ಸೀಜ್ ಮಾಡಿ ಗೋದಾಮಿನಲ್ಲಿ ಇರಿಸಿದ್ದ ಮದ್ಯದ ಬಾಟಲಿಗಳು ಖಾಲಿ! – ‘ಇಲಿ’ಯನ್ನು ಬಂಧಿಸಿ ಬೋನಿನಲ್ಲಿಟ್ಟ ಪೊಲೀಸರು!

ಯಾವುದೇ ಅಪರಾಧದಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಬಂಧಿಸುವುದು ಪೊಲೀಸರ ಕರ್ತವ್ಯ. ಹೀಗಾಗಿ ಅರೋಪಿ ಯಾವ ಮೂಲೆಯಲ್ಲಿ ಅಡಗಿದ್ದರೂ ಆತನನ್ನು ಹಿಡಿಯುತ್ತಾರೆ. ಈ ವೇಳೆ ಆತ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯುವುದು ಸಾಮಾನ್ಯ. ಇಲ್ಲೊಂದು ಕಡೆ ಪೊಲೀಸರು ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು ಗೋದಾಮಿನಲ್ಲಿ ಇಟ್ಟಿದ್ದರು. ಆದ್ರೆ ದಿನ ಕಳೆದಂತೆ ಮದ್ಯದ ಬಾಟಲಿಗಳು ಖಾಲಿಯಾಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಮದ್ಯ ಕುಡಿಯುವ ಕಳ್ಳರು ಯಾರು ಅಂತಾ ಜಾಡು ಹಿಡಿದು ಹೋದ ಪೊಲೀಸರಿಗೆ ಶಾಕ್ ಆಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಮಧ್ಯ ಪ್ರದೇಶದ ಛಿಂದ್ವಾರದ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೊಲೀಸರು ಅಕ್ರಮ ಮದ್ಯ ಮಾರಾಟದ ಪ್ರಕರಣ ಸಂಬಂಧ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಅದನ್ನು ಪೊಲೀಸ್ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ದಿನಕಳೆದಂತೆ ಮದ್ಯದ ಬಾಟಲಿಗಳಲ್ಲಿ ಮದ್ಯ ಖಾಲಿಯಾಗುತ್ತಿದ್ದವು. ಈ ವೇಳೆ ಪೊಲೀಸರು ಗೋದಾಮಿನಲ್ಲಿ ಮದ್ಯ ಕುಡಿಯುವವರು ಯಾರು ಅಂತಾ ಪತ್ತೆ ಹಚ್ಚಲು ಒಂದು ಕಣ್ಣಿಟ್ಟಿದ್ದರು. ಈ ವೇಳೆ ಖತರ್ನಾಕ್ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: 2.5 ಮಿಲಿಯನ್ ಡಾಲರ್ ಪತ್ತೆ ಕೇಸ್ಗೆ ಟ್ವಿಸ್ಟ್! – ಚಿಂದಿ ಆಯುವವನ ಮೇಲೆ ಹಲ್ಲೆ ಮಾಡಿ ಅಪಹರಣ!
ಅಷ್ಟಕ್ಕೂ ಮದ್ಯ ಕದಿಯುತ್ತಿದ್ದ ಕಳ್ಳ ಯಾರು?
ಪೊಲೀಸರ ಗೋದಾಮಿನಲ್ಲಿ ಪ್ರತಿದಿನ ಮದ್ಯ ಖಾಲಿ ಮಾಡುತ್ತಿದ್ದಿದ್ದು ಬೇರೆ ಯಾರು ಅಲ್ಲ. ಮದ್ಯದ ಬಾಟಲ್ ಅನ್ನು ಕೊರೆದು ಖಾಲಿ ಮಾಡುತ್ತಿದ್ದಿದ್ದು ಇಲಿರಾಯ. ಗೋದಾಮಿನಲ್ಲಿ ಸಂಗ್ರಹಿಸಿ ಇರಿಸಿದ್ದ ಮದ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಇಲಿಗಳು ಕೊರೆದು ಖಾಲಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮದ್ಯ ಖಾಲಿ ಮಾಡುತ್ತಿದ್ದ ಇಲಿಯನ್ನೇ ಬಂಧಿಸಿದ್ದಾರೆ.
ಮೂಷಿಕಗಳು ಗೋದಾಮಿನಲ್ಲಿ ಇರಿಸಿದ್ದ ಮದ್ಯವನ್ನು ಕುಡಿದಿವೆಯೋ ಅಥವಾ ಬಾಟಲಿ ಕೊರೆದು, ಸೋರಿಕೆಯಾಗಿ ಖಾಲಿಯಾಗುವಂತೆ ಮಾಡಿವೆಯೋ ಗೊತ್ತಿಲ್ಲ. ಆದರೆ ಪೊಲೀಸರು ಈ ಇಲಿಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಒಂದು ಇಲಿಯನ್ನು ಹಿಡಿದಿರುವ ಪೊಲೀಸರು, ಅದನ್ನು ಬೋನಿನಲ್ಲಿ ಬಂಧಿಸಿಟ್ಟಿದ್ದಾರೆ. ಇನ್ನುಳಿದ ಇಲಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಲಿಕ್ಕರ್ ಅನ್ನು ಇಲಿಗಳು ಖಾಲಿ ಮಾಡಿವೆ ಎಂದು ವರದಿಯಾಗಿದೆ.
ಪೊಲೀಸ್ ಠಾಣೆಯ ಕಟ್ಟಡ ಬಹಳ ಹಳೆಯದು. ಸಂಗ್ರಹಿಸಿದ ವಸ್ತುಗಳನ್ನು ಇರಿಸುವ ಗೋದಾಮು ಇಲಿಗಳ ಪಾಲಿಗೆ ಆಟದ ಮೈದಾನವಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಇಲಿಗಳು ಸಂಪೂರ್ಣವಾಗಿ ಹಾಳುಗೆಡಹಿವೆ. ಅವುಗಳನ್ನು ಇರಿಸಿರುವ ಪೆಟ್ಟಿಗೆಗಳನ್ನು ಕಚ್ಚಿ ತಿಂದು ಧ್ವಂಸ ಮಾಡಿವೆ. ಇದನ್ನು ತಡೆಯಲು ಪೊಲೀಸರು ಈಗ ಗಾಂಜಾದಂತಹ ಮಾದಕ ವಸ್ತುಗಳು ಸಿಕ್ಕಾಗ ಅವುಗಳನ್ನು ಕಬ್ಬಿಣದ ಟಿನ್ ಪೆಟ್ಟಿಗೆಗಳಲ್ಲಿ ಇರಿಸಲು ಆರಂಭಿಸಿದ್ದಾರೆ.
ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಮದ್ಯ ಖಾಲಿಯಾಗಿದೆ. ಸದ್ಯ ಮದ್ಯ ವಶ ಪಡಿಸಿಕೊಂಡ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಕೋರ್ಟ್ಗೆ ಸಾಕ್ಷಿಯಾಗಿ ಮದ್ಯವನ್ನು ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಅದನ್ನು ಇಲಿಗಳು ನಾಶ ಮಾಡಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಅವರು ಗೋದಾಮಿನಲ್ಲಿರುವ ಇಲಿಗಳ ನಾಶಕ್ಕೆ ಮುಂದಾಗಿದ್ದಾರೆ.