ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ ಬಿಎಂಟಿಸಿ ಬಸ್ ಪಲ್ಟಿ

ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್‍ಎಸ್‍ಆರ್ ಲೇಔಟ್ ಕಡೆ ಬಿಎಂಟಿಸಿ ವೋಲ್ವೋ ಬಸ್ (ನಂಬರ್ KA 57 f 0237) ಬರುತ್ತಿತ್ತು. ಈ ವೇಳೆ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡಿದೆ. ಬಸ್ ಸೈಡ್ ಗೆ ಹಾಕುವಷ್ಟರಲ್ಲಿ ಡಿವೈಡರ್ ಗೆ ಹೊಡೆದು ಪಲ್ಟಿಯಾಗಿದೆ.
ಇದನ್ನೂ ಓದಿ: ‘ಬೈಯಪ್ಪನಹಳ್ಳಿ – ಕೆಆರ್ ಪುರ’ ಮೆಟ್ರೋ ಮಾರ್ಗ ಸೆ.7ಕ್ಕೆ ಪರಿಶೀಲನೆ – ಸಂಚಾರ ಮುಕ್ತ ಯಾವಾಗ?
ಈ ಅವಘಡದ ವೇಳೆ ಚಾಲಕ ನಿರ್ವಾಹಕ ಸೇರಿ 13 ಮಂದಿ ಬಸ್ಸಿನಲ್ಲಿದ್ದರು. ಘಟನೆಯಿಂದ ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನ ತಲೆಗೆ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.
ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಿಂದಾಗಿ ಪ್ಯಾಲೇಸ್ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ತಡರಾತ್ರಿವರೆಗೆ ಆಗಿದ್ದ ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.