ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ! – ಆಮೇಲೆ ನಡೆದಿದ್ದು ಭಯಾನಕ
ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್ ನೋಡಿ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಆ ಮಗುವನ್ನು ಕತ್ತು ಹಿಸುಕಿ ಕೊಂದು ಹಾಕಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
15 ವರ್ಷದ ಬಾಲಕಿ ಅಂಬಾಜಾರಿ ಪ್ರದೇಶದ ನಿವಾಸಿಯಾಗಿದ್ದಾಳೆ. ಈಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಬಳಿಕ ಆಕೆ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:2 ದಿನದ ಮಗುವನ್ನು ಕೆರೆಗೆ ಎಸೆದ ತಾಯಿ – ಕಂದನನ್ನು ಉಳಿಸಿದ್ದು ಯಾರು ಗೊತ್ತಾ?
ಬಾಲಕಿ ಲೈಂಗಿಕ ಶೋಷಣೆಗೆ ಒಳಗಾಗಿರುವುದನ್ನು ತನ್ನ ತಾಯಿ ಬಳಿ ಮರೆ ಮಾಚಿದ್ದಳು. ದಿನೇ ದಿನೇ ಹೊಟ್ಟೆ ಮುಂದಕ್ಕೆ ಬರುತ್ತಿರುವುದನ್ನು ಕಂಡು ತಾಯಿ ಮಗಳ ಬಳಿ ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೆಲವು ಆರೋಗ್ಯ ಸಮಸ್ಯೆಯಿದೆ ಅದರಿಂದಾಗಿ ಹೀಗಾಗುತ್ತಿದೆ ಅಂತಾ ಹೇಳಿದ್ದಾಳೆ. ಬಳಿಕ ಯೂಟ್ಯೂಬ್ ವಿಡಿಯೋ ನೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲದೇ ಆ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು, ಮನೆಯಲ್ಲಿಯೇ ಪೆಟ್ಟಿಗೆಯೊಂದರಲ್ಲಿ ಮಗುವಿನ ಶವ ಹಾಕಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ತಾಯಿ ಮನೆಗೆ ಬಂದಿದ್ದಾರೆ. ಬಳಿಕ ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಸತ್ಯ ಬಯಲಾಗಿದೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲದೇ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಕೊಲೆ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.