ಸೆಮೀಸ್ ನಲ್ಲಿ ಭಾರತ Vs ಆಸ್ಟ್ರೇಲಿಯಾ? – ಮಿನಿ ವಿಶ್ವಕಪ್ ನಲ್ಲೂ ಕಾಂಗರೂಪಡೆ ಕಾಟ!
ಐಸಿಸಿ ಟೂರ್ನಿಯಲ್ಲಿ ಯಾರ ಮೇಲುಗೈ?

ಕ್ರಿಕೆಟ್ನಲ್ಲಿ ಐಸಿಸಿ ಟೂರ್ನಿಗಳು ಅಂದ್ರೆ ಅದು ಪ್ರತಿಷ್ಠೆ. 2 ವರ್ಷ, 4 ವರ್ಷ ಹೀಗೆ ಆಯಾ ಮಾದರಿ ಕ್ರಿಕೆಟ್ ಫಾರ್ಮೆಟ್ಗೆ ತಕ್ಕಂತೆ ಆಯೋಜನೆ ಮಾಡ್ತಾರೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೀತಾ ಇದ್ದು 8 ರಾಷ್ಟ್ರಗಳು ಭಾಗಿಯಾಗಿದ್ವು. ಈಗಾಗಲೇ ಟೂರ್ನಿ ನಾಕೌಟ್ ಹಂತ ತಲುಪಿದ್ದು, ಅಂತಮ ಘಟ್ಟದತ್ತ ಸಾಗ್ತಿದೆ. ಈಗಾಲ್ಲೇ ನ್ಯೂಜಿಲೆಂಡ್, ಭಾರತ ಜೊತೆ ಆಸ್ಟ್ರೇಲಿಯಾ ಕೂಡ ಸೆಮೀಸ್ಗೆ ಕಾಲಿಟ್ಟಿದೆ. ಐಸಿಸಿ ಟೂರ್ನಿಗಳಲ್ಲಿ ಪದೇಪದೆ ಭಾರತಕ್ಕೆ ಸವಾಲಾಗುವ ಆಸ್ಟ್ರೇಲಿಯಾ ಇಲ್ಲೂ ಕೂಡ ಆತಂಕ ಮೂಡಿಸಿದೆ.
ಇದನ್ನೂ ಓದಿ : 1,800 ಕೋಟಿ ವೆಚ್ಚ.. ಸಿಕ್ಕಿದ್ದು ಬಿಡಿಗಾಸು – ಪಾಕ್ ತಂಡದಲ್ಲಿ ಸೋತ ಪ್ಲೇಯರ್ಸ್ ಗೆ ಗೇಟ್ ಪಾಸ್?
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಾಲ್ಕು ಮಾದರಿ ಐಸಿಸಿ ಟೂರ್ನಿಗಳನ್ನ ಆಯೋಜನೆ ಮಾಡುತ್ತೆ. ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್, ವರ್ಲ್ಡ್ ಟೆಸ್ಟ್ ಚಾಂಪಿಯನ್ ಹಾಗೇ ಚಾಂಪಿಯನ್ಸ್ ಟ್ರೋಫಿ. ಈ ಎಲ್ಲಾ ಟೂರ್ನಿಗಳಲ್ಲೂ ಭಾರತಕ್ಕೆ ಬಹುತೇಕ ಮ್ಯಾಚ್ಗಳಲ್ಲಿ ದುಸ್ವಪ್ನವಾಗಿ ಕಾಡೋದೇ ಆಸ್ಟ್ರೇಲಿಯಾ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಪರಸ್ಪರ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ 14 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಗೆದ್ದಿದ್ದರೆ, ಭಾರತ 5 ಬಾರಿ ಜಯಗಳಿಸಿದೆ. ಈ ಪೈಕಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡವು ಗಳಿಸಿದ ಅತ್ಯಧಿಕ ಸ್ಕೋರ್ 359 ರನ್ಗಳು, ಭಾರತ ಗಳಿಸಿದ ಅತ್ಯಧಿಕ ಸ್ಕೋರ್ 352. ಭಾರತ ತಂಡವು ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ 125 ಮತ್ತು ಮಾರ್ಕ್ಯೂ ಈವೆಂಟ್ನಲ್ಲಿ ಆಸ್ಟ್ರೇಲಿಯಾ ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ 128. ಹೀಗೆ ಆಸ್ಟ್ರೇಲಿಯಾ ಭಾರತದ ವಿರುದ್ಧ ಪಾರುಪತ್ಯ ಮೆರೆಯುತ್ತಲೇ ಬಂದಿದೆ.
ಅದ್ರಲ್ಲೂ ಟೀಂ ಇಂಡಿಯಾ 2023ರ ಏಕದಿನ ವಿಶ್ವಕಪ್ ಫೈನಲ್ ಮ್ಯಾಚ್ ಅಂತೂ ಮರೆಯೋಕೆ ಚಾನ್ಸೇ ಇಲ್ಲ. 2023ರಲ್ಲಿ ನಡೆದ ಏಕದಿನ ಮಾದರಿಯ ವಿಶ್ವಕಪ್ ವೇಳೆ ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಇದ್ರು. ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಲೀಡ್ ಮಾಡ್ತಿದ್ರು. ಭಾರತದಲ್ಲೇ ಟೂರ್ನಿ ಆಯೋಜನೆಗೊಂಡಿದ್ದರಿಂದ ಭಾರತದ ಪ್ರದರ್ಶನ ಕೂಡ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಒಂದೂ ಪಂದ್ಯವನ್ನ ಸೋಲದೆ ಅಜೇಯರಾಗಿ ಫಿನಾಲೆಗೆ ಲಗ್ಗೆ ಇಟ್ಟಿದ್ರು. ಮತ್ತೊಂದೆಡೆ ಆಸಿಸ್ ಕೂಡ ಫೈನಲ್ ತಲುಪಿತ್ತು. ಅಂತಿಮವಾಗಿ 2023ರ ನವೆಂಬರ್ 19ರಂದು ಫೈನಲ್ ಮ್ಯಾಚ್ ನಡೆದಿತ್ತು. ಈ ವೇಳೆ ಮೊದಲ ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ಗಳಲ್ಲಿ 10 ವಿಕೆಟ್ಗಳ ನಷ್ಟಕ್ಕೆ 240 ರನ್ ಕಲೆ ಹಾಕಿತ್ತು. ಈ ಸ್ಕೋರ್ ಬೆನ್ನಟ್ಟಿದ ಆಸಿಸ್ ಪಡೆ 43 ಓವರ್ಗಳಲ್ಲೇ ಟಾರ್ಗೆಟ್ ರೀಚ್ ಆಗೋ ಮೂಲಕ ಭಾರತಕ್ಕೆ ಶಾಕ್ ಕೊಟ್ಟಿತ್ತು.
ಕ್ರಿಕೆಟ್ನಲ್ಲಿ ಸಾಕಷ್ಟು ಸಲ ಭಾರತಕ್ಕೆ ಸವಾಲಾಗಿರೋದೇ ಕಾಂಗರೂಪಡೆ. ಟೆಸ್ಟ್ ಮ್ಯಾಚ್ನಲ್ಲಿ 1947 ರಿಂದ ಈವರೆಗೂ 107 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು ಭಾರತ 32 ಪಂದ್ಯ ಗೆದ್ದಿದ್ರೆ ಆಸ್ಟ್ರೇಲಿಯಾ 45 ಮ್ಯಾಚ್ಗಳನ್ನ ಗೆದ್ದಿದೆ. 1 ಪಂದ್ಯ ಟೈ ಆಗಿದ್ರೆ 29 ಮ್ಯಾಚ್ಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಆಸ್ಟ್ರೇಲಿಯಾವೇ ಗೆದ್ದಿದೆ. ಇನ್ನು ಟಿ-20 ಮಾದರಿಯಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಈವರೆಗೂ 32 ಚುಟುಕು ಫಾರ್ಮೆಟ್ ಕ್ರಿಕೆಟ್ ಆಡಿವೆ. ಇದ್ರಲ್ಲಿ ಭಾರತ 20 ಸಲ, ಆಸ್ಟ್ರೇಲಿಯಾ 11 ಸಲ ಗೆದ್ದಿವೆ. 1ಪಂದ್ಯ ಫಲಿತಾಂಶ ಕಂಡಿಲ್ಲ. ಇನ್ನು ಒಟ್ಟಾರೆ ಏಕದಿನ ಮಾದರಿಯಲ್ಲಿ ಎರಡು ತಂಡಗಳು 151 ಪಂದ್ಯಗಳಲ್ಲಿ ಕಣಕ್ಕಿಳಿದಿವೆ. 57 ಮ್ಯಾಚ್ ಭಾರತ ಗೆದ್ದಿದ್ರೆ ಆಸ್ಟ್ರೇಲಿಯಾ 84 ಪಂದ್ಯಗಳನ್ನ ಗೆದ್ದುಕೊಂಡಿದೆ. 10 ಪಂದ್ಯಗಳಲ್ಲಿ ರಿಸಲ್ಟ್ ಬಂದಿಲ್ಲ. ಹೀಗೆ ಓಡಿಐ ಫಾರ್ಮೆಟ್ನಲ್ಲಿ ಆಸ್ಟ್ರೇಲಿಯಾವೇ ಮೇಲುಗೈ ಸಾಧಿಸಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೆಮೀಸ್ಗೆ ಲಗ್ಗೆ ಇಟ್ಟಿರೋದ್ರಿಂದ ಭಾರತಕ್ಕೆ ಸ್ವಲ್ಪ ಚಾಲೆಂಜಸ್ ಅಂತೂ ಕಾಣಿಸ್ತಿದೆ.