ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಹುಷಾರ್ – 500 ರೂಪಾಯಿ ದಂಡ!
ಮುಂಬೈ: ಪಾರಿವಾಳ ಕಂಡಾಗ ಅನೇಕರು ಅವುಗಳಿಗೆ ಆಹಾರ ನೀಡುತ್ತಾರೆ. ಅಷ್ಟೇ ಅಲ್ಲದೇ ಕೆಲವೊಂದು ಬಾರಿ ಅವುಗಳನ್ನು ಹಿಡಿದು ಮುದ್ದಾಡುತ್ತಾರೆ. ಇದೀಗ ಪಾರಿವಾಳಗಳಿಂದ ಅನಾರೋಗ್ಯಕ್ಕೆ ತುತ್ತಾಗೋ ಸಾಧ್ಯತೆ ಹೆಚ್ಚಾಗಿದೆ ಅಂತಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರೋ ಮಹಾರಾಷ್ಟ್ರದ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪಾರಿವಾಳಗಳಿಗೆ ಆಹಾರ ನೀಡಿದ್ರೆ ದಂಡ ವಿಧಿಸಲಾಗುವುದು ಅಂತಾ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ಹೈಪರ್‌ಸೆನ್ಸಿಟಿವ್ ನ್ಯುಮೋನಿಯಾ ಅಥವಾ ಅತಿಸೂಕ್ಷ್ಮ ಜ್ವರದ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಒಂದು ಮಾದರಿಯ ಶ್ವಾಸಕೋಶದ ಸೋಂಕು ಆಗಿದ್ದು, ಇದಕ್ಕೆ ಪಾರಿವಾಳದ ಹಿಕ್ಕೆಯ ವಾಸನೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪಾರಿವಾಳಗಳಿಗೆ ಆಹಾರ ನೀಡಿದ್ರೆ 500 ರೂಪಾಯಿ ದಂಡ ವಿಧಿಸಲಾಗುತ್ತೆ ಅಂತಾ ನಗರದುದ್ದಕ್ಕೂ ಬ್ಯಾನರ್ ಅಳವಡಿಸಿದೆ.
ಇದನ್ನೂ ಓದಿ: ಮೆಗಾ ಸಿಟಿಗಳಲ್ಲಿ ವಿಪರೀತ ವಾಯುಮಾಲಿನ್ಯ – ಬೆಂಗಳೂರಿನ ಪೊಲ್ಯೂಷನ್ ಬಗ್ಗೆಯೂ ಆತಂಕ..!
ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಇತ್ತೀಚೆಗೆ ನಗರದಲ್ಲಿ ಹಲವಾರು ಪೋಸ್ಟರ್‌ಗಳನ್ನು ಹಾಕಿದ್ದು, ಪಾರಿವಾಳದ ಹಿಕ್ಕೆಗಳಿಂದ ಹರಡುವ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಪಾರಿವಾಳಗಳ ಹಿಕ್ಕೆಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಇತರ ಅಂಶಗಳಿಂದ ಕೆಟ್ಟ ವಾಸನೆ ಉಂಟಾಗುತ್ತದೆ. ಇದನ್ನು ಉಸಿರಾಡಿದರೆ, ಶ್ವಾಸಕೋಶದ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.
ಶ್ವಾಸಕೋಶದ ಸೋಂಕು ಪಾರಿವಾಳಗಳ ಹಿಕ್ಕೆಗಳು ಮತ್ತು ಗರಿಗಳ ಮೂಲಕ ಹರಡುತ್ತಿದೆ. ರೋಗವು ಶ್ವಾಸಕೋಶವನ್ನು ಸಂಪೂರ್ಣವಾಗಿ ಹಾನಿ ಮಾಡುತ್ತದೆ. ಈಗಾಗಲೇ ಮುಂಬೈ ಮತ್ತು ಪುಣೆಯಲ್ಲಿ ಪಾರಿವಾಳ-ಸಂಬಂಧಿತ ಅತಿಸೂಕ್ಷ್ಮ ನ್ಯುಮೋನಿಯಾ ಹೆಚ್ಚುತ್ತಿದೆ. ಶ್ವಾಸಕೋಶದ ಸಮಸ್ಯೆಯನ್ನು ಹೊಂದಿರುವ ಜನರು ಈ ರೋಗಕ್ಕೆ ಶೇ. 60 ರಿಂದ 65 ಪ್ರಮಾಣದಷ್ಟು ಬಲಿಯಾಗುವ ಸಾಧ್ಯತೆ ಇದೆ ಅಂತಾ ಮಾಹಿಮ್‌ನ ಎಸ್‌ಎಲ್ ರಹೇಜಾ ಆಸ್ಪತ್ರೆಯ ಪಲ್ಮನಾಲಜಿಸ್ಟ್ ಸಲಹೆಗಾರ ಡಾ.ಸಾರ್ಥಕ್ ರಸ್ತೋಗಿ ಹೇಳಿದ್ದಾರೆ.
ಇದು ಬ್ಯಾಕ್ಟೀರಿಯಾದ ಸೋಂಕಾಗಿದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ 15 ಪ್ರತಿಶತದಷ್ಟು ಜನರು ಸಾವಿಗೆ ಕಾರಣವಾಗಬಹುದು. ಹಿಸ್ಟೋಪ್ಲಾಸ್ಮಾಸಿಸ್ ಸಮಸ್ಯೆ ಕೂಡ ಇದರಿಂದ ಉಂಟಾಗುತ್ತದೆ. ಇದು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಶಿಲೀಂಧ್ರಗಳ ಸೋಂಕಾಗಿದೆ. ಕ್ರಿಪ್ಟೋಕೊಕಲ್ ಸೋಂಕುಗಳು ಇಮ್ಯುನೊಕೊಪ್ರೊಮೈಸ್ಡ್ ಹೋಸ್ಟ್ ಹೊಂದಿರುವ ಕೆಲವು ಜನರಲ್ಲಿ ಪಲ್ಮನರಿ ಅಥವಾ ಮೆನಿಂಜಿಯಲ್ ಸೋಂಕುಗಳಿಗೆ ಕಾರಣವಾಗಬಹುದು ಅಂತಾ ಡಾ.ಸಾರ್ಥಕ್ ಹೇಳಿದ್ದಾರೆ.