ಬಿಜೆಪಿ ಅವಧಿಯ ಪಠ್ಯಗಳಿಗೆ ಕತ್ತರಿ! – ಪಾಠ ಬೋಧಿಸದಂತೆ ಶಿಕ್ಷಕರಿಗೆ ಸುತ್ತೋಲೆ?
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆಗೊಂಡಿದ್ದ ಪಠ್ಯಗಳಿಗೆ ಈ ವರ್ಷವೇ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರದಿ ಸಿದ್ದವಾಗಿದ್ದು ಸಂಪುಟ ಸಭೆಯಲ್ಲಿ ಇಂದು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಈ ಭಾರಿಯ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಪಠ್ಯ ಪುಸ್ತಕಗಳ ಸಂಪೂರ್ಣ ಪರಿಷ್ಕರಣೆಗೆ ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ಬದಲಾವಣೆ ಮಾಡಿದ್ದ ವಿವಾದಿತ ಪಾಠಗಳನ್ನ ಶಾಲೆಗಳಲ್ಲಿ ಬೋಧಿಸದಂತೆ ಸರ್ಕಾರ ಸುತ್ತೋಲೆ ಹೊರಡಿಸಲು ತೀರ್ಮಾನಿಸಿದೆ. ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿವಾದಿತ ಪಠ್ಯದ ಅಂತಿಮ ವರದಿ ಸಿದ್ಧಪಡಿಸಿದ್ದು, ಇಂದಿನ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಅಲ್ಲದೇ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಅಂತಿಮ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ತೀವ್ರಸ್ವರೂಪ ಪಡೆದ ಬಿಪರ್‌ಜಾಯ್ ಚಂಡಮಾರುತ – ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹೈ ವೇವ್ ಅಲರ್ಟ್ ಘೋಷಣೆ
ಯಾವ ಪಠ್ಯಗಳಿಗೆ ಕತ್ತರಿ?
ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ಪರಿಷ್ಕೃತಗೊಂಡ ಪಠ್ಯದಲ್ಲಿ ಸೇರ್ಪಡೆ ಮಾಡಲಾದ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿದ್ವಾಂಸರಾದ ಬನ್ನಂಜೆ ಗೋಂವಿದಾಚಾರ್ಯ ಅವರ ವಿಚಾರದ ಪಠ್ಯವನ್ನು ಸೇರಿದಂತೆ ಹಲವು ಪಠ್ಯಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಭೆಗಳನ್ನು ಮಾಡಿ ಶಿಕ್ಷಣ ಇಲಾಖೆ ಅಂತಿಮ ವರದಿಯನ್ನು ತಯಾರಿಸಿದೆ. ಹೀಗಾಗಿ ಸೂಲಿಬೆಲೆ, ಬನ್ನಂಜೆ ಗೋಂವಿದಾಚಾರ್ಯ ಮತ್ತು ಬಲಿರಾಮ್ ಹೆಡಗೆವಾರ್ ಪಠ್ಯಗಳಿಗೆ ಕತ್ತರಿ ಬೀಳುವ ಎಲ್ಲಾ ಸಾಧ್ಯತೆಗಳಿವೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ದ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ. ಎನ್‌ಸಿಇಆರ್‌ಟಿ ಸೂಚನೆ ಮೇರೆಗೆ ನಾವು ಹಿಂದೆ ಬದಲಾವಣೆ ಮಾಡಿದ್ದೆವು. ತಪ್ಪುಗಳನ್ನು ಸರಿಪಡಿಸುವ ಉದ್ದೇಶ ನಮ್ಮದಾಗಿತ್ತು. ಈಗ ದ್ವೇಷದಿಂದ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಪೋಷಕರ ಗಮನಕ್ಕೆ ತಂದು ಮಾಡಬೇಕು ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಒತ್ತಾಯಿಸಿದ್ದಾರೆ.