ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ – ಅಬ್ಬರಿಸಿದ ಹಿಟ್‌ಮ್ಯಾನ್, ಬೆಚ್ಚಿಬಿದ್ದ ಅಫ್ಘಾನಿಸ್ತಾನ್
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಮುಂದುವರೆದಿದೆ. ನಾಯಕ ರೋಹಿತ್ ಶರ್ಮಾ ಸ್ಫೋಟಕ ಶತಕ, ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅದ್ಧೂರಿ ಕಾರ್ಯಕ್ರಮ -ಅಕ್ಟೋಬರ್ 14ರಂದು ವಿವಿಐಪಿಗಳ ದರ್ಬಾರ್
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. 273 ರನ್‌ಗಳ ಸವಾಲನ್ನು ಪಡೆದ ಭಾರತ 35 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 273 ರನ್ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಈ ಮೂಲಕ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಹಿತ್ ಬ್ರಿಗೇಡ್ ಜಯಭೇರಿ ಸಾಧಿಸಿತು. ಇದು ಟೀಮ್ ಇಂಡಿಯಾದ ಸತತ ಎರಡನೇ ಗೆಲುವಾಗಿದೆ.
ಭಾರತದ ಪರ ನಾಯಕ ರೋಹಿತ್ ಶರ್ಮಾ 84 ಎಸೆತಗಳನ್ನು ಎದುರಿಸಿ 16 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 131 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ 55 ಮತ್ತು ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಅಜೇಯರಾಗಿ ಉಳಿದರು. 273 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದರು. ಆರಂಭಿಕರಿಬ್ಬರನ್ನು ಹೊರತುಪಡಿಸಿ ಮ್ಯಾಚ್ ವಿನ್ನಿಂಗ್ಸ್ ಆಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ 55 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ಈ ವಿಶ್ವಕಪ್‌ನಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿದರು. ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 10 ಓವರ್ಗಳಲ್ಲಿ 39 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಉಪನಾಯಕ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಒಂಬತ್ತು ಓವರ್ಗಳಲ್ಲಿ 76 ರನ್ ಬಿಟ್ಟುಕೊಟ್ಟು ಕೊಂಚ ದುಬಾರಿ ಬೌಲರ್ ಎನಿಸಿಕೊಂಡರು.