ಭಾರತ Vs ಪಾಕ್ ನಡುವೆ ಟೆಸ್ಟ್ ಮ್ಯಾಚ್? – 16 ವರ್ಷಗಳ ಬಳಿಕ ಬದ್ಧವೈರಿಗಳ ಕದನ?
WTC ಫೈನಲ್ ರೇಸ್.. ಏನಿದು ಲೆಕ್ಕಾಚಾರ?

ಭಾರತ Vs ಪಾಕ್ ನಡುವೆ ಟೆಸ್ಟ್ ಮ್ಯಾಚ್? – 16 ವರ್ಷಗಳ ಬಳಿಕ ಬದ್ಧವೈರಿಗಳ ಕದನ?WTC ಫೈನಲ್ ರೇಸ್.. ಏನಿದು ಲೆಕ್ಕಾಚಾರ?

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಮ್ಯಾಚ್ ಅಂದ್ರೆ ಅದ್ರ ಲೆವೆಲ್ಲೇ ಬೇರೆ. ವೀವರ್​ಶಿಪ್​ನಿಂದ ಹಿಡಿದು ಕಮರ್ಷಿಯಲ್​ವರೆಗೂ ರೆಕಾರ್ಡ್ ಮೇಲೆ ರೆಕಾರ್ಡ್ ಬ್ರೇಕ್ ಆಗುತ್ತೆ. ಇಡೀ ಜಗತ್ತಿನಾದ್ಯಂತ ಅಭಿಮಾನಿಗಳು ಕಾದು ಕುಳಿತು ಪಂದ್ಯ ನೋಡ್ತಾರೆ. ಬಟ್ ಕಳೆದ ಕೆಲ ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಆದ್ರೀಗ 16 ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಟೆಸ್ಟ್ ಸರಣಿ ನಡೆಸೋ ಚಾನ್ಸ್ ಸಿಕ್ಕಿದೆ. 2007-08ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸದ ಸಂದರ್ಭದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ವು. ಅಂದಿನಿಂದ, ಉಭಯ ತಂಡಗಳ ಮುಖಾಮುಖಿಯು ಐಸಿಸಿ ಪಂದ್ಯಾವಳಿಗಳು ಮತ್ತು ಏಷ್ಯಾ ಕಪ್‌ಗೆ ಸೀಮಿತವಾಗಿವೆ. 2012-13ರಲ್ಲಿ ಪಾಕಿಸ್ತಾನ ತಂಡದ ವೈಟ್-ಬಾಲ್ ಪ್ರವಾಸದ ನಂತರ ದ್ವಿಪಕ್ಷೀಯ ಸರಣಿಗಳಿಗೆ ಕಂಪ್ಲೀಟ್ ಬ್ರೇಕ್ ಬಿದ್ದಿದೆ. ಇದೀಗ ಏಷ್ಯಾದ ಕ್ರಿಕೆಟ್ ದಿಗ್ಗಜರ ನಡುವಿನ ಅಪರೂಪದ ಟೆಸ್ಟ್ ಪಂದ್ಯದ ಮುಖಾಮುಖಿಯ ಸಾಧ್ಯತೆಯು ಜೀವಂತವಾಗಿ ಉಳಿದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎರಡು ತಂಡಗಳು ಎದುರು ಬದುರಾಗೋ ಸಾಮರ್ಥ್ಯ ಹೊಂದಿವೆ. ಆದ್ರೆ ಅದಕ್ಕೂ ಮುನ್ನ ಉಭಯ ತಂಡಗಳೂ ಒಂದಷ್ಟು ಸವಾಲುಗಳನ್ನ ಗೆಲ್ಲಬೇಕಿದೆ.

ಭಾರತ ಮತ್ತು ಪಾಕ್ ಟೆಸ್ಟ್ ಮ್ಯಾಚ್?

ಭಾರತ ಟೆಸ್ಟ್ ತಂಡವು ಪ್ರಸ್ತುತ ಶೇಕಡಾ 68.52ರ ಗೆಲುವಿನ ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ ತಮ್ಮ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವ ಹಾದಿಯಲ್ಲಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ತವರಿನಲ್ಲಿ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನಂತರ ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅಲ್ಲದೆ ಭಾರತದ ಮುಂದೆ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ಗಳ ಸವಾಲಿನ ಸರಣಿಗಳೂ ಇವೆ. ಅದ್ರಲ್ಲೂ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವು ಭಾರತದ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ ವಿರುದ್ಧದ ವಿದೇಶಿ ಸರಣಿಯು ನಿರ್ಣಾಯಕವಾಗಿರುತ್ತದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಭಾರತ ಉತ್ತಮ ಪ್ರದರ್ಶನ ನೀಡಬೇಕಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ತನ್ನ ಹಿಂದಿನ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿರುವುದರಿಂದ, ಅದೇ ಯಶಸ್ಸನ್ನು ಕಂಟಿನ್ಯೂ ಮಾಡೋ ಭರವಸೆ ಇದೆ. ಹತ್ತು ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಐದು ಗೆಲುವುಗಳನ್ನು ಪಡೆದ್ರೂ ಕೂಡ ಭಾರತ ತಂಡ ಫೈನಲ್‌ ತಲುಪಲು ನೆರವಾಗುತ್ತದೆ. ಮತ್ತೊಂದೆಡೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪಾಕಿಸ್ತಾನ ಬರೋ ಸಾಧ್ಯತೆ ಇದ್ರೂ ಕೂಡ ಅಷ್ಟು ಸುಲಭ ಇಲ್ಲ. ಶಾನ್ ಮಸೂದ್ ನಾಯಕತ್ವದ ಪಾಕಿಸ್ತಾನ ತಂಡವು ಒಂಬತ್ತು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ತವರಿನಲ್ಲಿ ಆಡಬೇಕಾಗಿದೆ. ಪಾಕಿಸ್ತಾನ ತವರಿನ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ ಮತ್ತು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಸರಣಿ ಮಾತ್ರ ಅವರ ವಿದೇಶದ ನಿಯೋಜನೆಯಾಗಿದೆ. ಪಾಕಿಸ್ತಾನ ತಮ್ಮ ತವರಿನ ಪ್ರಯೋಜನ ಪಡೆದು ಗೆಲುವು ಸಾಧಿಸಿದ್ರೆ ಡಬ್ಲ್ಯುಟಿಸಿ ಫೈನಲ್ ತಲುಪಬಹುದು. ಡಬ್ಲ್ಯುಟಿಸಿ ಫೈನಲ್‌ಗೆ ಆಸ್ಟ್ರೇಲಿಯಾ ಕೂಡ ಪ್ರಬಲ ಸ್ಪರ್ಧಿಯಾಗಿದೆ. ಆಸೀಸ್ ತವರಿನಲ್ಲಿ ಭಾರತದ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಮತ್ತು ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನು ಹೊಂದಿದೆ. ಭಾರತ-ಪಾಕಿಸ್ತಾನ ತಂಡಗಳ ನಡುವಿನ ಡಬ್ಲ್ಯುಟಿಸಿ ಫೈನಲ್ ಆಡಬೇಕಂದ್ರೆ ಆಸ್ಟ್ರೇಲಿಯಾ ಅಂಕಪಟ್ಟಿಯಿಂದ ಕೆಳಗಿಳಿಯಬೇಕಾಗುತ್ತದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಪ್ರದರ್ಶನ ನಿರ್ಣಾಯಕವಾಗಲಿದೆ.

ಪ್ರಸ್ತುತ 2025ರ ಫೆಬ್ರವರಿ ಹಾಗೇ ಮಾರ್ಚ್​ನಲ್ಲಿ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಟೂರ್ನಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲ್ಲ ಎನ್ನಲಾಗಿದೆ. ಭದ್ರತೆಯ ಕಾರಣ ಹಾಗೇ ಭಾರತ ಸರ್ಕಾರ ಒಪ್ಪಿಗೆ ನೀಡದೇ ಇರೋ ಕಾರಣಕ್ಕೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮತ್ತೊಂದ್ಕಡೆ ಪಾಕಿಸ್ತಾನ ಮಾತ್ರ ಭಾರತ ಪಾಕ್​ಗೆ ಬರಲೇಬೇಕು ಅಂತಾ ಪಟ್ಟು ಹಿಡಿದಿದೆ. ಆದ್ರೆ ಅಂತಿಮ ನಿರ್ಧಾರ ಏನಾಗಿರುತ್ತೆ ಅನ್ನೋ ಕುತೂಹಲ ಮೂಡಿದೆ. ಇದ್ರ ನಡುವೆ ಉಭಯ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ.

Shwetha M

Leave a Reply

Your email address will not be published. Required fields are marked *