ನಾಡಿನಾದ್ಯಂತ ಕಳೆಗಟ್ಟಿದ ವಿಜಯದಶಮಿಯ ವೈಭವ – ನವರಾತ್ರಿಯ 10ನೇ ದಿನದಂದು ಆಚರಿಸುವ ಹಬ್ಬದ ಹಿನ್ನೆಲೆಯೇನು?

ನಾಡಿನಾದ್ಯಂತ ಕಳೆಗಟ್ಟಿದ ವಿಜಯದಶಮಿಯ ವೈಭವ – ನವರಾತ್ರಿಯ 10ನೇ ದಿನದಂದು ಆಚರಿಸುವ ಹಬ್ಬದ ಹಿನ್ನೆಲೆಯೇನು?

ನಾಡಿನಾದ್ಯಂತ ನಾಡಹಬ್ಬದ ಸಡಗರ ಸಂಭ್ರಮ. ದಸರಾ ಮಹೋತ್ಸವಕ್ಕೆ ಕರುನಾಡು ಕಳೆಗಟ್ಟಿದೆ. ದಸರೆಯ ವೈಭವದಲ್ಲಿ ಮೈಸೂರು ಅರಮನೆ ಕಂಗೊಳಿಸುತ್ತಿದೆ. ನಾಡಹಬ್ಬ ನೋಡುಬಾರಾ ಅಂತಾ ಅರಮನೆ ನಗರಿ ತನ್ನತ್ತ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಜಂಬೂಸವಾರಿಯ ಅದ್ಧೂರಿತನ ಕಣ್ತುಂಬಿಕೊಳ್ಳಲು ಜನ ಕಾಯ್ತಿದ್ದಾರೆ. ಅದರ ಮಧ್ಯೆ ವಿಜಯದಶಮಿಯ ವೈಭವ ಬೆಳಗ್ಗೆಯಿಂದಲೇ ಶುರುವಾಗಿದೆ.

ಇದನ್ನೂ ಓದಿ:ನಾಡಿನೆಲ್ಲೆಡೆ ಆಯುಧ ಪೂಜೆ, ವಿಜಯ ದಶಮಿ ಸಂಭ್ರಮ- ಗಗನಕ್ಕೇರಿದ ಹೂ, ಹಣ್ಣುಗಳ ದರ

ಹೌದು. ಇವತ್ತು ವಿಜಯದಶಮಿ. ಇವತ್ತು ಮನೆ ಮನೆಗಳಲ್ಲಿ, ನಾಡಿನಲ್ಲಿ, ಅಷ್ಟೇ ಏಕೆ ಇಡೀ ದೇಶದಲ್ಲಿ ವಿಜಯದಶಮಿ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿಯ 10ನೇ ದಿನದಂದು ವಿಜಯದಶಮಿ ಹಬ್ಬ ಬರುತ್ತದೆ. ಇದಕ್ಕೂ ಪುರಾಣಗಳಲ್ಲಿ ವಿಧವಿಧವಾದ ಹಿನ್ನೆಲೆಯೂ ಇದೆ. ಶಾರದಿಯ ನವರಾತ್ರಿಯು ಶ್ರೀರಾಮನಿಂದ ಶುರುವಾಗಿದೆ ಅಂತಾನೂ ಹೇಳಲಾಗ್ತಿದೆ. ಶ್ರೀರಾಮನು ಲಂಕಾಧಿಪತಿ ರಾವಣನ ಜೊತೆ ಯುದ್ಧಕ್ಕೂ ಮುನ್ನ ಅಶ್ವಿನಿ ಮಾಸದ ವೇಳೆ ದುರ್ಗಾದೇವಿಯನ್ನ ಪೂಜಿಸುತ್ತಾನೆ. ಶ್ರೀರಾಮಚಂದ್ರನ ಪೂಜೆಗೆ ಪ್ರಸನ್ನಳಾದ ದೇವಿ 9ನೇ ದಿನದಂದು ವಿಜಯವನ್ನು ಅನುಗ್ರಹಿಸುತ್ತಾಳೆ. ದುರ್ಗೆಯ ಅನುಗ್ರಹದಿಂದ ರಾಮನು ಹತ್ತನೇ ದಿನದಂದು ಲಂಕೆಗೆ ತಲುಪಿ ರಾವಣನನ್ನ ಕೊಲ್ಲುತ್ತಾನೆ. ಅಂದಿನಿಂದ ನವರಾತ್ರಿ ಪೂಜೆಯ ನಂತರ ಹತ್ತನೇ ದಿನ ಅಧರ್ಮದ ವಿರುದ್ಧ ಧರ್ಮವು ಜಯ ಸಾಧಿಸಿರುವ ದಿನವೆಂದೇ ಆಚರಿಸಲಾಗುತ್ತಿದೆ. ಅದುವೇ ವಿಜಯದಶಮಿ ಎನ್ನಲಾಗುತ್ತೆ.  ಆದ್ರೆ, ಇನ್ನು ಕೆಲವೆಡೆ ಈ ಆಚರಣೆ ಮತ್ತು ನಂಬಿಕೆಯೇ ಬೇರೆಯದ್ದಾಗಿದೆ. ಮಹಿಷಾಸುರನ ಉಪಟಳ ಜಾಸ್ತಿಯಾದಾಗ ದೇವರು, ಮಾನವರು ಈತನ ಉಪಟಳ ಸಹಿಸಲಾಗದೇ ಕಷ್ಟದಲ್ಲಿದ್ದಾಗ ತಾಯಿ ದುರ್ಗಾಮಾತೆ ಇವರೆಲ್ಲರ ರಕ್ಷಣೆಗೆ ನಿಲ್ಲುತ್ತಾಳೆ. 9 ದಿನಗಳ ಸುದೀರ್ಘ ಯುದ್ಧದ ನಂತರ ಹತ್ತನೇ ದಿನದಂದು ಶಕ್ತಿಯುತನಾದ ರಾಕ್ಷಸ ಮಹಿಷಾಸುರನನ್ನ ದೇವಿ ಸಂಹರಿಸುತ್ತಾಳೆ. ಹೀಗಾಗಿ ಈ ಹತ್ತನೇ ದಿನವನ್ನ ವಿಜಯದಶಮಿಯೆಂದು ಆಚರಿಸಲಾಗುತ್ತದೆ. ಇದನ್ನ ದಸರಾ ಹಬ್ಬವೆಂದು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.

ರಾಮ ರಾವಣನನ್ನ ಸಂಹರಿಸಿದ ದಿನವೆಂದು ಕೆಲವರು, ಪಾಂಡವರು ಶತ್ರುಗಳನ್ನ ಸದೆಬಡಿದ ದಿನವೆಂದು ಇನ್ನು ಹಲವರು, ಮಹಿಷಾಸುರನನ್ನ ಮರ್ಧಿಸಿದ ಚಾಮುಂಡೇಶ್ವರಿಯ ವಿಜಯದ ದಿನವಾಗಿ ಮತ್ತೆ ಕೆಲವರು , ಹೀಗೆ ಬೇರೆ ಬೇರೆ ರೀತಿಯಲ್ಲಿ ಇವತ್ತಿನ ದಿನವನ್ನ ವಿಜಯದಶಮಿಯನ್ನಾಗಿ ದೇಶಾದ್ಯಂತ ಆಚರಿಸುತ್ತಾರೆ. ದೇವಾನುದೇವತೆಗಳಿಗೆ ವಿಜಯತಂದು ಕೊಟ್ಟಿದ್ದು ಇದೇ ದಿನ ಅಂತಾನೂ ಹೇಳಲಾಗುತ್ತದೆ. ಜೊತೆಗೆ ರಾಜ ಮಹಾರಾಜರ ಪಾಲಿಗೆ ಈ ದಿನ, ಅದೃಷ್ಟದ ದಿನವೆಂದೂ ಹೇಳಲಾಗುತ್ತಿದೆ. ಇನ್ನು ದೇಶದ ವಿವಿದೆಡೆ ಇವತ್ತು ರಾವಣನ ಪ್ರತಿಕೃತಿಗಳನ್ನ ದಹನ ಮಾಡುತ್ತಾರೆ. ಕೆಟ್ಟದ್ದರ ವಿರುದ್ಧ ಒಳ್ಳೆಯದ್ದು ಗೆಲುವು ಸಾಧಿಸಿರುವ ಸಂಕೇತವಾಗಿಯೂ ಈ ರೀತಿ ಪ್ರತಿಕೃತಿ ದಹನ ಮಾಡ್ತಾರೆ. 10 ತಲೆಗಳನ್ನ ಹೊಂದಿರೋ ರಾವಣನಿಗೆ ಬಹಳ ಅಹಂಕಾರವಿರುತ್ತದೆ. ಆ 10 ತಲೆಗಳನ್ನ ಸಂಹರಿಸಿದ ದಿನವೇ ದಶಹರ ಎಂದು ಕರೆಯಲ್ಪಟ್ಟಿತ್ತು. ಮುಂದೇ ಇದೇ ಜನರ ಬಾಯಲ್ಲಿ ದಸರಾ ಅಂತಾ ಬದಲಾಯ್ತು ಅಂತಾನೂ ಹೇಳಲಾಗುತ್ತೆ.

ವಿಜಯದಶಮಿ ಅಂದ್ರೆ ವಿಜಯದ ಸಂಕೇತ. ವಿಜಯದ ಪರಾಕ್ರಮದ ಹಬ್ಬವೇ ವಿಜಯದಶಮಿ, ಈ ವಿಶೇಷ ದಿನದಂದು ಯಾವುದೇ ಕಾರ್ಯಗಳನ್ನು ಆರಂಭಸಿದ್ರೂ ಅದರಲ್ಲಿ ವಿಜಯ ಖಚಿತ ಎಂಬ ನಂಬಿಕೆಯಿದೆ. ದಶಮಿಯಂದು ದುರ್ಗೆ ಜಯವನ್ನ ದಯಪಾಲಿಸುತ್ತಾಳೆ. ಇದರ ಮಹಇತ್ವವನ್ನ ಅರಿತೇ ರಾಜಮಹಾರಾಜರು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಡುತ್ತಿದ್ದರಂತೆ. ನವರಾತ್ರಿಯ ಆಚರಣೆಗಳು ಮುಗಿದ ನಂತರ ಬರುವ ವಿಜಯದಶಮಿಯನ್ನ ನವರಾತ್ರಿ ಸಮಾಪ್ತಿ ದಿನವೆನ್ನುತ್ತಾರೆ. ದಶಮಿಯಂದು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿಯ ಪೂರ್ಣರೂಪ ಸಾಕಾರವಾಗುತ್ತದೆ. ಈ ದಿನ ದುರ್ಗೆ ಬೇಡಿದ್ದನ್ನ ನೀಡುತ್ತಾಳೆ ಎಂಬ ನಂಬಿಕೆಯಿದೆ.  ಈ ದಿನ ಸೀಮೋಲ್ಲಂಘನ, ಶಮೀಪೂಜೆ. ಅಪರಾಜಿತಾ ಪೂಜೆಯನ್ನೂ ಮಾಡಲಾಗುತ್ತದೆ. ಇವತ್ತು ಬನ್ನಿಮರದ ಪೂಜೆಯನ್ನೂ ಮಾಡ್ತಾರೆ.

ಇನ್ನು ಇವತ್ತು ಮೈಸೂರಿನಲ್ಲಿ ಅದ್ದೂರಿಯಾಗಿ ಜಂಬೂಸವಾರಿ ನೆರವೇರುತ್ತೆ.  ಆನೆ ಮೇಲೆ ಅಂಬಾರಿ ಸಾಗುವ ಮನಮೋಹಕ ದೃಶ್ಯ ನೋಡೋವುದೇ ಸಂಭ್ರಮ. ಜೊತೆಗೆ ಜಂಬೂಸವಾರಿ ಸಾಗುವವರೆಗೂ ನಡೆಯೋ ಕಲಾಪ್ರದರ್ಶನಗಳು ಸಂಭ್ರಮಕ್ಕೆ ಮತ್ತಷ್ಟು ಮೆರುಗುನೀಡುತ್ತವೆ.  ಈ ಸಾಂಪ್ರದಾಯಿಕ ದಸರಾ ದರ್ಬಾರ್ ನೋಡಲು ಮೈಸೂರು ಅರಮನೆಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.

Sulekha