ಇಸ್ರೇಲ್ ಭಾರತದ ಜೊತೆ ಬಲವಾಗಿ ನಿಲ್ಲುತ್ತದೆ – ದೆಹಲಿ ಸ್ಫೋಟವನ್ನ ಖಂಡಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಸಮೀಪ ಸೋಮವಾರ ಉಗ್ರರು ಎಸಗಿದ ಕಾರ್ ಬಾಂಬ್ ಸ್ಫೋಟವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಂಡಿಸಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ತಮ್ಮ ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಎರಡೂ ರಾಷ್ಟ್ರಗಳು ಹೊಂದಿರುವ ಕಠಿಣ ನಿಲುವನ್ನು ಅವರು ಒತ್ತಿ ಹೇಳಿದ್ದಾರೆ. ಇಂಥ ಕೃತ್ಯಗಳು ನಮ್ಮ ನಗರಗಳನ್ನು ಗುರಿಯಾಗಿಸಿಕೊಳ್ಳಬಹುದಷ್ಟೇ. ಆದರೆ, ಅದೆಂದಿಗೂ ನಮ್ಮ ದೇಶಗಳ ಮನೋಭಾವವನ್ನು ಮುರಿಯಲು ಸಾಧ್ಯವಿಲ್ಲ ಎಂದಿದ್ದಾರೆ.

ನಮ್ಮ ಆತ್ಮೀಯ ಸ್ನೇಹಿತರಾದ ನರೇಂದ್ರ ಮೋದಿ ಮತ್ತು ಭಾರತದ ಧೈರ್ಯಶಾಲಿ ಜನರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಸಾರಾ(ಪತ್ನಿ), ನಾನು ಮತ್ತು ಇಸ್ರೇಲ್ ಜನರು ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪವನ್ನು ತಿಳಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಇಸ್ರೇಲ್ ನಿಮ್ಮೊಂದಿಗೆ ಬಲವಾಗಿ ನಿಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಭಯ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಬಾಂಧವ್ಯವನ್ನು ಇದೇ ಸಂದರ್ಭದಲ್ಲಿ ನೆತನ್ಯಾಹು ಪುನರುಚ್ಚರಿಸಿದ್ದಾರೆ. ಭಾರತ-ಇಸ್ರೇಲ್ ಪರಸ್ಪರ ಹಂಚಿಕೆಯ ಮೌಲ್ಯಗಳು ಮತ್ತು ಗಟ್ಟಿ ಮನೋಭಾವದಿಂದ ಒಗ್ಗೂಡಿದ ಪ್ರಾಚೀನ ನಾಗರಿಕತೆಗಳಾಗು ಎಂದು ಬಣ್ಣಿಸಿದ್ದಾರೆ. ನಮ್ಮದು ಶಾಶ್ವತ ಸತ್ಯಗಳ ಮೇಲೆ ನಿಂತಿರುವ ಪ್ರಾಚೀನ ನಾಗರಿಕತೆಗಳು. ನಮ್ಮ ದೇಶಗಳ ಬೆಳಕು ನಮ್ಮ ಶತ್ರುಗಳ ಕತ್ತಲೆಯನ್ನು ಮೀರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ನಟಿ ನಯನತಾರಾ ದಂಪತಿ – ದೇಗುಲದಲ್ಲಿ ಸರ್ಪ ಸಂಸ್ಕಾರ ಪೂಜೆ
ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ10 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನು ಭಯೋತ್ಪಾದಕ ಕೃತ್ಯವೆಂದು ಕೇಂದ್ರ ಸರ್ಕಾರ ನಿನ್ನೆ ಅಧಿಕೃತವಾಗಿ ಘೋಷಿಸಿದ್ದು, ವಿವಿಧ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಜ್ಞರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದೆ. ಈ ತಂಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದೆ.

ನೋಡಿರಿ

