ICCಯ 10 ಟ್ರೋಫಿ ಗೆದ್ದ ಆಸಿಸ್ – ಭಾರತಕ್ಕೆ 2ನೇ ಸ್ಥಾನ.. ಉಳಿದವರೆಷ್ಟು?
ಚಾಂಪಿಯನ್ಸ್ ಟ್ರೋಫಿ ಟೈಟಲ್ ಯಾರಿಗೆ?

ICCಯ 10 ಟ್ರೋಫಿ ಗೆದ್ದ ಆಸಿಸ್ – ಭಾರತಕ್ಕೆ 2ನೇ ಸ್ಥಾನ.. ಉಳಿದವರೆಷ್ಟು?ಚಾಂಪಿಯನ್ಸ್ ಟ್ರೋಫಿ ಟೈಟಲ್ ಯಾರಿಗೆ?

ಐಸಿಸಿ ಅಂದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ. ಪ್ರಸ್ತುತ ಈ ಮಂಡಳಿಗೆ ನಮ್ಮ ಭಾರತ ಮೂಲದ ಜೈಶಾ ಅಧ್ಯಕ್ಷರಾಗಿದ್ದಾರೆ. ಇದು ಕ್ರಿಕೆಟ್‌ನ ಜಾಗತಿಕ ಆಡಳಿತ ಮಂಡಳಿಯಾಗಿದ್ದು, ವಿವಿಧ ಪ್ರತಿಷ್ಠಿತ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತದೆ. ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ಈ ನಾಲ್ಕು ಮಾದರಿಯ ಐಸಿಸಿ ಟೂರ್ನಿಗಳಲ್ಲಿ ಸದಸ್ಯತ್ವ ಪಡೆದಿರುವ ಅರ್ಹ ರಾಷ್ಟ್ರಗಳ ನಡುವೆ ಫೈಟ್ ನಡೆಯುತ್ತೆ. ಪ್ರತಿಷ್ಠಿತ ಪೈಪೋಟಿಯೆಂದೇ ಪರಿಗಣಿಸಲ್ಪಟ್ಟಿರೋ ಈ ಟೂರ್ನಿಯಲ್ಲಿ ಕೆಲವೇ ಕೆಲ ತಂಡಗಳು ಮಾತ್ರವೇ ಟೈಟಲ್ ಗೆಲ್ಲೋಕೆ ಸಾಧ್ಯವಾಗಿದೆ. ಈ ಪೈಕಿ ಆಸ್ಟ್ರೇಲಿಯಾ ನಂಬರ್ 1 ಪ್ಲೇಸ್.

ಇದನ್ನೂ ಓದಿ : 1,800 ಕೋಟಿ ವೆಚ್ಚ.. ಸಿಕ್ಕಿದ್ದು ಬಿಡಿಗಾಸು – ಪಾಕ್ ತಂಡದಲ್ಲಿ ಸೋತ ಪ್ಲೇಯರ್ಸ್ ಗೆ ಗೇಟ್ ಪಾಸ್?

ಐಸಿಸಿ ಇತಿಹಾಸದಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡವಾಗಿದ್ದು, ಒಟ್ಟು 10 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಹಾಗೇ ಎಲ್ಲಾ ಮಾದರಿಯಲ್ಲೂ ಚಾಂಪಿಯನ್ ಆಗಿರೋ ಏಕೈಕ ತಂಡ ಕೂಡ ಆಸ್ಟ್ರೇಲಿಯಾನೇ. 1987, 1999, 2003, 2007, 2015 ಮತ್ತು ಇತ್ತೀಚೆಗೆ 2023 ರಲ್ಲಿನ ಗೆಲುವು ಸೇರಿ ಒಟ್ಟು ಆರು ಐಸಿಸಿ ಏಕದಿನ ವಿಶ್ವಕಪ್ ಗೆಲುವು ಕಂಡಿದೆ. ಹಾಗೇ 2021 ರಲ್ಲಿ ಐಸಿಸಿ ಟಿ 20 ವಿಶ್ವಕಪ್ ಮತ್ತು 2006 ಮತ್ತು 2009 ರಲ್ಲಿ ಎರಡು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಇನ್ನು 2023 ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಗೆದ್ದು ಬೀಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಬಲ ತಂಡವಾಗಿರುವ ಟೀಂ ಇಂಡಿಯಾ ಅತೀ ಹೆಚ್ಚು ಐಸಿಸಿ ಟ್ರೋಫಿಗಳನ್ನ ಗೆದ್ದಿರೋ ತಂಡಗಳ ಪೈಕಿ ಸೆಕೆಂಡ್ ಪ್ಳೇಸ್ ನಲ್ಲಿದೆ. ಭಾರತ ಒಟ್ಟಾರೆ 6 ಐಸಿಸಿ ಟ್ರೋಫಿಗಳನ್ನ ಗೆಲ್ಲೋ ಮೂಲಕ  ಎರಡನೇ ಸ್ಥಾನದಲ್ಲಿದೆ. 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. ಹಾಗೇ 2011 ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಭಾರತ ಮತ್ತೊಂದು ವಿಶ್ವಕಪ್ ಗೆಲುವು ಕಂಡಿದೆ. 2007 ಮತ್ತು 2024ರಲ್ಲಿ ಟಿ-20 ವಿಶ್ವಕಪ್​ಗಳನ್ನ ಗೆದ್ದಿದೆ. 2002 ರಲ್ಲಿ ಜಂಟಿ ವಿಜೇತರಾಗಿ ಮತ್ತು 2013 ರಲ್ಲಿ ಸೇರಿದಂತೆ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಟೈಟಲ್ ಎತ್ತಿ ಹಿಡಿದಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಒಟ್ಟು 5 ಐಸಿಸಿ ಟ್ರೋಫಿಗಳನ್ನು ಗೆದ್ದ ಅದ್ಭುತ ಇತಿಹಾಸವನ್ನು ಹೊಂದಿದೆ. ಕ್ಲೈವ್ ಲಾಯ್ಡ್ ನೇತೃತ್ವದಲ್ಲಿ 1975 ಮತ್ತು 1979 ರಲ್ಲಿ ಸತತ 2 ಸಲ ಏಕದಿನ ವಿಶ್ವಕಪ್‌ಗಳನ್ನು ಗೆದ್ದಿದ್ದಾರೆ. ಹಾಗೇ ಟಿ 20 ಕ್ರಿಕೆಟ್‌ನಲ್ಲಿಯೂ ಯಶಸ್ಸನ್ನು ಕಂಡಿದ್ದು, ಡ್ಯಾರೆನ್ ಸ್ಯಾಮಿ ನೇತೃತ್ವದಲ್ಲಿ 2012 ಮತ್ತು 2016 ರಲ್ಲಿ ಎರಡು ಬಾರಿ ಐಸಿಸಿ ಟಿ 20 ವಿಶ್ವಕಪ್ ಗೆದ್ದಿದೆ. 2004ರಲ್ಲಿ ಒಮ್ಮೆ ಚಾಂಪಿಯನ್ಸ್ ಟ್ರೋಫಿಗೂ ಮುತ್ತಿಕ್ಕಿದ್ದಾರೆ.

ಪಾಕಿಸ್ತಾನವು 3 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. 1992 ರಲ್ಲಿ ಇಮ್ರಾನ್ ಖಾನ್ ನಾಯಕತ್ವದಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆದ್ದು ಬೀಗಿದೆ. 2009ರಲ್ಲಿ ಟಿ-20 ವಿಶ್ವಕಪ್ ಗೆದ್ದಿದ್ರೆ 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಮೋಸ್ಟ್ ಟ್ಯಾಲೆಂಟೆಡ್ ಮತ್ತು ವೇಗದ ಬೌಲರ್‌ಗಳನ್ನು ಕಂಡಿರುವ ಪಾಕಿಸ್ತಾನ ವಿಶ್ವಕ್ರಿಕೆಟ್​ನಲ್ಲಿ ಬಲಿಷ್ಠ ತಂಡವಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡ್ತಿದೆ. ಅದ್ರಲ್ಲೂ ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನ ಹೋಸ್ಟ್ ಮಾಡ್ತಿದ್ರೂ ಒಂದೂ ಪಂದ್ಯವನ್ನ ಗೆಲ್ಲದೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿದೆ.

ಶ್ರೀಲಂಕಾ ತಂಡ ಕೂಡ ಒಟ್ಟು 3 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. 1996 ರಲ್ಲಿ ಅರ್ಜುನ ರಣತುಂಗ ನೇತೃತ್ವದಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಮೊದಲ ಐಸಿಸಿ ಗೆಲುವು. ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನೇ ಸೋಲಿಸಿದ್ದರು.  ಇನ್ನು 2002 ರಲ್ಲಿ, ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ ಶ್ರೀಲಂಕಾವನ್ನು ಭಾರತದೊಂದಿಗೆ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಇನ್ನು 2014 ರಲ್ಲಿ ಲಸಿತ್ ಮಾಲಿಂಗ ನಾಯಕತ್ವದಲ್ಲಿ ಭಾರತವನ್ನು ಸೋಲಿಸೋ ಮೂಲಕ ಟಿ-20 ವಿಶ್ವಕಪ್ ಗೆದ್ದು ಬೀಗಿತ್ತು. ಇನ್ನು ಕ್ರಿಕೆಟ್ ಜನಕರು ಅಂತಾ ಕರೆಸಿಕೊಳ್ಳೋ ಇಂಗ್ಲೆಂಡ್ ಕೂಡ 3 ಟ್ರೋಫಿ ಗೆದ್ದಿದೆ. 2019 ರಲ್ಲಿ ಏಕದಿನ ವಿಶ್ವಕಪ್. ಅದೂ ಕೂಡ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ್ರು. ಹಾಗೇ T20 ಕ್ರಿಕೆಟ್‌ನಲ್ಲೂ ಯಶಸ್ವಿಯಾಗಿದ್ದು, ಎರಡು ಬಾರಿ ಟೂರ್ನಮೆಂಟ್ ಗೆದ್ದಿದೆ. 2010 ರಲ್ಲಿ ಮತ್ತು 2022 ರಲ್ಲಿ ಟ್ರೋಫಿಗೆ ಮುತ್ತಿಟ್ಟಿದೆ. ಇನ್ನು ನ್ಯೂಜಿಲೆಂಡ್ 2 ಟೈಟಲ್ ಗೆದ್ದಿದೆ. 2000ನೇ ಇಸವಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೇ 2019-21ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್. ಇನ್ನು ಸೌತ್ ಆಫ್ರಿಕಾ 1998ರಲ್ಲಿ ಒಂದು ಸಲ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.

Shantha Kumari

Leave a Reply

Your email address will not be published. Required fields are marked *