ಹೆಡ್ & ಸ್ಮಿತ್ ಅಬ್ಬರಕ್ಕೆ ಥಂಡಾ ಹೊಡೆದ ಭಾರತ! – ಬೃಹತ್ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ!
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಾರ್ಗೆಟ್ನಲ್ಲೇ ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದ ಟೀಂ ಇಂಡಿಯಾಗೆ ಕಾಂಗರೂಪಡೆ ಮರ್ಮಾಘಾತ ನೀಡಿದೆ. ಭಾರತದ ಪಾಲಿಗೆ ಸದಾ ತಲೆನೋವಾಗುವ ಟ್ರಾವಿಸ್ ಹೆಡ್ ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೆಡ್ಏಕ್ ಆಗಿ ಕಾಡಿದ್ದಾರೆ. ಭಾರತೀಯ ಬೌಲರ್ಗಳನ್ನ ಬೆಂಡೆತ್ತಿದ ಆಸಿಸ್ ಪಡೆ ರನ್ ಹೊಳೆ ಹರಿಸಿದ್ರೆ ಟಾರ್ಗೆಟ್ ನೋಡಿಯೇ ಬೆಚ್ಚಿ ಬಿದ್ದವ್ರಂತೆ ಟೀಂ ಇಂಡಿಯಾ ಪ್ಲೇಯರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ಇದನ್ನೂ ಓದಿ: IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯಗಳನ್ನ ಗೆದ್ದಾಗಿತ್ತು. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗಾಗಿ ಮೂರನೇ ಮ್ಯಾಚ್ ಉಭಯ ತಂಡಗಳಿಗೂ ತುಂಬಾನೇ ಇಂಪಾರ್ಟೆಂಟ್ ಆಗಿತ್ತು. ಬಟ್ ಈ ಮ್ಯಾಚ್ನಲ್ಲಿ ಭಾರತ ಮುಗ್ಗರಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ರೋಹಿತ್ ಶರ್ಮಾ ಪಡೆಗೆ ಆಸಿಸ್ ಬ್ಯಾಟರ್ಸ್ ಬಿಸಿ ಮುಟ್ಟಿಸಿದ್ದಾರೆ.
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆಸಿಸ್ ಪಡೆ ಬರೋಬ್ಬರಿ 445 ರನ್ಗಳಿಸಿ ಆಲೌಟ್ ಆಗಿದೆ. ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಓಪನರ್ಸ್ ಆದ ಉಸ್ಮಾನ್ ಖ್ವಾಜಾ 21 ರನ್ ಗಳಿಸಿ ಔಟಾದ್ರೆ ನಾಥನ್ ಮೆಕ್ ಸ್ವೀನಿ 9 ರನ್ಗೆ ಆಟ ಮುಗಿಸಿದ್ರು. ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ 15 ರನ್ ಗಳಿಸಿ ಔಟಾದರು. ಬಟ್ ನಾಲ್ಕನೇ ವಿಕೆಟ್ಗೆ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ಸ್ಮಿತ್ ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ಹೆಡ್ ವಿಸ್ಪೋಟಕ ಇನಿಂಗ್ಸ್ ಆಡಿದರು. ಪರಿಣಾಮ ಟ್ರಾವಿಸ್ ಹೆಡ್ 115 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಅತ್ತ ಸ್ಮಿತ್ 185 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಶತಕಗಳೊಂದಿಗೆ ತಂಡದ ಮೊತ್ತವನ್ನು 300ರ ಗಡಿದಾಟಿಸಿದ್ರು. ಶತಕದ ಬೆನ್ನಲ್ಲೇ ಸ್ಟೀವ್ ಸ್ಮಿತ್ (101) ಬುಮ್ರಾ ಎಸೆತದಲ್ಲಿ ಔಟಾದರು. ಆ ಬಳಿಕ ಬಂದ ಮಿಚೆಲ್ ಮಾರ್ಷ್ ಕೂಡ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
152 ರನ್ ಬಾರಿಸಿದ ಟ್ರಾವಿಸ್ ಹೆಡ್!
ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್ ಭಾರತೀಯ ಬೌಲರ್ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ರು. 160 ಎಸೆತಗಳಲ್ಲಿ 18 ಫೋರ್ ಗಳೊಂದಿಗೆ 152 ರನ್ ಸಿಡಿಸಿದರು. ಇನ್ನು 7ನೇ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ 70 ರನ್ ಬಾರಿಸಿದರೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತಂಡವು 445 ರನ್ಗಳಿಸಿ ಆಲೌಟ್ ಆಯ್ತು.
ಭಾರತಕ್ಕೆ ಆರಂಭದಲ್ಲೇ ಆಘಾತ!
ಆಸ್ಟ್ರೇಲಿಯಾ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾದ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಮೊದಲ ಓವರ್ನ ಎರಡನೇ ಎಸೆತದಲ್ಲಿ ಮೊದಲ ವಿಕೆಟ್ ಉರುಳಿತು. ಮಿಚೆಲ್ ಸ್ಟಾರ್ಕ್ ಎಸೆದ ಈ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇನ್ನು ಮೂರನೇ ಓವರ್ನಲ್ಲಿ ಶುಭ್ಮನ್ ಗಿಲ್ 1 ರನ್ಗೆ ಔಟಾದ್ರು. ಆ ಬಳಿಕ ಬಂದ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲೇ ಇಲ್ಲ. 16 ಎಸೆತಗಳಲ್ಲಿ 3 ರನ್ ಸಿಡಿಸಿ ಜೋಶ್ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ರು. ರಿಷಭ್ ಪಂತ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. 6 ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ರೋಹಿತ್ ಶರ್ಮಾ ಕ್ರೀಸ್ನಲ್ಲಿದ್ದು ಇನ್ನೂ ಯಾವುದೇ ರನ್ ಗಳಿಸಿಲ್ಲ. ಅಷ್ಟ್ರಲ್ಲೇ ಮಳೆ ಕಾರಣದಿಂದಾಗಿ ಪಂದ್ಯವನ್ನ ಸ್ಥಗಿತಗೊಳಿಸಲಾಯ್ತು. ಸಾಲು ಸಾಲು ವಿಕೆಟ್ಗಳ ನಡುವೆ ರಕ್ಷಣಾತ್ಮಕ ಆಟವಾಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ 30 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಈ ಮೂಲಕ ಭಾರತ 48 ರನ್ ಗಳಿಸುವಷ್ಟ್ರಲ್ಲೇ 4 ವಿಕೆಟ್ ಕಳೆದುಕೊಂಡಿದೆ.