ನನ್ನ ಬಿಟ್ಟು ಎಲ್ಲೂ ಹೋಗಬೇಡ..! ಮಾಲೀಕ ಬೈಕ್ ಏರದಂತೆ ಹಠ ಮಾಡಿ ತಡೆದ ಆನೆ!

ನನ್ನ ಬಿಟ್ಟು ಎಲ್ಲೂ ಹೋಗಬೇಡ..! ಮಾಲೀಕ ಬೈಕ್ ಏರದಂತೆ ಹಠ ಮಾಡಿ ತಡೆದ ಆನೆ!

ಕೆಲವೊಂದು ಪ್ರಾಣಿಗಳು ಮನುಷ್ಯನೊಂದಿಗೆ ಸ್ನೇಹ ಬೆಳೆಸಿಕೊಂಡರೆ ಎಂತಹ ಸಂದರ್ಭದಲ್ಲಿಯೂ ಕೈ ಬಿಡುವುದಿಲ್ಲ. ಆ ವ್ಯಕ್ತಿ ಒಂದು ಕ್ಷಣ ಕಾಣಿಸಿಕೊಂಡಿಲ್ಲವೆಂದರೆ ಆತನಿಗಾಗಿ ಎಲ್ಲೆಂದರಲ್ಲಿ ಹುಡುಕುತ್ತವೆ. ಇನ್ನು ತನ್ನ ಮಾಲೀಕ ಎಲ್ಲಿಗಾದರೂ ಹೊರಟರೆ, ಆತನೊಂದಿಗೆ ತಾನು ಬರುತ್ತೇನೆ ಎಂದು ಹಠ ಮಾಡುತ್ತದೆ. ಇದೀಗ ಇಲ್ಲೊಂದು ಆನೆ ತನ್ನ ಮಾಲೀಕ ಬಿಟ್ಟು ಹೋಗಬಾರದೆಂದು ಸಣ್ಣ ಮಕ್ಕಳಂತೆ ಹಠ ಮಾಡುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಮನುಷ್ಯ ಹೇಗೆ ಪ್ರೀತಿ ತೋರುತ್ತಾನೋ ಅದಕ್ಕಿಂತ ತುಸು ಜಾಸ್ತಿಯೇ ಪ್ರಾಣಿಗಳು ಮನುಷ್ಯನ ಮೇಲೆ ಪ್ರೀತಿ ತೋರುತ್ತವೆ. ಸಾಕುಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಪ್ರೀತಿಯನ್ನು ಸಾರುವ ವೀಡಿಯೋವೊಂದು ಸಾಕಷ್ಟು ವೈರಲ್‌ ಆಗಿದೆ. ಆನೆಯೊಂದು ತನ್ನ ಮಾಲೀಕ ತನ್ನ ಬಿಟ್ಟು ಹೋಗದಂತೆ ತಡೆಯುತ್ತಿರುವ ವೀಡಿಯೋ ಇದಾಗಿದೆ.

ಇದನ್ನೂ ಓದಿ: ಮರಿಗಳ ರಕ್ಷಣೆಗೆ ಭದ್ರಕೋಟೆ ನಿರ್ಮಿಸಿದ ಗಜಪಡೆ – ಆನೆಗಳ ಬುದ್ಧಿವಂತಿಕೆಗೆ ಬೆರಗಾದ ಜನ

ಅನಂತ್ ರೂಪನಗುಡಿ  ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು ಭಾರಿ ವೈರಲ್ ಆಗಿದೆ. ಆನೆಯ ಪಾಲಕ ಹಾಗೂ ಆನೆಯ ನಡುವಿನ ಒಡನಾಟವಿದು, ಆನೆ ತನ್ನ ನೋಡಿಕೊಳ್ಳುವವನ್ನು ಬಿಟ್ಟು ಹೋಗುವುದಕ್ಕೆ ಬಿಡುತ್ತಿಲ್ಲ ಎಂದು ಬರೆದು ಈ ವೀಡಿಯೋವನ್ನು ಅನಂತ್ ರೂಪನಗುಡಿ ಪೋಸ್ಟ್ ಮಾಡಿದ್ದಾರೆ. ರಸ್ತೆಯೊಂದರಲ್ಲಿ ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ.

ವೀಡಿಯೋದಲ್ಲಿ ಏನಿದೆ?

ರಸ್ತೆಯಲ್ಲಿ ಆನೆ ಹಾಗೂ ಆನೆಯನ್ನು ನೋಡಿಕೊಳ್ಳುವವ ಹಾಗೂ ಮತ್ತೊರ್ವ ಇದ್ದಾರೆ. ಜೊತೆಗೆ ಒಂದು ಮೊಪೆಡ್ ರೀತಿಯ ಗಾಡಿ ಇದ್ದು, ಓರ್ವ ಈ ಗಾಡಿಯನ್ನು ಸ್ಟಾರ್ಟ್‌ ಮಾಡಿದ್ದರೆ. ಆನೆ ಮಾಲೀಕ ಹಿಂಬದಿ ಸವಾರನಾಗಿ ಗಾಡಿ ಮೇಲೆ ಕೂರಲು ನೋಡುತ್ತಾನೆ. ಆದರೆ ಅಲ್ಲೇ ಇದ್ದ ಆನೆ ಏನು ಮಾಡಿದರು ಮಾಲೀಕ ತನ್ನನ್ನು ಬಿಟ್ಟು ಹೋಗುವುದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಗಾಡಿ ಮೇಲೆ ಕೂತಿದ್ದ ಆತನನ್ನು ಸೊಂಡಿಲಿನಿಂದ ಎಳೆದು ಕೆಳಗಿಳಿಸಿದ ಆನೆ ಬಳಿಕ ಆತನನ್ನು ತನ್ನ ಬಾಲದಲ್ಲಿ ಸುತ್ತಿ ಹಿಡಿದು ಎಳೆದುಕೊಂಡು ಹೋಗುತ್ತದೆ. ಈ ವೇಳೆ ಮತ್ತೆ ಆನೆಯಿಂದ ತಪ್ಪಿಸಿಕೊಂಡು ಬರುವ ಮಾಲೀಕ ಮತ್ತೆ ಗಾಡಿ ಮೇಲೆ ಕೂರಲು ಯತ್ನಿಸಿದ್ದು, ಈ ವೇಳೆಯೂ ಆನೆ ಮಾತ್ರ ಆತನನ್ನು ಗಾಡಿ ಏರುವುದಕ್ಕೆ ಏನು ಮಾಡಿದರು ಬಿಡುವುದೇ ಇಲ್ಲ..

ಈ ವೀಡಿಯೋ ನೋಡಿದ ಅನೇಕರು ಇವರಿಬ್ಬರ ಒಡನಾಡ ಬಹಳ ಪ್ರೀತಿಯಿಂದ ತುಂಬಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿದ ಮೇಲೆ ನನಗೂ ಆನೆ ಸಾಕುವ ಮನಸಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆತ ತನ್ನ ಪಾಲಕನನ್ನು ಬೈಕ್‌ನಿಂದ ಇಳಿಸುವ ವೇಳೆ ಆತನಿಗೆ ನೋವಾಗದಂತೆ ಎಷ್ಟು ಕಾಳಜಿಯಿಂದ ನಿರ್ವಹಿಸುತ್ತಾನೆ ನೋಡಿ ಎಂದು ಆನೆಯ ಬುದ್ಧಿವಂತಿಕೆ ಹಾಗೂ ಕಾಳಜಿಯನ್ನು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪ್ರಾಣಿಗಳು ಸ್ವಲ್ಪ ಪ್ರೀತಿ ತೋರಿದರೆ ತನ್ನ ಪ್ರೀತಿಸುವವನಿಗಾಗಿ ಏನು ಮಾಡಲು ಸಿದ್ಧವಿರುತ್ತವೆ ಎಂಬುದನ್ನು ಈ ವೀಡಿಯೋ ಸಾಬೀತುಪಡಿಸಿದೆ.

Shwetha M