ಭಿಕ್ಷಾಟನೆಯೇ ಇವರ ಬ್ಯುಸಿನೆಸ್‌.. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಒಡೆಯರು ಈ ಖತರ್ನಾಕ್‌ ಸಹೋದರರು!

ಭಿಕ್ಷಾಟನೆಯೇ ಇವರ ಬ್ಯುಸಿನೆಸ್‌.. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಒಡೆಯರು ಈ ಖತರ್ನಾಕ್‌ ಸಹೋದರರು!

ಕಳ್ಳತನ, ಭ್ರಷ್ಟಾಚಾರದಿಂದ ಲಕ್ಷಾಧಿಪತಿಗಳಾಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಸಹೋದರರಿಬ್ಬರು ಭಿಕ್ಷಾಟನೆಯಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಭಿಕ್ಷಾಟನೆಯನ್ನೇ ದಂಧೆಯಾಗಿಸಿಕೊಂಡಿದ್ದ ಬೃಹತ್ ಜಾಲವನ್ನು ಪೊಲೀಸರು ಬೇಧಿಸಿದ್ದು, ಹಲವರನ್ನು ಬಂಧಿಸಿದ್ದಾರೆ.

ತೆಲಂಗಾಣದಲ್ಲಿ ಸಹೋದರರಿಬ್ಬರು ಭಿಕ್ಷಾಟನೆಯನ್ನೇ ದಂಧೆಯನ್ನಾಗಿ ಪರಿವರ್ತಿಸಿಕೊಂಡಿದ್ದರು. ನಿರುದ್ಯೋಗಿ ಅಸಹಾಯಕ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿಕೊಂಡಿದ್ದ ಇವರು ಕಮೀಷನ್ ನೀಡುವ ನೆಪವೊಡ್ಡಿ ಭಿಕ್ಷಾಟನೆ ಮಾಡುವಂತೆ ಅವರಿಗೆ ಆಮಿಷವೊಡ್ಡುತ್ತಿದ್ದರು. ಅಷ್ಟೇ ಅಲ್ಲದೇ ಅಮ್ಮ ಚೇಯಿತಾ ಫೌಂಡೇಶನ್ ಹೆಸರಿನಲ್ಲಿ ನಕಲಿ ಚಾರಿಟಿಯೊಂದನ್ನು ಸ್ಥಾಪಿಸಿದ್ದರು. ಇದೀಗ ಈ ಖತರ್ನಾಕ್‌ ಸಹೋದರರು ಪೋಲಿಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ: ಮಗನ ಮದುವೆಗೆ ತಂದೆಯೇ ದುಷ್ಮನ್!‌ – ಗಡ್ಡ ಶೇವ್‌ ಮಾಡಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ಅಪ್ಪ!

ಸಂಘಟಿತ ಭಿಕ್ಷಾಟನೆ ವಿರುದ್ಧ ಹೈದರಾಬಾದ್‌ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆಯೊಂದಿಗೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಕೇತವಾತ್ ರವಿ ಹಾಗೂ ಕೇತಾವರ್ ಮಂಗು ಸಹೋದರರು ಅಮ್ಮ ಚೇಯಿತಾ ಫೌಂಡೇಶನ್ ಹೆಸರಿನಲ್ಲಿ ನಕಲಿ ಚಾರಿಟಿಯೊಂದನ್ನು ಸ್ಥಾಪಿಸಿದ್ದರು. ನಿಗರ್ತಿಕರ ಹೆಸರಿನಲ್ಲಿ ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ರಸ್ತೆಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಬಸ್‌ ನಿಲ್ದಾಣಗಳಲ್ಲಿ ತಾವು ನೇಮಿಸಿದವರ ಮೂಲಕ ಹಣ ಸಂಗ್ರಹಿಸುತ್ತಿದ್ದರು. ನಾದರ್‌ಗುಲ್, ಬಡಂಗ್‌ಪೇಟ್ ಮತ್ತು ತುರ್ಕಯಂಜಾಲ್ ಸೇರಿದಂತೆ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದರು. ಭಿಕ್ಷಾಟನೆ ಮಾಡುತ್ತಿದ್ದವರಿಗೆ ಕಮೀಷನ್ ನೀಡುತ್ತಿದ್ದರು. ಹೀಗೆ ಸಂಗ್ರಹಿಸಿದ ಹಣದಲ್ಲಿ ಅವರು 80 ಲಕ್ಷ ಮೌಲ್ಯದ ಆಸ್ತಿಯನ್ನೇ ಖರೀದಿಸಿದ್ದರು ಎಂಬ ವಿಚಾರ ಬಯಲಾಗಿದೆ.

ಹೈದರಾಬಾದ್‌  ನಗರದ ಆಗ್ನೇಯ ವಲಯ ಹಾಗೂ ಮಲಕ್‌ಪೇಟ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಬೇಧಿಸಿದ್ದಾರೆ. ಈ ಭಿಕ್ಷಾಟನೆ ದಂಧೆಯಲ್ಲಿ ಏಜೆಂಟ್‌ಗಳಾಗಿದ್ದ 10 ಜನರನ್ನು ಬಂಧಿಸಿದ್ದಾರೆ. ಇವರಿಂದ ಲಕ್ಷಾಂತರ ಮೌಲ್ಯದ ಆಸ್ತಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿ ಗಣೇಶ್  ಇತರ 8 ಜನ ಆರೋಪಿಗಳಿಗೆ ಭಿಕ್ಷಾಟನೆಗೆ ಕಲೆಕ್ಷನ್ ಬಾಕ್ಸ್, ಗುರುತಿನ ಚೀಟಿ, ವಿಸಿಟಿಂಗ್ ಕಾರ್ಡ್ ನೀಡಿ ಅವರಿಗೆ ಹೇಗೆ ಭಿಕ್ಷಾಟನೆ ಮಾಡಬೇಕು ಎಂದು ನಿರ್ದೇಶನ ನೀಡುತ್ತಿದ್ದ. ಇದಕ್ಕಾಗಿ ನಿರುದ್ಯೋಗಿ ಮಹಿಳೆಯರು ವಿದ್ಯಾರ್ಥಿಗಳನ್ನು ಕಮೀಷನ್ ಆಧಾರದಲ್ಲಿ ನೇಮಿಸಿದ್ದ. ಪ್ರತಿಯೊಬ್ಬರೂ ಆಯ್ದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲಬೇಕಾಗಿತ್ತು ಮತ್ತು ರಾತ್ರಿ 9 ಗಂಟೆಗೆ ಅವರನ್ನು ಕರೆದೊಯ್ದು ಮನೆಗೆ ಬಿಡಲಾಗುತ್ತಿತ್ತು. ದಿನದ ಸಂಗ್ರಹವನ್ನು ಎಣಿಸಿದ ನಂತರ, ಒಟ್ಟು ಮೊತ್ತದ 35 ಪ್ರತಿಶತವನ್ನುಅವರಿಗೆ ನೀಡಲಾಗುತ್ತಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.

ಈ ಪ್ರಕರಣದಲ್ಲಿ ಬಂಧಿತರಾದ ಇತರರನ್ನು ರಮಾವತ್ , ನೆನವತ್ ಶೈಲಜಾ, ಬನವತ್ ಸಂಗೀತಾ, ರಮಾವತ್ ಯೆಲ್ಲಮ್ಮ, ಕೇತಾವತ್ ಮೆಣಸಿನಕಾಯಿ, ಕೇತಾವತ್ ಸರೋಜಾ ಮತ್ತು ಸಬಾವತ್ ಸುನೀತಾ ಎಂದು ಗುರಿಸಲಾಗಿದೆ. ಈ ಎಲ್ಲರೂ ನಲ್ಗೊಂಡ ಮೂಲದವರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.  ಬಂಧಿತರಿಂದ 1,38,262 ಮೌಲ್ಯದ ಆಸ್ತಿ, ನೋಂದಣಿ ಪತ್ರಗಳು, ಎರಡು ಪ್ರಯಾಣಿಕ ಆಟೋಗಳು ಮತ್ತು 1.22 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಂಚನೆ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ.

suddiyaana