ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್! – ಮೂರು ದಿನಗಳ ಕಾಲ ದೇವಾಲಯಗಳಲ್ಲಿ ವಿಶೇಷ ಪೂಜೆ

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿವೆ. ಕೆಲವೇ ದಿನಗಳಲ್ಲಿ ಜೆಡಿಎಸ್, ಬಿಜೆಪಿ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಲಿದೆ. ಅದಕ್ಕೂ ಮುನ್ನ ದಳಪತಿಗಳು ಟೆಂಪಲ್ ರನ್ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಹರಿದು ಬಂತು ಭಕ್ತಸಾಗರ – ಮೊದಲ ದಿನದ ಆನ್ಲೈನ್ ಕಾಣಿಕೆ ಬರೋಬ್ಬರಿ 3.17 ಕೋಟಿ ರೂ.!
ಹೌದು, ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳು ಟೆಂಪಲ್ ರನ್ ಪ್ಲಾನ್ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಅಂತಿಮ ಮಾತುಕತೆಗೂ ಮುನ್ನ ದೇವೇಗೌಡರ ಕುಟುಂಬ ದೇವರ ಮೊರೆ ಹೋಗುತ್ತಿದೆ. ಮೂರು ದಿನಗಳ ಕಾಲ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಕುಟುಂಬ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. .
ಗುರುವಾರದಿಂದ ದೇವಾಲಯಗಳಿಗೆ ಯಾತ್ರೆ ಆರಂಭ ಮಾಡಿದ್ದು, ಜನವರಿ 27ರವರೆಗೆ ಕುಟುಂಬಸ್ಥರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡು ದಿನ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ವಿಶೇಷ ಪೂಜೆ ಬಳಿಕ ದೇವೇಗೌಡರು ಹಾಗೂ ಕುಟುಂಬಸ್ಥರು ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ದೇವೇಗೌಡರ ಕುಟುಂಬ ಜನವರಿ 25 ರಂದು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಕೆ, ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ 26 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಕುಕ್ಕೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಜನವರಿ 27 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಅಂದೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.