ಬ್ಯಾಂಕ್ ಲಾಕರ್ ನಲ್ಲಿದ್ದ ಹಣ ಗೆದ್ದಲುಪಾಲು – ಛಿದ್ರವಾದ ನೋಟು ನೋಡಿ ಮಹಿಳೆ ಕಂಗಾಲು..!
ಮನೆಯಲ್ಲಿ ಇದ್ದರೆ ಖರ್ಚು ಮಾಡಿಬಿಡುತ್ತೇವೆ. ಹೀಗಾಗಿ ಕಷ್ಟಕಾಲಕ್ಕೆ ಇರಲಿ ಅಂತಾ ಬ್ಯಾಂಕ್ ಲಾಕರ್‌ನಲ್ಲಿ ಹಣ ಇಡೋದು ನಮಗೆ ನಿಮಗೆಲ್ಲಾ ಗೊತ್ತಿರೋ ವಿಚಾರವೇ. ಹೀಗೆ ಇಲ್ಲೊಬ್ಬಳು ಮಹಿಳೆ ಕಷ್ಟ ಬಂದಾಗ ಸಹಾಯವಾಗುತ್ತೆ ಅಂತಾ ಬ್ಯಾಂಕ್ ಲಾಕರ್‌ನಲ್ಲಿ ಹಣ ಇಟ್ಟಿದ್ರು. ಆದ್ರೀಗ ಅದೇ ಹಣ ಛಿದ್ರ ಛಿದ್ರವಾಗಿದೆ.
ಹೌದು. ನಮ್ಮ ಹಣ, ವಸ್ತುಗಳು ಸೇಫ್ ಆಗಿರಬೇಕು ಅಂತಾ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿರುತ್ತೇವೆ. ಆದರೆ, ಅದೇ ಸೇಫ್ ಇಲ್ಲ ಅಂದ್ರೆ ಹೇಗೆ ಹೇಳಿ. ಅಲ್ಲಿರುವ ಹಣ ಎಲ್ಲ ಇಟ್ಟಲ್ಲೇ ಹಾಳಾಗಿದ್ದರೆ ಹೇಗಾಗಬೇಡ. ಅಂತಹದ್ದೇ ಅನುಭವ ರಾಜಸ್ಥಾನದ ಮಹಿಳೆಯೊಬ್ಬರಿಗೆ ಆಗಿದೆ. ಲಾಕರ್‌ನಲ್ಲಿಟ್ಟಿದ್ದ 2.15 ಲಕ್ಷ ರೂ. ಮೌಲ್ಯದ ನೋಟುಗಳು ಗೆದ್ದಲು ತಿಂದು ಹಾಳಾಗಿದ್ದು, ಲಾಕರ್ ತೆಗೆದು ನೋಡಿದ ಮಹಿಳೆ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ : ಟರ್ಕಿ ಭೂಕಂಪದಲ್ಲಿ ಭಾರತೀಯ ಬಲಿ – 166 ಗಂಟೆಗಳ ಬಳಿಕ ಬದುಕಿ ಬಂದ ಮತ್ತೊಬ್ಬನ ಕಥೆ ಎಂಥಾದ್ದು..!?
ಬ್ಯಾಂಕ್ ಲಾಕರ್‌ನಲ್ಲಿಟ್ಟ ಲಕ್ಷಾಂತರ ರೂಪಾಯಿ ಹಣ ಗೆದ್ದಲು ಪಾಲಾಗಿದೆ. ರಾಜಸ್ಥಾನದ ಉದಯ್‌ಪುರದಲ್ಲಿ ಇಂಥಾದ್ದೊಂದು ವಿಚಿತ್ರ ಘಟನೆ ನಡೆದಿದೆ. ತಮ್ಮ ಹಣ ಸುರಕ್ಷಿತವಾಗಿರಬೇಕೆಂದು ಲಾಕರ್‌ನಲ್ಲಿ ಹಣ ಇಟ್ಟವರಿಗೆ ಗೆದ್ದಲು ಹಿಡಿದ ಹಣ ನೋಡಿ ಶಾಕ್ ಆಗಿದೆ. ಲಾಕರ್‌ನಲ್ಲಿ ಇಟ್ಟಿದ್ದ 2.15 ಲಕ್ಷ ರೂ. ಮೌಲ್ಯದ ನೋಟುಗಳಲ್ಲಿ 15 ಸಾವಿರ ರೂ. ನಷ್ಟು ನೋಟುಗಳು ಸಂಪೂರ್ಣ ಹಾಳಾಗಿದ್ದು, ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ತ್ವರಿತವಾಗಿ ಹಣ ವಾಪಸ್ ನೀಡಿದ್ದಾರೆ.
ಉದಯಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕಲಾಜಿ ಗೋರಜಿ ಬ್ರಾಂಚ್‌ನಲ್ಲಿ ಘಟನೆ ನಡೆದಿದೆ. ಸುನೀತಾ ಮೆಹ್ತಾ ಎನ್ನುವವರು 265ನೇ ಸಂಖ್ಯೆಯ ಲಾಕರ್‌ನಲ್ಲಿ ನೋಟುಗಳ ಬಂಡಲ್ ಅನ್ನು ಇಟ್ಟಿದ್ದರು. ಲಾಕರ್‌ನಿಂದ ನೋಟುಗಳ ಪಾಕೆಟ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ನೋಡಿದಾಗ ನೋಟುಗಳು ಹಾಳಾಗಿರುವುದು ಕಂಡುಬಂದಿದೆ. ಸುನೀತಾ ಮೆಹ್ತಾ ಅವರು ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 500 ರೂ.ನ ನಾಲ್ಕು ನೋಟುಗಳು ಬಂಡಲ್‌ಗಳು ಹಾಳಾಗಿದ್ದು, 15,000 ರೂ. ಮೌಲ್ಯದ ನೋಟುಗಳು ಸಂಪೂರ್ಣ ನಾಶವಾಗಿವೆ. ಲಾಕರ್‌ನಲ್ಲಿರುವ ವಸ್ತುಗಳು ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬ್ಯಾಂಕ್‌ನ ಜವಾಬ್ದಾರಿಯಾಗಿದೆ ಎಂದು ಸುನೀತಾ ಮೆಹ್ತಾ ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿರುವ ಅವರು ಹಾಳಾಗಿರುವ ಹಣವನ್ನು ನೀಡುವಂತೆ ಬ್ಯಾಂಕ್‌ಗೆ ಒತ್ತಾಯಿಸಿದ್ದಾರೆ. 15 ಸಾವಿರ ರೂ. ಹಣವನ್ನು ಬ್ಯಾಂಕ್ ಅಧಿಕಾರಿಗಳು ತ್ವರಿತವಾಗಿ ಮರುಪಾವತಿ ಮಾಡಿದ್ದಾರೆ.
ಈ ಪ್ರಕರಣದ ಬಳಿಕ ಹಲವು ಗ್ರಾಹಕರು ಶುಕ್ರವಾರ ಬ್ಯಾಂಕ್‌ಗೆ ಬಂದು ಗಲಾಟೆ ಮಾಡಿದ್ದಾರೆ. ಲಾಕರ್‌ನಲ್ಲಿಟ್ಟಿರುವ ವಸ್ತುಗಳ ಸುರಕ್ಷತೆ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಗ್ರಾಹಕರ ದೂರುಗಳನ್ನು ತೆಗೆದುಕೊಂಡಿರುವ ಬ್ಯಾಂಕ್ ಅಧಿಕಾರಿಗಳು ಲಾಕರ್‌ನಲ್ಲಿ ಇಟ್ಟಿರುವ ವಸ್ತುಗಳನ್ನು ಪರಿಶೀಲಿಸಿದ್ದಾರೆ.