ಜಾರುತ್ತಿದೆ ಜರ್ಮನ್ ಟೆಕ್ನಾಲಜಿಯ ತಡೆಗೋಡೆ- ಮುಂಗಾರು ಪ್ರವೇಶಕ್ಕೂ ಮೊದಲೇ ಹಾರಿತು ಟಾರ್ಪಲ್..!
ಮಂಗಳೂರು-ಮಡಿಕೇರಿ ರಸ್ತೆಗೆ ಹೊಂದಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿಯ ತಡೆಗೋಡೆ ಮಳೆ ಸುರಿಯುವ ಮೊದಲೇ ತನ್ನ ಅಡಿಪಾಯವನ್ನು ಕಳೆದುಕೊಂಡಿದೆ. 2021ರಲ್ಲಿ 7 ಕೋಟಿ ರೂಪಾಯಿ ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಾಣಗೊಂಡಿತ್ತು. ಬಳಿಕ ಮಳೆಗಾಲದಲ್ಲಿ ಬಿರುಕುಬಿಟ್ಟು ತೀವ್ರ ಟೀಕೆಗೆ ಗುರಿಯಾಗಿತ್ತು. ಬಿರುಕು ಬಿಟ್ಟಿರುವ ತಡೆಗೋಡೆಗೆ ಟಾರ್ಪಲ್ ಹೊದಿಸಲಾಗಿತ್ತು. ಆದರೆ, ಮೇ ತಿಂಗಳಿನಲ್ಲಿ ಸುರಿದ ತಾತ್ಕಾಲಿಕ ಗಾಳಿ ಮಳೆಗೆ ಮೇಲೆ ಹೊದಿಸಿದ್ದ ಟಾರ್ಪಲ್‌ಗಳೆಲ್ಲವೂ ಹಾರಿಹೋಗಿದೆ.
ಇದನ್ನೂ ಓದಿ: ಬೀಸುತ್ತಿದೆ ಬಿರುಗಾಳಿ.. ಸ್ಪೀಡ್ ಕಡಿಮೆ ಮಾಡಿ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಎಚ್ಚರಿಕೆ..!
ಎರಡೇ ಮಳೆಗೆ ತಡೆಗೋಡೆ ಸ್ಥಿತಿ ಹೀಗಾದರೆ ಮುಂದಿರುವ ಭಾರೀ ಮಳೆಗೆ ತಡೆಗೋಡೆ ಗತಿಯೇನು ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದೆ. ಕೊಡಗಿನ ಮಳೆಗಾಲ ಎಂದರೆ ಜಿಲ್ಲೆಯ ಜನರಿಗೆ ಒಂದು ರೀತಿಯ ಆತಂಕ ಕಾಡುತ್ತದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಭಾರೀ ಮಳೆಯಾದರೆ ಇಲ್ಲಿನ ಜನರಿಗೆ ಪ್ರವಾಹ, ಭೂಕುಸಿತದ ಆತಂಕ ಎದುರಾಗಲಿದೆ. ಜರ್ಮನ್ ಟೆಕ್ನಾಲಜಿ ಬಳಸಿಕೊಂಡು ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಇದಾದ ನಂತರ ಮಳೆಗಾಲದಲ್ಲಿ ತಡೆಗೋಡೆಯ ಸ್ಲ್ಯಾಬ್‌ಗಳು ಮಣ್ಣಿನ ಒತ್ತಡಕ್ಕೆ ಹಾಳಾಗಿತ್ತು. ಈ ಬಾರಿ ತಡೆಗೋಡೆಗೆ ಬೃಹತ್ ಟಾರ್ಪಲ್‌ಗಳನ್ನು ಹಾಕಲಾಗಿತ್ತು. ಆದರೆ ಮೇ ತಿಂಗಳ ಮಳೆಗೆ ಟಾರ್ಪಲ್‌ಗಳು ಕೂಡಾ ಹಾರಿಹೋಗಿದೆ. ಈಗಾಗಲೇ ಪುನರ್ ಕಾಮಗಾರಿ ನಡೆಯುತ್ತಿದೆ. ತಡೆಗೋಡೆಗೆ ಅಳವಡಿಸಲಾಗಿದ್ದ ರೆಡಿಮೇಡ್ ಬ್ಲಾಕ್‌ಗಳನ್ನು ಮತ್ತೆ ಕಳಚಿ ಜೋಡಿಸುವ ಕೆಲಸ ಭರದಿಂದ ಸಾಗಿದೆ.