ಮೂರು ರಾಜ್ಯಗಳ ಸೋಲಿನ ಕಹಿ ನಡುವೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು! – ರೇವಂತ್ ರೆಡ್ಡಿ ಸೋತರೂ ಸಿಎಂ ಆಗ್ತಾರಾ?

ದಕ್ಷಿಣ ಭಾರತದಲ್ಲಿ ಕರ್ನಾಟಕದ ನಂತರ ಮತ್ತೊಂದು ರಾಜ್ಯ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ವಂತ ಶಕ್ತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಕಾಂಗ್ರೆಸ್ ಮೂರು ರಾಜ್ಯಗಳ ಸೋಲಿನ ಕಹಿಯನ್ನು ನುಂಗಿಕೊಂಡಿದೆ. 2014ರಿಂದ ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ ಎಸ್ ಅನ್ನು ಮತದಾರರು ಸೋಲಿಸಿ ಮನೆಗೆ ಕಳಿಸಿದ್ದಾರೆ.
ತೆಲಂಗಾಣದಲ್ಲಿ 66 ಸೀಟು ಗೆದ್ದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಳೆದ ಎರಡು ಅವಧಿಯಲ್ಲಿ ಆಡಳಿತ ನಡೆಸಿದ್ದ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ ಎಸ್, ಕೇವಲ 37 ಸೀಟು ಗೆದ್ದು ಮುಖಭಂಗ ಅನುಭವಿಸಿದೆ. ಇನ್ನು ಬಿಜೆಪಿ 9 ಹಾಗೂ ಎಂಐಎಂ 7 ಸೀಟುಗಳನ್ನು ತಮ್ಮದಾಗಿಸಿಕೊಂಡಿವೆ.
ಇದನ್ನೂ ಓದಿ: ಮೂರು ರಾಜ್ಯಗಳಲ್ಲಿ ಗೆದ್ದು ಬೀಗಿದ ಬಿಜೆಪಿ – ಪಕ್ಷದೊಳಗಿನ ಕಚ್ಚಾಟವೇ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ?
ರೇವಂತ್ ರೆಡ್ಡಿ ಮುಖ್ಯಮಂತ್ರಿ ಆಗ್ತಾರಾ?
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಗರಿಗೆದರಿದೆ. ತೆಲಂಗಾಣ ಕಾಂಗ್ರೆಸ್ ನ ಅಧ್ಯಕ್ಷ ರೇವಂತ್ ರೆಡ್ಡಿ ನೂತನ ಮುಖ್ಯಮಂತ್ರಿಯಾಗಿ ಆಧಿಕಾರ ಸ್ವೀಕರಿಸುವುದು ನಿಶ್ಚಿತ ಎನ್ನಲಾಗಿದೆ.
ಒಂದೇ ಕ್ಷೇತ್ರದಲ್ಲಿ ಸೋತ ಹಾಲಿ–ಭಾವಿ ಸಿಎಂ!
ತೆಲಂಗಾಣ ಚುನಾವಣೆಯ ಇನ್ನೊಂದು ವಿಶೇಷ ಏನಂದ್ರೆ ಒಂದೇ ಮತಕ್ಷೇತ್ರದಲ್ಲಿ ಹಾಲಿ ಹಾಗೂ ಭಾವಿ ಮುಖ್ಯಮಂತ್ರಿಗಳು ಸೋತಿರುವುದು. ಕಾಮರೆಡ್ಡಿ ಕ್ಷೇತ್ರದಲ್ಲಿ ರೇವಂತ ರೆಡ್ಡಿ ಹಾಗೂ ಕೆ.ಚಂದ್ರಶೇಖರ ರಾವ್ ಸ್ಪರ್ಧೆಗೆ ಇಳಿದಿದ್ದರು. ಆದರೆ ಇಲ್ಲಿ ಇವರಿಬ್ಬರೂ ಸೋತಿದ್ದು ಬಿಜೆಪಿಯ ಕಾಟಿಪಲ್ಲಿ ವೆಂಕಟರಮಣರೆಡ್ಡಿ ಗೆದ್ದುಬೀಗಿದ್ದಾರೆ. ಆದರೆ ರೇವಂತ ರೆಡ್ಡಿ ಕೊಡಂಗಲ್ ಕ್ಷೇತ್ರದಲ್ಲಿ ಗೆದ್ದು ಸಿಎಂ ಆಗುವ ಅವಕಾಶ ಉಳಿಸಿಕೊಂಡಿದ್ದಾರೆ.