ಒಂದು ರಸ್ತೆ ಗುಂಡಿಗೆ 1 ಲಕ್ಷ ರೂಪಾಯಿ ದಂಡ! – ಏನಿದು ಸರ್ಕಾರದ ಹೊಸ ರೂಲ್ಸ್‌?

ಒಂದು ರಸ್ತೆ ಗುಂಡಿಗೆ 1 ಲಕ್ಷ ರೂಪಾಯಿ ದಂಡ! – ಏನಿದು ಸರ್ಕಾರದ ಹೊಸ ರೂಲ್ಸ್‌?

ಮುಂಬೈ: ದೇಶದ ಪ್ರಮಖ ನಗರಗಳಲ್ಲಿ ಎದುರಿಸುವ ಸಮಸ್ಯೆಗಳಲ್ಲಿ ರಸ್ತೆ ಗುಂಡಿಯೂ ಒಂದು. ರಸ್ತೆ ಗುಂಡಿಗಳಿಂದಾಗಿ ಭಾರತದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ದೂರುಗಳು ಕೇಳಿಬಂದರೂ ಕೂಡ ಪಾಲಿಕೆಗಳು ಮಾತ್ರ ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ. ಇದೀಗ ಮಹಾರಾಷ್ಟ್ರದ ಥಾಣೆ ಮುನ್ಸಿಪಲ್​ ಕಾರ್ಪೊರೇಷನ್​ ತೆಗೆದುಕೊಂಡಿರುವ ಈ ನಿರ್ಧಾರ ಇತರೆ ಪಾಲಿಕೆಗಳಿಗೆ ಮಾದರಿಯಾಗಿದೆ.

ಇದನ್ನೂ ಓದಿ: ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ವಿರೋಧ –  ರಾಷ್ಟ್ರಪತಿಯಿಂದ ಲೋಕಾರ್ಪಣೆಗೆ ವಿಪಕ್ಷಗಳ ಪಟ್ಟು

ಮಹಾರಾಷ್ಟ್ರದ ಥಾಣೆ ಮುನ್ಸಿಪಲ್​ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಗುಂಡಿ ಬಿದ್ದರೆ ಅದಕ್ಕೆ ಗುತ್ತಿಗೆದಾರರೇ ನೇರ ಹೊಣೆಯಾಗಲಿದ್ದಾರೆ. ಥಾಣೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡರೆ ಭಾರಿ ದಂಡ ವಿಧಿಸುವುದಾಗಿ ಥಾಣೆಯ ಮುನ್ಸಿಪಲ್​ ಕಾರ್ಪೊರೇಷನ್​ ಎಚ್ಚರಿಕೆ ನೀಡಿದೆ. ರಸ್ತೆಯಲ್ಲಿ ಒಂದು ಗುಂಡಿ ಬಿದ್ದರೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮಾತನಾಡಿದ್ದು, ಥಾಣೆಯಲ್ಲಿ 134 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ನಾವು ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಮಾತ್ರ ಖಚಿತಪಡಿಸಿಕೊಳ್ಳುವುದಿಲ್ಲ, ಅದರ ಜೊತೆಗೆ ರಸ್ತೆಗಳ ಗುಣಮಟ್ಟದ ಬಗ್ಗೆಯೂ ಗಮನಹರಿಸುತ್ತಿದ್ದೇವೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಒಪ್ಪಂದದಲ್ಲಿ ಒಂದು ಷರತ್ತನ್ನು ಸೇರಿಸಿದೆ. ಇನ್ನು ಮುಂದೆ ಹೊಸದಾಗಿ ನಿರ್ಮಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೆ, ಪ್ರತಿ ಗುಂಡಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇಂತಹ ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಾವು ಒಪ್ಪುವುದಿಲ್ಲ. ಕಳಪೆ ಗುಣಮಟ್ಟದ ರಸ್ತೆಯಿಂದ ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಹಾಗೆಯೇ ಕಾಮಗಾರಿಗಳು ಸುಸೂತ್ರವಾಗಿ ನಡೆದರೆ ಸಂಬಂಧಪಟ್ಟ ಅಧಿಕಾರಿಯನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

suddiyaana