ನಮ್ಮ ಮೆಟ್ರೋ ದರ 5% ಏರಿಕೆ – ಸಿಎಂ, ಡಿಸಿಎಂಗೆ ಪತ್ರ ಬರೆದ ಸಂಸದ ತೇಜಸ್ವಿ ಸೂರ್ಯ

ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿದೆ. ಪದೇ ಪದೇ ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಆಗಲಿದೆ. ನಮ್ಮ ಮೆಟ್ರೋ ಟಿಕೆಟ್ ದರ ಫೆಬ್ರವರಿಯಿಂದ ಮತ್ತಷ್ಟು ಏರಿಕೆಯಾಗುವ ಕುರಿತು ಚರ್ಚೆ ನಡೆಯುತ್ತಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಮೆಟ್ರೋ ದರ ಏರಿಕೆಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಲಕ್ಕುಂಡಿಯಲ್ಲಿ ನಿಧಿ ಹುಡುಕಾಟ ಆರಂಭ – ನಿಧಿ ಸಿಕ್ಕರೆ ಸಂಪೂರ್ಣ ಗ್ರಾಮವೇ ಸ್ಥಳಾಂತರ?
ಪ್ರತಿ ವರ್ಷ ದರ ಏರಿಕೆ ಮಾಡಬೇಕು ಎಂದು FFC ಸಲಹೆ ಕೊಟ್ಟಿದೆ. ಪ್ರತಿ ವರ್ಷ ಗರಿಷ್ಠ ಶೇ.5ರಷ್ಟು ದರ ಹೆಚ್ಚಿಸಲು ಫೇರ್ ಫಿಕ್ಸೇಶನ್ ಕಮಿಟಿ ಶಿಫಾರಸ್ಸು ಮಾಡಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ಮೆಟ್ರೋ ದರ ಏರಿಕೆಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋಗೆ ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು ಹಾಗೂ ಅಧಿಕಾರಿಗಳ ತಪ್ಪು ಲೆಕ್ಕ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ಗೆ ಕಳುಹಿಸಲಾಗಿದೆ.
ಇನ್ನು ಸೇವ್ ಬೆಂಗಳೂರು ಕಮಿಟಿ ಹಾಗೂ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಬಿಎಂಆರ್ಸಿಎಲ್ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಮುಂದಿನ ತಿಂಗಳಿಂದ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದೆ. ಪದೇಪದೇ ದರ ಏರಿಕೆ ಪ್ರಯಾಣಿಕರ ಮೇಲೆ ಭಾರೀ ಹೊರೆ ಆಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೋಡಿರಿ

