ಹೊಸ ವರ್ಷಕ್ಕೆ ಮೋದಿ ವಿಶ್ – ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಎಲ್ಲಾ ಕಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. 2026ಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ದೇಶದಲ್ಲಿ ಶಾಂತಿ ನೆಲೆಸಲು, ಪ್ರಜೆಗಳಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಎಕ್ಸ್ನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು, ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸಿದ್ದಾರೆ.ಹೊಸ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು ನೀವು ಮಾಡುವ ಎಲ್ಲದರಲ್ಲೂ ಸಾಧನೆಯೊಂದಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದಿದ್ದಾರೆ.
ದೇವಸ್ಥಾನದಲ್ಲಿ ವಿಶೇಷ ಪೂಜೆ
ಹೊಸ ವರ್ಷದ ಹಿನ್ನೆಲೆ ಬೆಂಗಳೂರು ನಗರಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪೂಜೆ ನೆರವೇರಿಸಲಾಗುತ್ತಿದೆ. ವರ್ಷದ ಮೊದಲ ದಿನವನ್ನು ಭಕ್ತಿಭಾವದಿಂದ ಆರಂಭಿಸಲು ಸಾವಿರಾರು ಭಕ್ತರು ಬೆಳಗ್ಗೆಯೇ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಅಭಿಷೇಕ, ಅಲಂಕಾರ ಮತ್ತು ಮಹಾ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಅಭಿಷೇಕವನ್ನು ನೆರವೇರಿಸಿದ್ದಾರೆ.
ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ದಂಡು ಹರಿದುಬಂದಿದೆ. ಅದರಲ್ಲೂ ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಹೊಸ ವರ್ಷವನ್ನು ದೇವರ ಆಶೀರ್ವಾದದೊಂದಿಗೆ ಆರಂಭಿಸಬೇಕೆಂಬ ಸಂಕಲ್ಪದೊಂದಿಗೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಸ್ಥಾನವನ್ನು ಸುಂದರ ಹೂವುಗಳಿಂದ ಅಲಂಕರಿಸಲಾಗಿದ್ದು, ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಕೇವಲ ಮಂಗಳೂರಿನ ಭಕ್ತರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಮತ್ತು ಪ್ರವಾಸಿಗರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಬೀಚ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ತಂಗಿ, ಹೊಸ ವರ್ಷದ ದಿನ ದೇವಾಲಯಗಳಿಗೆ ಭೇಟಿ ನೀಡಿದರು. ಕದ್ರಿ ದೇವಸ್ಥಾನದ ಮೇಲ್ಭಾಗದಲ್ಲಿರುವ ಏಳು ಕೆರೆಗಳಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ಕಲಶ ಸ್ನಾನ ಕೈಗೊಂಡು ಭಕ್ತರು ದೇವರ ದರ್ಶನ ಪಡೆದರು.

ನೋಡಿರಿ

