ಪಶ್ಚಿಮಘಟ್ಟಗಳ ಸೌಂದರ್ಯ ಇನ್ನು ಬೆಂಗಳೂರಿನಲ್ಲೂ ಲಭ್ಯ! – ಸಸ್ಯಕಾಶಿಯಲ್ಲಿ  ನಿರ್ಮಾಣಗೊಳ್ಳಲಿದೆ ಮಿನಿ ಪಶ್ಚಿಮ ಘಟ್ಟ?

ಪಶ್ಚಿಮಘಟ್ಟಗಳ ಸೌಂದರ್ಯ ಇನ್ನು ಬೆಂಗಳೂರಿನಲ್ಲೂ ಲಭ್ಯ! – ಸಸ್ಯಕಾಶಿಯಲ್ಲಿ  ನಿರ್ಮಾಣಗೊಳ್ಳಲಿದೆ ಮಿನಿ ಪಶ್ಚಿಮ ಘಟ್ಟ?

ಬೆಂಗಳೂರು: ಪ್ರಕೃತಿ ಸೌಂದರ್ಯ ಆಸ್ವಾದಿಸಲು ಸಿಲಿಕಾನ್‌ ಸಿಟಿ ಜನರು ಹೆಚ್ಚಾಗಿ ಪಶ್ಚಿಮಘಟ್ಟ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇನ್ನೂ ಮಳೆಗಾಲ ಬಂತೆಂದರೆ ಚಾರ್ಮಾಡಿ ಘಾಟ್‌, ಬಿಸ್ಲೆ ಘಾಟ್‌ ಮುಂತಾದ ಪ್ರದೇಶಗಳಿಗೆ ಹೋಗುವುದು ಸಾಮಾನ್ಯ. ಇನ್ನು ಮುಂದೆ ಪಶ್ಚಿಮಘಟ್ಟಗಳ ಸೌಂದರ್ಯ ಆಸ್ವಾದಿಸಲು ಅಲ್ಲಿಗೆ ಹೋಗಬೇಕಾಗಿಲ್ಲ. ಪ್ರಕೃತಿಯ ಸೌಂದರ್ಯವನ್ನು ಇನ್ನು ಮುಂದೆ ಬೆಂಗಳೂರಿನಲ್ಲಿಯೇ ನೋಡಬಹುದು. ಅದೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ!

ಹೌದು, ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮಘಟ್ಟ ನಿರ್ಮಾಣವಾಗಲಿದೆ. ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮ ಘಟ್ಟಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆರು ಎಕರೆ ಬಂಜರು ಭೂಮಿಯಲ್ಲಿ ಸಹ್ಯಾದ್ರಿ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿಯ ಮರಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: 10 ನಿಮಿಷ ಟಾಯ್ಲೆಟ್‌ ಬ್ರೇಕ್‌ ತೆಗೆದುಕೊಂಡ ಮಹಿಳೆ! – ಬಾಸ್‌ ಪ್ರಶ್ನಿಸಿದ್ದಕ್ಕೆ ಉದ್ಯೋಗಿ ಹೀಗಾ ಮಾಡೋದು?

ಎರಡು ವರ್ಷಗಳ ಹಿಂದೆ ಸಹ್ಯಾದ್ರಿ ಪ್ರದೇಶದಿಂದ 190 ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ತರಿಸಿ ನೆಡಲಾಗಿದೆ. ಅದರಲ್ಲಿ ಕೆಲವು ಹಣ್ಣಿನ ಗಿಡಗಳು ಸೇರಿದಂತೆ 132 ಗಿಡಗಳು ಉಳಿದುಕೊಂಡಿವೆ. ಈ ಯೋಜನೆಯಿಂದಾಗಿ ಮತ್ತಷ್ಟು ಹೆಚ್ಚು ಗಿಡಗಳನ್ನು ನೆಡಲು ತೋಟಗಾರಿಕಾ ಇಲಾಖೆ ಉತಸುಕವಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಪಶ್ಚಿಮ ಘಟ್ಟಗಳ 400 ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಲಾಲ್‌ಬಾಗ್‌ನಲ್ಲಿ ನೆಡಲಾಗಿದೆ ಎಂದು ಜೀವವೈವಿಧ್ಯ ತಜ್ಞ ಕೇಶವ ಮೂರ್ತಿ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಣ್ಣಿನ ಫಲವತ್ತತೆ ಕುರಿತು ಕೆಲಸ ಮಾಡುತ್ತಿದ್ದು, ಮಂಗಳವಾರ ಸಹ್ಯಾದ್ರಿ ಬೆಟ್ಟದಿಂದ ತರಿಸಿದ್ದ 400 ಸಸಿಗಳನ್ನು ವಿದ್ಯಾರ್ಥಿ ಸ್ವಯಂಸೇವಕರ ನೆರವಿನಿಂದ ನೆಡಲಾಗಿದೆ. ಮುಂದಿನ ದಿನಗಳಲ್ಲಿ, ಜಲಚರಗಳು ಮತ್ತು ಅಂತರ್ಜಲ ಮಟ್ಟ ಸುಧಾರಣೆಗಾಗಿ ಸಣ್ಣ ಕೊಳಗಳನ್ನು ಸಹ ರಚಿಸಲಾಗುವುದು. ಇದು ಮರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಪೊದೆಗಳು, ಗಿಡಮೂಲಿಕೆಗಳ ಸಸ್ಯಗಳನ್ನು ಸೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

suddiyaana