ಜಮ್ಮು ಕಾಶ್ಮೀರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ – ಭಾರೀ ಹಿಮಪಾತದಿಂದಾಗಿ ರಸ್ತೆ ಸಂಚಾರ ಬಂದ್‌, ವಿಮಾನ ಹಾರಾಟ ರದ್ದು

ಜಮ್ಮು ಕಾಶ್ಮೀರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ – ಭಾರೀ ಹಿಮಪಾತದಿಂದಾಗಿ ರಸ್ತೆ ಸಂಚಾರ ಬಂದ್‌, ವಿಮಾನ ಹಾರಾಟ ರದ್ದು

ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ನಿರಂತರವಾಗಿ ಹಿಮ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಯಿಂದ ಹೊರಬರಲಾಗದೆ ಪರದಾಡುವಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಿಮ ಬೀಳುತ್ತಿರುವುದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದೆ.  ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗುವ ವಿಮಾನಗಳನ್ನು ರದ್ದು ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಇಡೀ ದಿನ ಹಿಮಪಾತವಾಗುತ್ತಿದೆ. ಹವಾಮಾನ ವೈಪರಿತ್ಯದಿಂದಾಗಿ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ. ಏರ್ಪೋರ್ಟ್​​ನಲ್ಲಿ ಹಿಮದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ  ಎಲ್ಲವೂ ಮುಗಿಸಿ ಇನ್ನೇನು ವಿಮಾನ ಹಾರಾಟ ಆರಂಭಿಸಬೇಕು ಎನ್ನುವ ಹೊತ್ತಿಗೆ ಮತ್ತೆ ಅಷ್ಟೇ ಪ್ರಮಾಣದ ಹಿಮ ಬೀಳುತ್ತಿದೆ.

ಇದನ್ನೂ ಓದಿ: ಕಾನೂನು ಅನ್ವಯ ಅನುಮತಿ ಸಿಗದ ಹೊರತು ಕಾರ್ಖಾನೆ ನಡೆಸುವಂತಿಲ್ಲ – ಯತ್ನಾಳ್‌ ಕುಟುಂಬಕ್ಕೆ ಹೈಕೋರ್ಟ್‌ ಸೂಚನೆ

ಮುಂಜಾನೆಯಿಂದಲೇ ರಸ್ತೆಗಳಲ್ಲಿನ ಹಿಮ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ. ಜಾರುವ ರಸ್ತೆಗಳಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಾದ್ಯಂತ ಹಿಮಪಾತದಿಂದ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಹಿಮಪಾತ ಮತ್ತು ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಮತ್ತು ಇತರ ಹೆದ್ದಾರಿಗಳನ್ನು ಮುಚ್ಚಲಾಗಿದೆ.

ಇನ್ನೂ, ರಂಬನ್ ಜಿಲ್ಲೆಯ ಶೆರ್ಬಿಬಿಯಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದವು. ಇನ್ನು ಕೆಲವು ಕಡೆ ಬಯಲು ಪ್ರದೇಶಗಳಲ್ಲಿ ಮಳೆಯಾಗಿದ್ದರೆ, ಜಮ್ಮುವಿನ ಕಿಶ್ತ್ವಾರ್, ದೋಡಾ, ರೀಡಿಂಗ್, ರಂಬನ್, ಪೂಂಚ್, ರಾಜೌರಿ ಮತ್ತು ಕಥುವಾ ಜಿಲ್ಲೆಗಳಲ್ಲಿ ಭಾರಿ ಹಿಮಪಾತ ವರದಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಬಂಡಿಪೋರಾ, ಬಾರಾಮುಲ್ಲಾ, ಗಂದರ್​ಬಾಲ್, ಕುಪ್ವಾರಾ, ದೋಡಾ, ಕಿಶ್ತ್ವಾರ್, ಪೂಂಚ್ ಮತ್ತು ರಂಬನ್ ಜಿಲ್ಲೆಗಳಲ್ಲಿ ಹಿಮಪಾತವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಪ್ರದೇಶಗಳಲ್ಲಿ ವಾಸಿಸುವ ಜನ ಮುಂಜಾಗ್ರತೆ ವಹಿಸುವಂತೆ ಮತ್ತು ಹಿಮಪಾತ ಪೀಡಿತ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಕಾಶ್ಮೀರ ಕಣಿವೆ ಮತ್ತು ಜಮ್ಮು ವಿಭಾಗದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು. ಆದರೆ ಎಂಜಿನಿಯರ್​ಗಳು ತಕ್ಷಣ ಸಮಸ್ಯೆಯನ್ನು ಪರಿಹರಿಸಿದ್ದಾರೆ.

Shwetha M