ನಿನ್ನ ಕೊನೆಯ ಆಸೆ ಏನೆಂದು ಕೇಳಿ ರಸಗುಲ್ಲಾ ತಂದುಕೊಟ್ರು – 8ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸೇರಿ ಸಹಪಾಠಿಯನ್ನೇ ಕೊಂದ್ರು

ನಿನ್ನ ಕೊನೆಯ ಆಸೆ ಏನೆಂದು ಕೇಳಿ ರಸಗುಲ್ಲಾ ತಂದುಕೊಟ್ರು – 8ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸೇರಿ ಸಹಪಾಠಿಯನ್ನೇ ಕೊಂದ್ರು

ಓದುವ ವಯಸ್ಸಿನಲ್ಲಿ ಅಡ್ಡದಾರಿ ಹಿಡಿದ ಮಕ್ಕಳು ಕೊನೆಗೆ ತಮ್ಮ ಸ್ನೇಹಿತನನ್ನೇ ಕೊಲೆ ಮಾಡಿರುವ ಘೋರ ಘಟನೆ ನಡೆದಿದೆ. ಸ್ನೇಹಿತನನ್ನೇ ಕಿಡ್ನ್ಯಾಪ್ ಮಾಡಿ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಾಲಕರು ಕೊನೆಗೆ ಅಟ್ಟಹಾಸ ಮೆರೆದಿದ್ದಾರೆ. 15 ವರ್ಷದ ಮೂವರು ವಿದ್ಯಾರ್ಥಿಗಳು ದುಷ್ಕೃತ್ಯ ಎಸಗಿದ್ದು ಪೊಲೀಸರೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ : ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ ಬಿಎಂಟಿಸಿ ಬಸ್‌ ಪಲ್ಟಿ

8ನೇ ತರಗತಿ ವಿದ್ಯಾರ್ಥಿಯನ್ನು ಮೂವರು ಸಹಪಾಠಿಗಳೇ (Friends) ಅಪಹರಣ (Kidnap) ಮಾಡಿ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದೆ. ಮೃತ ವಿದ್ಯಾರ್ಥಿಯ ಕುಟುಂಬದವರು ತಮ್ಮ ಮಗ ಕಾಣೆಯಾಗಿದ್ದಾನೆ  ಕೃಷ್ಣನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಸೈಕಲ್ ತೆಗೆದುಕೊಂಡು ಗೆಳೆಯರನ್ನು ಭೇಟಿಯಾಗಲು ತೆರಳುವುದಾಗಿ ಹೇಳಿ ಹೋದವನು ಮತ್ತೆ ವಾಪಸ್ ಮನೆಗೆ ಬಂದಿಲ್ಲ ಎಂದು ಬಾಲಕನ ಪೋಷಕರು ತಿಳಿಸಿದ್ದಾರೆ. ದೂರಿನನ್ವಯ ಕೃಷ್ಣನಗರ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದಾಗಿ ಸತ್ಯ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮೃತ ವಿದ್ಯಾರ್ಥಿಯ ಮೂವರು ಸಹಪಾಠಿಗಳನ್ನು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳು ಗೇಮಿಂಗ್ ಲ್ಯಾಪ್‍ಟಾಪ್ (Laptop) ಖರೀದಿ ಮಾಡಲು ಮೃತನ ಕುಟುಂಬದಿಂದ ಮೂರು ಲಕ್ಷ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಅಪಹರಣಕಾರರ ಬೇಡಿಕೆಯನ್ನು ಪೂರೈಸಲು ಕುಟುಂಬ ವಿಫಲವಾದಾಗ, ಅವರು ವಿದ್ಯಾರ್ಥಿಯ ಕತ್ತು ಹಿಸುಕಿ ಕೊಂದಿದ್ದಾರೆ. ಸಾಯಿಸುವುದಕ್ಕೂ ಮುನ್ನ ಅಪಹರಣಕಾರರು ಬಾಲಕನ ಬಳಿ ‘ನಿನ್ನ ಕೊನೆಯ ಆಸೆ ಏನು?’ ಎಂದು ಕೇಳಿದ್ದಾರೆ. ಅಂತೆಯೇ ಬಾಲಕನ ಆಸೆ ಪೂರೈಸಲು ರಸಗುಲ್ಲಾ (Rasagulla) ಮತ್ತು ತಂಪು ಪಾನೀಯಗಳನ್ನು ನೀಡಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಬಾಲಕನ ಶವವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಾಲಾಪರಾಧಿ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

suddiyaana