ಮಂದಿರ vs ಮಸೀದಿ – ಅಯೋಧ್ಯೆಯ ಐದು ಶತಮಾನಗಳ ಕಿತ್ತಾಟ..ಹೋರಾಟ.. ಹೇಗಿತ್ತು?

ಮಂದಿರ vs ಮಸೀದಿ – ಅಯೋಧ್ಯೆಯ ಐದು ಶತಮಾನಗಳ ಕಿತ್ತಾಟ..ಹೋರಾಟ.. ಹೇಗಿತ್ತು?

1528-2019ರವರೆಗೆ.. ಬರೋಬ್ಬರಿ ಐದು ಶತಮಾನಗಳ ಕಿತ್ತಾಟ..ಹೋರಾಟ.. ಧಾರ್ಮಿಕ ಕಲಹ. ಮಂದಿರ vs ಮಸೀದಿ. ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಅತೀ ದೊಡ್ಡ ಸಮರ ಇದಾಗಿತ್ತು. ಅದ್ರಲ್ಲೂ  ರಾಮಮಂದಿರಕ್ಕಾಗಿ ನಡೆದ ಹೋರಾಟ ಅಷ್ಟಿಷ್ಟಲ್ಲ. ಈ ಹೋರಾಟದ ಕಿಚ್ಚು ಏನು ಸ್ವಾತಂತ್ರ್ಯದ ಬಳಿಕ ಶುರುವಾಗಿದ್ದಲ್ಲ. ಇದೇನು ಬಿಜೆಪಿ ನಾಯಕರ ಹೋರಾಟ ಅಷ್ಟೇ ಆಗಿರಲಿಲ್ಲ. ಈ ಹೋರಾಟಕ್ಕೆ ಶತಮಾನಗಳ ಇತಿಹಾಸ ಇದೆ. ಯಾವಾಗ 1528ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಯ್ತೋ ಅಲ್ಲಿಂದಲೇ ರಾಮಮಂದಿರಕ್ಕಾಗಿ ಹೋರಾಟ ಶುರುವಾಗಿತ್ತು. ಬ್ರಿಟೀಷರ ಕಾಲದಲ್ಲೂ ಮಂದಿರ VS ಮಸೀದಿ ಫೈಟ್ ಮುಂದುವರಿದಿತ್ತು. 1528-2019ರವರೆಗೆ ಹೇಗೆಲ್ಲಾ ಹಗ್ಗಜಗ್ಗಾಟ ನಡೀತು? ಬ್ರಿಟೀಷರ ಆಡಳಿತದ ವೇಳೆ ಏನಾಯ್ತು? ಕೋರ್ಟ್​ನಲ್ಲಿ ಏನೆಲ್ಲಾ ಬೆಳವಣಿಗೆಗಳಾಯ್ತು? ಹಿಂದೂಗಳ ವಾದವೇನಾಗಿತ್ತು? ಮುಸ್ಲಿಮರ ಪ್ರತಿವಾದ ಹೇಗಿತ್ತು? ಇವೆಲ್ಲದರ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಾಬರ್ ಅಥವಾ ಔರಂಗಜೇಬ್.. ಮಂದಿರ ಕೆಡವಿದ್ಯಾರು? – ಬಾಬ್ರಿ ಮಸೀದಿ ಕೆಳಗೆ ಸಿಕ್ಕಿದ್ದೇನು?

1528ರಲ್ಲಿ ಮೊಘಲ್ ದೊರೆ ಬಾಬರ್​ನ ಕಮಾಂಡರ್ ಆಗಿದ್ದ ಮೀರ್ ಬಕಿ ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದ ಅಂತಾ ಹೇಳಲಾಗುತ್ತೆ. ಈ ವೇಳೆ ಸಾವಿರಾರು ಹಿಂದೂಗಳ ಹತ್ಯೆಯಾಗಿತ್ತು ಅಂತಾನೂ ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ. ಯಾವಾಗ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಯ್ತೋ ಆ ಕ್ಷಣದಿಂದಲೇ ಅಯೋಧ್ಯೆಯಲ್ಲಿ ಹೋರಾಟದ ಹೊಗೆ ಶುರುವಾಗಿತ್ತು. 1526-1857ರವರೆಗೆ ದೇಶವನ್ನ ಮೊಘಲರು ಆಳಿದ್ರು. ಮೊಘಲರ ಆಡಳಿತದ ವೇಳೆ ರಾಮಮಂದಿರದ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಆಗ ಈಗಿನಂತೆ ಯಾವುದೇ ರಾಜಕೀಯ ಪಕ್ಷಗಳಿರಲಿಲ್ಲ.. ಹಿಂದೂ ಸಂಘಟನೆಗಳಿರಲಿಲ್ಲ..ಕೇವಲ ರಾಮನ ಮೇಲಿನ ಜನರ ನಂಬಿಕೆಯಷ್ಟೇ ಇತ್ತು. ಅಯೋಧ್ಯೆ ರಾಮ ಜನಿಸಿದ ಭೂಮಿ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಸ್ಥಳ ಅನ್ನೋ ಏಕೈಕ ನಂಬಿಕೆ ಅಸಂಖ್ಯಾತ ಹಿಂದೂಗಳನ್ನ ಒಟ್ಟಾಗಿಸಿತ್ತು. ಬ್ರಿಟೀಷರ ಆಳ್ವಿಕೆ ಶುರುವಾಗೋ ಮುನ್ನ 1853ರಲ್ಲಿ ಅಂದ್ರೆ ಮೊಘಲರ ಕಾಲದಲ್ಲೇ ಅಯೋಧ್ಯೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಮಜನ್ಮಭೂಮಿ ವಿಚಾರದಲ್ಲಿ ಕೋಮು ಗಲಭೆ ನಡೆದಿತ್ತು. ನವಾಬ್ ವಾಜಿದ್ ಅಲಿ ಶಾ ರಾಜನಾಗಿದ್ದಾಗ ಹಿಂದೂ ಸಮುದಾಯದ ಮಂದಿ ಮೊದಲ ಬಾರಿಗೆ ಮಂದಿರವನ್ನ ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಾಗಿದೆ ಅಂತಾ ಹೇಳಿದ್ರು. ಇದು ಕೋಮುಗಲಭೆಗೆ ಕಾರಣವಾಗಿತ್ತು. 1859ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವೇಳೆ ಬಾಬ್ರಿ ಮಸೀದಿ ಸುತ್ತಲೂ ತಂತಿ ಬೇಲಿಯನ್ನ ಅಳವಡಿಸಲಾಯ್ತು. ಕಾಂಪೌಂಡ್​​ನ್ನ ಎರಡು ಭಾಗಗಳಾಗಿ ವಿಂಡಗಡಿಸಲಾಯ್ತು. ಇನ್ನರ್​ ಕೋರ್ಟ್​​ನಲ್ಲಿ ಮುಸ್ಲಿಮರಿ ಮತ್ತು ಔಟರ್​ ಕೋರ್ಟ್​ನಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸೋಕೆ ಅವಕಾಶ ನೀಡಲಾಯ್ತು. ಇದಾದ್ಮೇಲೆ 1885ರಲ್ಲಿ ಅಯೋಧ್ಯೆ ವಿವಾವದಕ್ಕೆ ಸಂಬಂಧಿಸಿ ಮೊದಲ ಕೇಸ್ ದಾಖಲಾಗುತ್ತೆ. ಮಹಂತ್ ರಘುಬಿರ್​ ದಾಸ್ ಅನ್ನೋರು ಫೈಜಾಬಾದ್ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರ್ತಾರೆ. ರಾಮಜನ್ಮಭೂಮಿಯಲ್ಲಿ ಅಂದ್ರೆ ಬಾಬ್ರಿ ಮಸೀದಿ ಹೊರಗಡೆ ರಾಮ್ ಚಬೂತ್ರಾ ಅಂದ್ರೆ ಒಂದು ಟೆಂಟ್​ ಹಾಕಿ ಅಲ್ಲಿ ಪೂಜೆ ಸಲ್ಲಿಸೋಕೆ ಅವಕಾಶ ಕೊಡುವಂತೆ ಮನವಿ ಮಾಡ್ತಾರೆ. ಆದ್ರೆ ಈ ಅರ್ಜಿಯನ್ನ ಕೋರ್ಟ್ ತಿರಸ್ಕರಿಸುತ್ತೆ. ಆದ್ರೂ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತೆಯೇ ಇರುತ್ತೆ. ಅಯೋಧ್ಯೆ ವಿವಾದಕ್ಕೆ ಪೂರಕವಾಗಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿವಿಧೆಡೆ ಕೋಮುಕಲಹಗಳು ನಡೀತಾನೆ ಇರುತ್ತೆ. 1944ರಲ್ಲಿ ವಕ್ಫ್​​​ನ ಕಮಿಷನರ್​ ಅಯೋಧ್ಯೆಯ ವಿವಾದಿತ ಭೂಮಿ ಮುಸ್ಲಿಮರಲ್ಲಿರೋ ಸುನ್ನಿ ಸಮುದಾಯಕ್ಕೆ ಸೇರಿದ್ದು. ಯಾಕಂದ್ರೆ ಬಾಬರ್ ಸುನ್ನಿ ಮುಸ್ಲಿಂ ಆಗಿದ್ದ ಅಂತಾ ಘೋಷಣೆ ಮಾಡ್ತಾರೆ. ಆದ್ರೆ 1949ರಲ್ಲಿ ಇಡೀ ಅಯೋಧ್ಯೆ ಕಾಂಟ್ರೋವರ್ಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿ ಬಿಡುತ್ತೆ. ಆ ಒಂದು ಘಟನೆ ಅಯೋಧ್ಯೆ ಮಾತ್ರವಲ್ಲ ಇಡೀ ಭಾರತದ ಚಿತ್ರಣವನ್ನೇ ಬದಲಿಸಿಬಿಡುತ್ತೆ.

1949ರಲ್ಲಿ ಬಾಬ್ರಿ ಮಸೀದಿಯ ಒಳ ಭಾಗದಲ್ಲಿ ಇದ್ದಕ್ಕಿದ್ದಂತೆ ರಾಮಲಲ್ಲಾನ ಮೂರ್ತಿ ಕಾಣಿಸಿಕೊಳ್ಳುತ್ತೆ. ಹಿಂದೂಗಳು ರಾಮಲಲ್ಲಾನ ಮೂರ್ತಿ ಉದ್ಭವವಾಗಿದೆ ಅಂತಾ ಹೇಳಿದ್ರೆ, ಅತ್ತ ಮುಸ್ಲಿಮರು ಇದು ಹಿಂದೂಗಳೇ ಇಟ್ಟಿರೋ ಮೂರ್ತಿ ಅಂತಾ ಆರೋಪಿಸಿ ಕೇಸ್ ದಾಖಲಿಸ್ತಾರೆ. ಹಿಂದೂಗಳು ಕೂಡ ಕೋರ್ಟ್ ಮೆಟ್ಟಿಲೇರ್ತಾರೆ. ಬಳಿಕ ಆಗಿನ ಸರ್ಕಾರ ಬಾಬ್ರಿ ಮಸೀದಿ ಇದ್ದ ಜಾಗವನ್ನ ವಿವಾದಿತ ಪ್ರದೇಶ ಅಂತಾ ಘೋಷಿಸಿ, ಯಾರಿಗೂ ಎಂಟ್ರಿ ಇಲ್ಲ ಅಂತಾ ಘೋಷಣೆ ಮಾಡಿ ಗೇಟ್​​ನ್ನ ಲಾಕ್​ ಮಾಡಿಬಿಡುತ್ತೆ.

ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಲೇ ಆಗಿನ ಪ್ರಧಾನಿ ಜವಹರಲಾಲ್​ ನೆಹರೂ ಬಾಬ್ರಿ ಮಸೀದಿ ಆವರಣದಿಂದ ರಾಮನ ಮೂರ್ತಿಯನ್ನ ಕೂಡಲೇ ತೆಗೆಯುವಂತೆ ಸೂಚಿಸ್ತಾರೆ. ಆದ್ರೆ ಸ್ಥಳೀಯ ಆಫೀಸರ್ ಆಗಿದ್ದ ಕೆಕೆ ನಾಯರ್ ಮಾತ್ರ ಪ್ರಧಾನಿಯ ಸೂಚನೆಯನ್ನ ತಿರಸ್ಕರಿಸ್ತಾರೆ. ಅಲ್ಲಿಂದ ಮೂರ್ತಿಯನ್ನ ತೆಗೆಯೋಕೆ ಸಾಧ್ಯವೇ ಇಲ್ಲ. ಮೂರ್ತಿಯನ್ನ ಸ್ಥಳಾಂತರ ಮಾಕಡೋಕೆ ಮುಂದಾದ್ರೆ ದೊಡ್ಡ ಗಲಭೆಯೇ ಆಗಬಹುದು ಅಂತಾ ಪ್ರಧಾನಿಗೆ ವರದಿ ಮಾಡ್ತಾರೆ.  ​

ಇದಾದ ನಂತ್ರ 1950-1959ರವರೆಗೂ ಹಿಂದೂ ಅರ್ಚಕರು ಪೂಜೆಗೆ ಅವಕಾಶ ನೀಡುವಂತೆ ಕೋರಿ ಕೋರ್ಟ್​ಗೆ ಹಲವು ಬಾರಿ ಅರ್ಜಿಗಳನ್ನ ಸಲ್ಲಿಸ್ತಾರೆ. ನಿರ್ಮೋಹಿ ಅಖಾರ ವಿವಾದಿತ ಜಾಗವನ್ನ ತಮ್ಮ ಸುಪರ್ದಿಗೆ ನೀಡುವಂತೆ ಮನವಿ ಮಾಡುತ್ತೆ. ಇಡೀ ವಿವಾದಿತ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಲಾಗುತ್ತೆ. ಒಳಗಡೆ ಯಾರಿಗೂ ಪ್ರವೇಶ ಇರೋದಿಲ್ಲ.  ರಾಮಲಲ್ಲಾ ಮೂರ್ತಿ ಕೂಡ ಮಸೀದಿಯಲ್ಲಿ ಅದೇ ಜಾಗದಲ್ಲಿರುತ್ತೆ. ಆವರಣದ ಹೊರಗೆ ಮಾತ್ರ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಕ್ಕೆ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತೆ.

ಇನ್ನು ವಿವಾದಿತ ಪ್ರದೇಶ ತಮಗೆ ಸೇರಿದ್ದು ಅಂತಾ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಕೋರ್ಟ್​ ಕಲಹ ನಡೆಯುತ್ತೆ. 1959ರಲ್ಲಿ ನಿರ್ಮೋಹಿ ಅಖಾರ ಜಾಗ ನಮಗೆ ಸೇರಿದ್ದು ಅಂತಾ ಅರ್ಜಿ ಸಲ್ಲಿಸಿದ್ರೆ, 1961ರಲ್ಲಿ ಸುನ್ನಿ ವಕ್ಫ್​​ ಬೋರ್ಡ್ ಭೂಮಿ ತಮ್ಮ ಸ್ವಾಧೀನಕ್ಕೆ ಸೇರಿದ್ದು ಅಂತಾ ಕೋರ್ಟ್​ಗೆ ಹೋಗುತ್ತೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಅಯೋಧ್ಯೆ ವಿಚಾರದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳೋಕೆ ಶುರುವಾಗುತ್ತೆ. 1986ರಲ್ಲಿ ಬಾಬ್ರಿ ಮಸೀದಿ ಆವರಣದಲ್ಲಿದ್ದ ರಾಮಲಲ್ಲಾನ ಮೂರ್ತಿಗೆ ಪೂಜೆ ಸಲ್ಲಿಸೋಕೆ ಅವಕಾಶ ನೀಡಲಾಗುತ್ತೆ. ಮುಸ್ಲಿಂ ಸಮುದಾಯದಿಂದ ಭಾರಿ ಪ್ರತಿಭಟನೆಗಳು ಕೂಡ ನಡೆಯುತ್ತೆ. 1989ರಲ್ಲಿ ಬಾಬ್ರಿ ಮಸೀದಿ ಪಕ್ಕದ ಭೂಮಿಯಲ್ಲೇ ವಿಶ್ವಹಿಂದೂ ಪರಿಷತ್ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತೆ. ಅಷ್ಟೇ ಅಲ್ಲ, ಮಸೀದಿಯನ್ನ ಬೇರೆಡೆಗೆ ಶಿಫ್ಟ್ ಮಾಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗುತ್ತೆ. ಈ ಎಲ್ಲಾ ಅರ್ಜಿಗಳನ್ನ ಫೈಜಾಬಾದ್​ ಜಿಲ್ಲಾ ಕೋರ್ಟ್​​​ನಿಂದ ಹೈಕೋರ್ಟ್​​ಗೆ ವರ್ಗಾವಣೆ ಮಾಡಲಾಗುತ್ತೆ. ಈ ಮಧ್ಯೆ 1990ರಲ್ಲಿ ವಿಶ್ವ ಹಿಂದೂ ಪರಿಷತ್​ನ ಕೆಲ ಕಾರ್ಯಕರ್ತರು ಬಾಬ್ರಿ ಮಸೀದಿಗೆ ಒಂದಷ್ಟು ಹಾನಿ ಮಾಡ್ತಾರೆ. ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಗಲಾಟೆಯಾಗುತ್ತೆ. ಆಗಿನ ಪ್ರಧಾನಿ ಚಂದ್ರಶೇಖರ್​​ ಅವರು ಮಧ್ಯಪ್ರವೇಶಿಸಿ ಸಂಧಾನಕ್ಕೆ ಯತ್ನಿಸ್ತಾರೆ. ಆದ್ರೆ ಅದು ಕೂಡ ಫೇಲ್ ಆಗುತ್ತೆ. 1990ರಲ್ಲಿ ಬಿಜೆಪಿಯ ಎಲ್​.ಕೆ.ಅಡ್ವಾಣಿ ರಥಯಾತ್ರೆ ಕೈಗೊಳ್ತಾರೆ. 1992ರ ಡಿಸೆಂಬರ್​​ನಲ್ಲಿ ಬಾಬ್ರಿ ಮಸೀದಿಯನ್ನ ಕರಸೇವಕರು ಧ್ವಂಸ ಮಾಡ್ತಾರೆ. ಇದಾದ ಬಳಿಕ ದೇಶದಲ್ಲಿ ಸಾಕಷ್ಟು ಕೋಮುಗಲಭೆಗಳಾಗುತ್ತೆ. 1993ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಬ್ಲಾಸ್ಟ್​ಗಳಾಗುತ್ತೆ. 2002ರಲ್ಲಿ ಗುಜರಾತ್​​ನ ಗೋಧ್ರಾದಲ್ಲೂ ಭಯಾನಕ ಹಿಂಸಾಚಾರ ನಡೆಯುತ್ತೆ. ಇದ್ರ ಜೊತೆ ಜೊತೆಗೆ ಭೂಮಿಗಾಗಿ ಕೋರ್ಟ್​ ಕದನ ಕೂಡ ತಾರಕಕ್ಕೇರುತ್ತೆ. 2002ರಲ್ಲಿ ಅಲಹಾಬಾದ್​ ಹೈಕೋರ್ಟ್​ನ ಮೂವರು ಜಡ್ಜ್​​ಗಳ ಬೆಂಚ್ ಪ್ರಕರಣದ ವಿಚಾರಣೆ ಆರಂಭಿಸುತ್ತೆ. 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ವಿವಾದಿತ ಜಾಗದಲ್ಲಿ ಸರ್ವೆ ನಡೆಸುತ್ತೆ. ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರದ ಕುರುಹುಗಳು ಪತ್ತೆಯಾಗಿದೆ ಅಂತಾ ವರದಿ ಸಲ್ಲಿಸುತ್ತೆ. ಸುಮಾರು 8 ವರ್ಷಗಳ ವಿಚಾರಣೆ ಬಳಿಕ 2010ರಲ್ಲಿ ಅಲಹಬಾದ್ ಹೈಕೋರ್ಟ್​ ಅಯೋಧ್ಯೆ ಭೂಮಿ ವಿವಾದಕ್ಕೆ ಸಂಬಂಧಿಸಿ ತೀರ್ಪು ನೀಡುತ್ತೆ. ಬಾಬ್ರಿ ಮಸೀದಿ ಇದ್ದ ಜಾಗವನ್ನ ಮೂರು ಪಾರ್ಟ್​​ಗಳಾಗಿ ವಿಂಗಡಿಸಲಾಗುತ್ತೆ. ಒಂದು ಭಾಗ ನಿರ್ಮೋಹಿ ಅಖಾರದ ಸ್ವಾಧೀನಕ್ಕೆ, ಮತ್ತೊಂದು ಭಾಗ ರಾಮಲಲ್ಲಾನಿಗಾಗಿ ಮತ್ತೊಂದು ಭಾಗ ಉತ್ತರಪ್ರದೇಶದ ಸುನ್ನಿ ವಕ್ಫ್​​ ಬೋರ್ಡ್​ ಸ್ವಾಧೀನಕ್ಕೆ ನೀಡಲಾಗುತ್ತೆ. ಈ ಆದೇಶ ಬಂದ ಒಂದೇ ತಿಂಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸುತ್ತವೆ. 2011ರಲ್ಲಿ ಹೈಕೋರ್ಟ್ ತೀರ್ಪಿಗೆ ಸರ್ವೋಚ್ಛ ನ್ಯಾಯಾಲಯ ತಡೆಯೊಡ್ಡುತ್ತೆ. ಅಷ್ಟೇ ಅಲ್ಲ, ಅಲಹಾಬಾದ್ ಹೈಕೋರ್ಟ್​ ಆದೇಶವೇ ವಿಚಿತ್ರವಾಗಿದೆ ಅಂತಾ ಸುಪ್ರೀಂಕೋರ್ಟ್ ಟೀಕಿಸುತ್ತೆ. ಈ ನಡುವೆ 2016ರಲ್ಲಿ ಬಿಜೆಪಿ ನಾಯಕ ಮತ್ತು ಹಿರಿಯ ವಕೀಲ ಸುಬ್ರಹ್ಮಣ್ಯನ್ ಸ್ವಾಮಿ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸ್ತಾರೆ. ಇದ್ರ ಬೆನ್ನಲ್ಲೇ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಸಿಗುತ್ತೆ. 2017ರ ಆಗಸ್ಟ್​ನಲ್ಲಿ ಉತ್ತರಪ್ರದೇಶದ ಶಿಯಾ ವಕ್ಫ್​​ ಬೋರ್ಡ್​ ಸುನ್ನಿ ಅಲ್ಲ, ಶಿಯಾ ವಕ್ಫ್ ಬೋರ್ಡ್ ಮಸೀದಿಯನ್ನ ಲಕ್ನೋದಲ್ಲಿ ಮುಸ್ಲಿಮರೇ ಹೆಚ್ಚಿರುವ ಜಾಗದಲ್ಲಿ ನಿರ್ಮಾಣ ಮಾಡಬೇಕು. ಅಯೋಧ್ಯೆಯ ವಿವಾದಿತ ಜಾಗದಲ್ಲಿ ಬೇಡ. ಜೊತೆಗೆ ರಾಮ ಮಂದಿರವನ್ನ ಅಯೋಧ್ಯೆಯ ವಿವಾದಿತ ಜಾಗದಲ್ಲೇ ನಿರ್ಮಾಣ ಮಾಡಲು ಅನುಮತಿ ನೀಡಿ ಅನ್ನೋದಾಗಿ ಸುಪ್ರೀಂಕೋರ್ಟ್​ಗೆ ಮನವಿ ಮಾಡುತ್ತೆ.​​ ಆದ್ರೆ ಸುನ್ನಿ ವಕ್ಫ್​​ ಬೋರ್ಡ್​ ಮಾತ್ರ ಅಯೋಧ್ಯೆಯ ವಿವಾದಿತ ಜಾಗದಲ್ಲೇ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಅಂತಾ ವಾದ ಮಾಡುತ್ತೆ. ಕೊನೆಗೆ 2019ರ ಆಗಸ್ಟ್​ 6ರಿಂದ ಸುಪ್ರೀಂಕೋರ್ಟ್​ನಲ್ಲಿ ಡೇ ಟು ಡೇ ಹೀಯರಿಂಗ್ ಅಂದ್ರೆ ನಿತ್ಯ ವಿಚಾರಣೆ ವಿಚಾರಣೆ ಶುರುವಾಗುತ್ತೆ. ಅಕ್ಟೋಬರ್​ 16ರವರೆಗೂ 40 ದಿನಗಳ ಕಾಲ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯಿ ನೇತೃತ್ವದ 5 ಮಂದಿ ನ್ಯಾಯಮೂರ್ತಿಗಳ ಪೀಠ ನಾನ್​​ಸ್ಟಾಪ್ ವಿಚಾರಣೆ ನಡೆಸುತ್ತೆ. ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದ ವಾದ-ಪ್ರತಿವಾದವನ್ನ ಆಲಿಸ್ತಾರೆ. ಅಂತಿಮವಾಗಿ 2019ರ ಅಕ್ಟೋಬರ್ 15ರಂದು ಸುಪ್ರೀಂಕೋರ್ಟ್ ಅಯೋಧ್ಯೆ ಭೂಮಿ ವಿವಾದಕ್ಕೆ ಸಂಬಂಧಿಸಿ ತನ್ನ ಅಂತಿಮ ಆದೇಶವನ್ನ ನೀಡುತ್ತೆ. ವಿವಾದಿತ 2.77 ಎಕರೆ ಭೂಮಿಯನ್ನ ರಾಮಲಲ್ಲಾನಿಗೆ ನೀಡಿ ತೀರ್ಪು ನೀಡುತ್ತೆ. ಹಾಗೆಯೇ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡುತ್ತೆ. ಹಾಗೆಯೇ ಸುನ್ನಿ ವಕ್ಫ್​​ ಬೋರ್ಡ್​ಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಮಿಯನ್ನ ಕೂಡ ಮಂಜೂರು ಮಾಡಲಾಗುತ್ತೆ. ಸುಪ್ರೀಂಕೋರ್ಟ್​ನ ಈ ಐತಿಹಾಸಿಕ ತೀರ್ಪಿನಿಂದಾಗಿ ಹಿಂದೂಗಳ ಸುಮಾರು 500 ವರ್ಷಗಳ ಕನಸು ನನಸಾಗಿದೆ. 500 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಮತ್ತೊಂದೆಡೆ ಅಯೋಧ್ಯೆಯಲ್ಲಿ ಮಸೀದಿ ಕೂಡ ನಿರ್ಮಾಣವಾಗ್ತಾ ಇದೆ.

 

Sulekha