ಲಿ ಡ್ರಾ ಮಾಡಿಕೊಂಡಿತು, ಇದರಲ್ಲಿ ಲಾರಾ ಮೂರು ಶತಕಗಳು ಮತ್ತು ಒಂದು ದ್ವಿಶತಕ ಸೇರಿದಂತೆ 546 ರನ್ ಗಳಿಸಿದರು. 2003 ರಲ್ಲಿ ಪ್ರವಾಸಿ ಆಸ್ಟ್ರೇಲಿಯನ್ನರ ವಿರುದ್ಧದ ಪಂದ್ಯದಲ್ಲಿ ಲಾರಾ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಲಾಯಿತು ಮತ್ತು ಅವರು ಮತ್ತೆ ನಾಯಕತ್ವ ವಹಿಸಿಕೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 110 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಆ ಋತುವಿನ ನಂತರ, ಅವರ ನಾಯಕತ್ವದಲ್ಲಿ, ವೆಸ್ಟ್ ಇಂಡೀಸ್ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು ಮತ್ತು ಲಾರಾ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದರು. ಸೆಪ್ಟೆಂಬರ್ 2004 ರಲ್ಲಿ, ವೆಸ್ಟ್ ಇಂಡೀಸ್ ಇಂಗ್ಲೆಂಡ್‌ನಲ್ಲಿ 2004 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಅವರ ನಾಯಕತ್ವದಲ್ಲಿ ಗೆದ್ದುಕೊಂಡಿತು. ಮಾರ್ಚ್ 2005 ರಲ್ಲಿ, ಲಾರಾ ತಮ್ಮ ವೈಯಕ್ತಿಕ ಕೇಬಲ್ ಮತ್ತು ವೈರ್‌ಲೆಸ್ ಪ್ರಾಯೋಜಕತ್ವ ಒಪ್ಪಂದದ ವಿವಾದದಿಂದ ತಂಡದಿಂದ ಹೊರಗುಳಿದ್ರು. ನಂತ್ರ ಈ ಸಮಸ್ಯೆ ಬಗೆಹರಿತು.. ಏಪ್ರಿಲ್ 26, 2006 ರಂದು ಲಾರಾ ಅವರನ್ನು ಮೂರನೇ ಬಾರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕರನ್ನಾಗಿ ಮರುನೇಮಕ ಮಾಡಲಾಯಿತು. ಏಪ್ರಿಲ್ 21, 2007 ರಂದು ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಲಾರಾ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು . ಏಪ್ರಿಲ್ 19 2007 ರಂದು ಲಾರಾ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಇದಾಗಿತ್ತು ಲಾರಾ ಅವರ ಕ್ರಿಕೆಟ್ ಜರ್ನಿ, ಈ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ ನಮಸ್ಕಾರ..