ಟೀಮ್ ಇಂಡಿಯಾ ನೂತನ ಜೆರ್ಸಿ ರಿವೀಲ್ – ಪಾಕ್ ಹೆಸರು ಹಾಕಿಸಿದ್ಯಾಕೆ ರೋಹಿತ್ ಪಡೆ?

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ನಾಳೆಯಿಂದ ಟೂರ್ನಿ ಆರಂಭವಾಗಲಿದ್ದು, ಟೀಮ್ ಇಂಡಿಯಾ ಪಂದ್ಯಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ಇದೀಗ ಟೀಮ್ ಇಂಡಿಯಾದ ನೂತನ ಜೆರ್ಸಿ ರಿವೀಲ್ ಆಗಿದೆ. ಜೆರ್ಸಿಯಲ್ಲಿ ಲೋಗೋ ಜೊತೆಗೆ ಪಾಕಿಸ್ತಾನದ ಹೆಸರನ್ನು ಕೂಡ ಹಾಕಿಸಲಾಗಿದೆ.
ಇದನ್ನೂ ಓದಿ: ಪುಟ್ಟಕ್ಕನಿಗೆ ಕ್ರೇಜಿಸ್ಟಾರ್ ಸಾಥ್.. ಸ್ನೇಹಾಗೆ ನ್ಯಾಯ ಕೊಡಿಸ್ತಾರಾ ಪುಟ್ನಂಜ? – ಕಿರುತೆರೆಯಲ್ಲಿ ರವಿಚಂದ್ರನ್ ಹವಾ
ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈ ಟೂರ್ನಿ ಆಯೋಜಿಸಿದೆ. ಇದೀಗ ಟೀಮ್ ಇಂಡಿಯಾದ ನೂತನ ಜೆರ್ಸಿ ಅನಾವರಣಗೊಂಡಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧರಿಸಿದ್ದ ವಿನ್ಯಾಸವನ್ನೇ ಚಾಂಪಿಯನ್ಸ್ ಟ್ರೋಫಿಗೂ ಮುಂದುವರೆಸಲಾಗಿದೆ. ಅಲ್ಲದೆ ಜೆರ್ಸಿಯ ಬಲ ಭಾಗದಲ್ಲಿ ಚಾಂಪಿಯನ್ಸ್ ಟ್ರೋಫಿ ಲೋಗೊವನ್ನು ನೀಡಲಾಗಿದೆ.
ವಿಶೇಷ ಎಂದರೆ ಈ ಲೋಗೊ ಜೊತೆ ಆತಿಥ್ಯ ರಾಷ್ಟ್ರವಾದ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿತ್ತು. ಆದರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕಿಸ್ತಾನದ ಹೆಸರು ಸಹ ಟೀಮ್ ಇಂಡಿಯಾ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.
ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಜೆರ್ಸಿ ಮುಂಭಾಗದಲ್ಲಿ ಯಾವುದೇ ಜಾಹೀರಾತು ಕಾಣಿಸಿಕೊಳ್ಳುವುದಿಲ್ಲ. ಐಸಿಸಿ ನಿಯಮದ ಪ್ರಕಾರ, ಜೆರ್ಸಿ ಮುಂಭಾಗದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಬದಲಾಗಿ ಆಯಾ ದೇಶಗಳ ಹೆಸರು ಮಾತ್ರ ಇರಬೇಕು. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಜೆರ್ಸಿ ಮೇಲೆ INDIA ಎಂದು ಮಾತ್ರ ಕಾಣಿಸಿಕೊಳ್ಳಲಿದೆ. ಇನ್ನು ಈ ಜೆರ್ಸಿಯ ಮತ್ತೊಂದು ವೈಶಿಷ್ಟ್ಯವೆಂದರೆ ಭುಜದ ಮೇಲೆ ತ್ರಿವರ್ಣ ಧ್ವಜದ ಚಿತ್ರವನ್ನ ಹಾಕಲಾಗಿದೆ.