ಉಗ್ರರಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕ್‌ ಬಣ್ಣ ಬಯಲು – TRF ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಘೋಷಣೆ

ಉಗ್ರರಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕ್‌ ಬಣ್ಣ ಬಯಲು –  TRF ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಘೋಷಣೆ

ಪಾಪಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ದೊಡ್ಡ ಮುಖಭಂಗವಾಗಿದೆ.  ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) (ಟಿಆರ್‌ಎಫ್) ಅನ್ನು ಅಮೆರಿಕವು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಈ ಮೂಲಕ  ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನದ ಬಣ್ಣ ಬಯಲಾಗಿದೆ. ಈ ಮೂಲಕ ಪಾಕಿಸ್ತಾನದ ಭಯೋತ್ಪಾದಕ ದಾಳಿ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಜಯವಾಗಿದೆ.

ಲಷ್ಕರ್ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಸಂಘಟನೆಯನ್ನ ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಘೋಷಣೆ ಮಾಡಿದೆ.  ದಾಳಿಯ ಹೊಣೆಯನ್ನು ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿತು, ಆದರೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕಾರ್ಮೋಡ ಉಂಟಾಗಿತ್ತು.

ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಬಗ್ಗೆ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.   ಟಿಆರ್​ಎಫ್ ವಿರುದ್ಧದ ಈ ಕ್ರಮವು, ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಣೆ, ಭಯೋತ್ಪಾದನೆ ಎದುರಿಸಲು ಮತ್ತು ಪಹಲ್ಗಾಮ್ ದಾಳಿಗೆ ನ್ಯಾಯ ಒದಗಿಸಲು ಅಧ್ಯಕ್ಷ ಟ್ರಂಪ್ ಅವರ ಕರೆಯನ್ನು ಜಾರಿಗೆ ತರುವಲ್ಲಿ ನಮ್ಮ ಆಡಳಿತದ ಬದ್ಧತೆಯನ್ನು ತೋರುತ್ತದೆ” ಎಂದು ಹೇಳಿದ್ದಾರೆ.

ಮುಂಬೈನಲ್ಲಿ 2008ರಲ್ಲಿ ದಾಳಿಯ ಬಳಿಕ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿತ್ತು. ಇತ್ತೀಚೆಗೆ 2024ರಲ್ಲಿ ನಡೆದ ದಾಳಿ ಸೇರಿದಂತೆ ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಗಳಿಗೆ ಟಿಆರ್​ಎಫ್​ ಹೊಣೆ ಹೊತ್ತುಕೊಂಡಿದೆ ಎಂದು ಮಾರ್ಕೋ ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿಯಿಂದಾಗಿ ಪಾಕ್ ಮತ್ತು ಭಾರತದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು. ಈ ದಾಳಿಗೆ ಪ್ರತಿಯಾಗಿ, ಭಾರತವು ಮೇ 7ರ ಬೆಳ್ಳಂಬೆಳಗ್ಗೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ನಡೆಸಿತ್ತು. ನಾಲ್ಕು ದಿನಗಳ ಸಂಘರ್ಷದ ಬಳಿಕ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿದ್ದವು. ಈಗ ಇದ್ದಕ್ಕೆಲ್ಲಾ ಕಾರಣವಾಗಿದ್ದ ಉಗ್ರ ಸಂಘಟನೆಯನ್ನ ಅಮೆರಿಕವು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದು, ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಜಯವಾಗಿದೆ.

Kishor KV