ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗೆ ಕಿರುಕುಳ – ಮನನೊಂದ ಯುವಕ ಮಾತ್ರೆ ಸೇವಿಸಿ ಆತ್ಮಹತ್ಯೆ!
ಕಾಲೇಜು ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಎಂಸಿ ಕಾಲೇಜು ವಿದ್ಯಾರ್ಥಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಎಎಂಸಿ ಕಾಲೇಜಿನಲ್ಲಿ ನಿಖಿಲ್ ಪ್ರಥಮ ವರ್ಷದ ಹೋಟೆಲ್ ಮೆನೇಜ್ಮೆಂಟ್ ವಿಭಾಗದಲ್ಲಿ ಓದುತ್ತಿದ್ದ. ಕಳೆದ ಒಂದು ತಿಂಗಳಿಂದ ನಿಖಿಲ್‌ಗೆ ಕಾಲೇಜು ಡೀನ್ ಕಿರುಕುಳ ನೀಡುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದರಿಂದ ಬೇಸತ್ತು ವಿದ್ಯಾರ್ಥಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಕುಟುಂಬರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್‌ನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್! – ಕಾರಣವೇನು ಗೊತ್ತಾ?
ತನ್ನ ಮಗನಿಗೆ ಕಾಲೇಜು ಡೀನ್ ಕಳೆದ ಒಂದು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದರು. ಜೊತೆಗೆ ನನ್ನಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇವೆಲ್ಲದರಿಂದ ಬೇಸತ್ತಿದ್ದ ನನ್ನ ಮಗ ಮನೆಯಲ್ಲಿದ್ದ ಮಾತ್ರೆಗಳನ್ನ ಸೇವಿಸಿದ್ದ. ಕೂಡಲೇ ನಾಗರಬಾವಿಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ತಾಯಿ ಕಾಲೇಜು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ರೀತಿ ಯಾರಿಗೂ ಆಗಬಾರದು, ತನ್ನ ಮಗನನ್ನು ಕಾಲೇಜಿನವರೆ ಕೊಂದರು. ಈ ಹಿಂದೆ ಬೇರೆ ರಾಜ್ಯದ ಒಂದು ಹುಡುಗಿಯನ್ನ ಇವನ ಜೊತೆಗೆ ಹಾಕಿದ್ದರು. ಅವಳಿಗೂ ನಮ್ಮ ಹುಡುಗನಿಗೂ ವ್ಯತ್ಯಾಸ ಆಗಿದೆ. ಈ ವಿಚಾರಕ್ಕೆ ನನ್ನ ಮಗನನ್ನು ಸ್ಪೆಸ್ಪೆಂಡ್ ಮಾಡಿದ್ದರು. ಹದಿನೈದು ದಿನ ಬಿಟ್ಟು ಕರೆದುಕೊಂಡು ಬನ್ನಿ ಎಂದಿದ್ದರು. ಮತ್ತೆ ಹೋದಾಗ ಅವಮಾನ ಮಾಡಿ, ನನ್ನ ಮುಂದೆಯೇ ಮಗನಿಗೆ ಹೊಡೆದರು. ಅದಕ್ಕೆ ತನ್ನ ಮಗ ಸತ್ತು ಹೋದ. ಇನ್ನು ಯಾರಿಗೂ ಈ ರೀತಿಯಲ್ಲಿ ಆಗಬಾರದು ಎಂದು ನಿಖಿಲ್ ತಾಯಿ ಕಾಲೇಜು ಆಡಳಿಯ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ.
ನಿಖಿಲ್ ಮೃತ ದೇಹವನ್ನು ಕಾಲೇಜು ಬಳಿ ತೆಗೆದುಕೊಂಡು ಹೋಗಿ ಪ್ರತಿಭಟನೆ ಮಾಡಲು ಕುಟುಂಬ ತೀರ್ಮಾನ ಮಾಡಿದೆ. ಆದರೆ, ಕಾನೂನು ಸುವ್ಯವಸ್ಥೆ ಹಾಗೂ ಉಳಿದ ಕಾಲೇಜು ಮಕ್ಕಳ ಹಿತದೃಷ್ಟಿಯಿಂದ ಕಾಲೇಜು ಬಳಿ ಮೃತದೇಹ ಬೇಡ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.