ಪಂಚರಾಜ್ಯ ಚುನಾವಣಾ ಸಮೀಕ್ಷೆ – ಯಾವ ರಾಜ್ಯದಲ್ಲಿ ಯಾವ ಪಕ್ಷ ಮೈಲುಗೈ ಸಾಧಿಸಲಿದೆ ? ಇಲ್ಲಿದೆ ಸಂಪೂರ್ಣ ವಿವರ..
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ ಮತ್ತು ಮಿಜೋರಾಂ ಈ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆ ಅಂತ್ಯವಾಗಿದ್ದು, ಈಗ ಚುನಾವಣೋತ್ತರ ಸಮೀಕ್ಷಾ ವರದಿ ಕೂಡ ಬಹಿರಂಗವಾಗಿದೆ. ಹಾಗಿದ್ರೆ ಎಕ್ಸಿಟ್ಪೋಲ್ ರಿಸಲ್ಟ್ನಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲ್ಲುವ ಸಾಧ್ಯತೆ ಇದೆ? ನೆಕ್ ಟು ನೆಕ್ ಫೈಟ್ ಇರುವ ರಾಜ್ಯ ಯಾವುದು? ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಬಹುದು? ಇವೆಲ್ಲದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ಜನ್ಕೀ ಬಾತ್ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ 230 ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ಬಿಜೆಪಿ 100-123 ಸ್ಥಾನಗಳನ್ನ ಗೆಲ್ಲಬಹುದಂತೆ. ಇನ್ನು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 102-125 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ಮ್ಯಾಜಿಕ್ ನಂಬರ್ 116. ಹೀಗಾಗಿ ಡಿಸೆಂಬರ್ 3ರಂದು ರಿಸಲ್ಟ್ ದಿನದಂದು ಮಧ್ಯಪ್ರದೇಶ ಚುನಾವಣಾ ಫಲಿತಾಂಶ ಅತ್ಯಂತ ಇಂಟ್ರೆಸ್ಟಿಂಗ್ ಆಗಿರಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಭಾರಿ ಫೈಟ್ ನಡೀಬಹುದು.
ಜನ್ಕೀ ಬಾತ್ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ 199 ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ನ್ನ ಮಣಿಸಿ ಬಿಜೆಪಿ ಈ ಬಾರಿ ಅಧಿಕಾರಕ್ಕೇರಲಿದೆ. ರಾಜಸ್ಥಾನದಲ್ಲಿ ಬಿಜೆಪಿಗೆ 100-122 ಸ್ಥಾನಗಳು ಸಿಗಬಹುದು. ಕಾಂಗ್ರೆಸ್ 62-85 ಕ್ಷೇತ್ರಗಳನ್ನ ಗೆಲ್ಲಬಹುದು. ಸ್ಥಳೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 14 ರಿಂದ 15 ಕ್ಷೇತ್ರ ಇತರರ ಪಾಲಾಗಬಹುದು ಅಂತಾ ಜನ್ಕೀ ಬಾತ್ ಭವಿಷ್ಯ ನುಡಿದಿದೆ.
ಇದನ್ನೂ ಓದಿ:CBI ಕಗ್ಗಂಟು.. ಡಿಕೆಶಿ ಮುಂದಿವೆ ಸಾಲು ಸಾಲು ಸವಾಲು – ಡಿಸಿಎಂಗೆ ಅಕ್ರಮ ಆಸ್ತಿಯೇ ಉರುಳು?
ಹಾಗೆಯೇ ಛತ್ತೀಸ್ಗಢದ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಜನ್ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ 41-53 ಕ್ಷೇತ್ರಗಳನ್ನ ಗೆಲ್ಲಬಹುದು. ಛತ್ತೀಸ್ಗಢದಲ್ಲಿ ಅಧಿಕಾರಕ್ಕೇರಲು ಬೇಕಾಗಿರೋದು 46 ಸ್ಥಾನಗಳು. ಹೀಗಾಗಿ ಮತ್ತೊಮ್ಮೆ ಕಾಂಗ್ರೆಸ್ ಆಡಳಿತಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಎದುರಾಳಿ ಬಿಜೆಪಿ ಛತ್ತೀಸ್ಗಢದಲ್ಲಿ 36-48 ಸ್ಥಾನಗಳನ್ನ ಗೆಲ್ಲಬಹುದು ಅಂತಾ ಜನ್ಕೀ ಬಾತ್ ವರದಿ ಮಾಡಿದೆ. ಹೀಗಾಗಿ ಛತ್ತೀಸ್ಗಢದಲ್ಲಿ ಒಂದಷ್ಟು ಫೈಟ್ ಏರ್ಪಡುವ ಸಾಧ್ಯತೆ ಕೂಡ ಇದೆ.
ಇನ್ನು ಜನ್ಕೀ ಬಾತ್ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ 119 ಕ್ಷೇತ್ರಗಳ ತೆಲಂಗಾಣ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್ಎಸ್ 40-55 ಕ್ಷೇತ್ರಗಳನ್ನ ಗೆಲ್ಲಬಹುದಂತೆ. ಕಾಂಗ್ರೆಸ್ 48-64 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದ್ಯಂತೆ. ತೆಲಂಗಾಣದಲ್ಲಿ ಬಿಜೆಪಿ 7-13 ಕ್ಷೇತ್ರಗಳನ್ನ ಗೆಲ್ಲುವ ಸಾಧ್ಯತೆ ಇದೆ. ಹಾಗೆಯೇ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 4-7 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ಜನ್ಕೀ ಬಾತ್ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ಇಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿ ಕೆಸಿಆರ್ ಈ ಬಾರಿ ಹೊಡೆತ ತಿಂತಿರೋದು ಸ್ಪಷ್ಟವಾಗಿದೆ.
ಹಾಗೆಯೇ ಜನ್ಕೀ ಬಾತ್ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ 40 ಕ್ಷೇತ್ರಗಳ ಮಿಜೋರಾಮ್ನಲ್ಲಿ ಸ್ಥಳೀಯ ಪಕ್ಷ ಎಂಎನ್ಎಫ್ 10-14 ಕ್ಷೇತ್ರಗಳನ್ನ ಗೆಲ್ಲಬಹುದು. ZPM 15-25 ಕ್ಷೇತ್ರಗಳನ್ನ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ 5-9 ಕ್ಷೇತ್ರಗಳನ್ನ ಗೆಲ್ಲಬಹುದು. ಹಾಗೆಯೇ ಬಿಜೆಪಿ 2 ಸ್ಥಾನಗಳನ್ನ ಗೆದ್ರೂ ಗೆಲ್ಲಬಹುದು ಅಂತಾ ಜನ್ ಕೀ ಬಾತ್ ವರದಿ ಮಾಡಿದೆ.
ಇನ್ನು ದೈನಿಕ್ ಭಾಸ್ಕರ್ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ 95-115 ಸ್ಥಾನಗಳನ್ನ ಗೆಲ್ಲಬಹುದಂತೆ. ಕಾಂಗ್ರೆಸ್ 105-120 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದ್ಯಂತೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೆಕ್ ಟು ನೆಕ್ ಫೈಟ್ ಗ್ಯಾರಂಟಿ ಅನ್ನೋದು ದೈನಿಕ್ ಭಾಸ್ಕರ್ ಸಮೀಕ್ಷಾ ವರದಿಯಿಂದ ಬಹಿರಂಗವಾಗಿದೆ.
ಹಾಗೆಯೇ ದೈನಿಕ್ ಭಾಸ್ಕರ್ ರಾಜಸ್ಥಾನ ಚುನಾವಣೆ ವಿಚಾರವಾಗಿ ನಡೆಸಿರುವ ಸಮೀಕ್ಷಾ ವರದಿ ಪ್ರಕಾರ ಬಿಜೆಪಿ 98-105 ಸ್ಥಾನಗಳನ್ನ ಗೆಲ್ಲಬಹುದು. ಅಂದ್ರೆ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೇರೋದು ಗ್ಯಾರಂಟಿ. ಹಾಗೆಯೇ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ 85-95 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ನಲ್ಲಿ ವರದಿಯಾಗಿದೆ.
ಇನ್ನು ರಿಪಬ್ಲಿಕ್ ಟಿವಿ ಮತ್ತು ಮ್ಯಾಟ್ರಿಜ್ ಜಂಟಿಯಾಗಿ ನಡೆಸಿರುವ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ 58-68 ಸ್ಥಾನಗಳನ್ನ ಗೆಲ್ಲೋ ಮೂಲಕ ಮೊದಲ ಬಾರಿಗೆ ಅಧಿಕಾರಕ್ಕೇರುವ ಸಾಧ್ಯತೆ ಇದೆ. ತೆಲಂಗಾಣದಲ್ಲಿ ಅಧಿಕಾರಕ್ಕೇರಲು ಬೇಕಾಗಿರೋದು 60 ಸ್ಥಾನಗಳು. ಇನ್ನು ಕೆಸಿಆರ್ ಪಕ್ಷ ಬಿಆರ್ಎಸ್ 40-55 ಕ್ಷೇತ್ರಗಳನ್ನ ತೆಲಂಗಾಣದಲ್ಲಿ ಗೆಲ್ಲಬಹುದಂತೆ. ಹೀಗಾಗಿ ಮ್ಯಾಜಿಕ್ ನಂಬರ್ ಮುಟ್ಟುವಲ್ಲಿ ಕೆಸಿಆರ್ ಫೇಲ್ ಆಗ್ತಿದ್ದಾರೆ ಅಂತಾ ರಿಪಬ್ಲಿಕ್ ಟಿವಿ ಮತ್ತು ಮ್ಯಾಟ್ರಿಜ್ ಸಮೀಕ್ಷಾ ವರದಿ ಭವಿಷ್ಯ ನುಡಿದಿದೆ.
ಇನ್ನು CNN NEWS 18 ವರದಿ ಪ್ರಕಾರ ಮಧ್ಯಪ್ರದೇದಲ್ಲಿ ಬಿಜೆಪಿ 116 ಸ್ಥಾನಗಳನ್ನ ಗೆಲ್ಲಬಹುದಂತೆ. ಕಾಂಗ್ರೆಸ್ 11 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ಭವಿಷ್ಯ ನುಡಿದಿದೆ. ಹಾಗೆಯೇ ರಾಜಸ್ಥಾನದಲ್ಲಿ ಬಿಜೆಪಿ 115, ಕಾಂಗ್ರೆಸ್ 71 ಸ್ಥಾನಗಳನ್ನ ಗೆಲ್ಲಬಹುದು ಅಂತಾ ವರದಿ ಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ 54, ಬಿಆರ್ಎಸ್ 52 ಮತ್ತು ಬಿಜೆಪಿ 7 ಸ್ಥಾನಗಳನ್ನ ಗೆಲ್ಲಬಹುದು ಅಂತಾ CNN NEWS 18 ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನ ನೋಡಿದ್ರೆ ಕಾಂಗ್ರೆಸ್ ಮತ್ತು ಬಿಆರ್ಎಸ್ ಮಧ್ಯೆ ತೆಲಂಗಾಣದಲ್ಲಿ ಭಾರಿ ಹಗ್ಗ-ಜಗ್ಗಾಟ ನಡೆಯಲಿದೆ. ಇನ್ನು ಛತ್ತೀಸ್ಗಢದಲ್ಲಿ ಕಾಂಗ್ರೆಸ್ 49 ಕ್ಷೇತ್ರಗಳನ್ನ ಗೆಲ್ಲಬಹುದು. ಬಿಜೆಪಿ 38 ಸ್ಥಾನಗಳನ್ನ ಗೆಲ್ಲಬಹುದು ಅಂತಾ CNN NEWS 18 ವರದಿ ಮಾಡಿದೆ.
ಒಟ್ಟಾರೆಯಾಗಿ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಹೆಚ್ಚು ಫೇವರ್ ಆಗಿದ್ರೂ ನೆಕ್ ಟು ನೆಕ್ ಫೈಟ್ ನಡೆಯೋ ಸಾಧ್ಯತೆಯೇ ಹೆಚ್ಚಿದೆ. ಇನ್ನು ರಾಜಸ್ಥಾನವನ್ನ ಬಿಜೆಪಿ ಕ್ಲೀನ್ಸ್ವೀಪ್ ಮಾಡೋದು ಆಲ್ಮೋಸ್ಟ್ ಗ್ಯಾರಂಟಿ ಅಂತಾನೆ ಹೇಳಬಹುದು. ಕಳೆದ ಕೆಲ ದಶಕಗಳಿಂದ ರಾಜಸ್ಥಾನದಲ್ಲಿ ಒಂದೇ ಪಕ್ಷ ನಿರಂತರವಾಗಿ ಗೆದ್ದಿದ್ದೇ ಇಲ್ಲ. ಪ್ರತೀ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗ್ತಾನೆ ಇದೆ. ಇನ್ನು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವಲ್ಲಿ ಮತ್ತೊಮ್ಮೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಕ್ಕಿಂತ ಇಂಟ್ರೆಸ್ಟಿಂಗ್ ಆಗಿರೋದು ತೆಲಂಗಾಣದ ರಿಸಲ್ಟ್. ಕೆಸಿಆರ್ಗೆ ಈ ಬಾರಿ ಕಾಂಗ್ರೆಸ್ ಅಕ್ಷರಶ: ಶಾಕ್ ನೀಡುವಂತೆ ಕಾಣ್ತಾ ಇದೆ. ಒಂದು ವೇಳೆ ಕಾಂಗ್ರೆಸ್ಗೂ ಮೆಜಾರಿಟಿ ಸಿಕ್ಕಿಲ್ಲ ಅಂದ್ರೆ, ಇತ್ತ ಬಿಜೆಪಿಯೂ ಕೆಲ ಸ್ಥಾನಗಳನ್ನ ಗೆಲ್ಲುವಲ್ಲಿ ಸಕ್ಸಸ್ ಆಯ್ತು ಅಂದ್ರೆ ಬಿಜೆಪಿ ಮತ್ತು ಕೆಸಿಆರ್ ಕೈಜೋಡಿಸುತ್ತಾ? ಈವರೆಗೆ ಬದ್ಧ ವೈರಿಗಳಾಗಿದ್ದವರು ಸರ್ಕಾರ ರಚನೆಗೆ ಒಂದಾಗ್ತಾರಾ ಅನ್ನೋ ಕುತೂಹಲ ಇದೆ. ಹಾಗೆಯೇ ಅಸಾದುದ್ದೀನ್ ಓವೈಸಿಗೆ ಕೂಡ ತೆಲಂಗಾಣದಲ್ಲಿ ಕಿಂಗ್ ಮೇಕರ್ ಆಗುವ ಅವಕಾಶ ಇದೆ. ಫೈನಲ್ ರಿಸಲ್ಟ್ ಡೇನಂದು ತೆಲಂಗಾಣ ರಿಸಲ್ಟ್ ನಿಜಕ್ಕೂ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಡಿಸೆಂಬರ್ 3ರಂದು ಕೌಟಿಂಗ್ ನಡೆಯಲಿದ್ದು, ಐದು ರಾಜ್ಯಗಳ ಚುಕ್ಕಾಣಿ ಹಿಡಿಯೋರು ಯಾರು ಅನ್ನೋದು ಸ್ಪಷ್ಟವಾಗಲಿದೆ. ನಿಮ್ಮ ಪ್ರಕಾರ, ಫೈನಲ್ ರಿಸಲ್ಟ್ ಏನಾಗಬಹುದು? ಮಧ್ಯಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್ ಆಗುತ್ತಾ? ರಾಜಸ್ಥಾನದಲ್ಲಿ ಬಿಜೆಪಿಯೇ ಗೆಲ್ಲೋದು ಗ್ಯಾರೆಂಟೀನಾ? ಛತ್ತೀಸ್ಗಢದಲ್ಲಿ ಕಾಂಗ್ರೆಸ್ಗೆ ಟಕ್ಕರ್ ಕೊಡೋ ಚಾನ್ಸಸ್ ಇದ್ಯಾ? ಇಲ್ಲಾ ಮತ್ತೊಮ್ಮೆ ಭೂಪೇಶ್ ಭಘೇಲ್ ಸಿಎಂ ಆಗ್ತಾರಾ? ಹಾಗೆಯೇ ತೆಲಂಗಾಣದಲ್ಲಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸುತ್ತಾ? ಇಲ್ಲಾ ಬದ್ಧ ವೈರಿಗಳು ದೋಸ್ತಿಯಾಗ್ತಾರಾ? ಅನ್ನೋದನ್ನು ಚುನಾವಣಾ ಫಲಿತಾಂಶ ಬರುವವರೆಗೂ ಕಾದು ನೋಡಬೇಕಾಗಿದೆ.