ಮೊದಲ ಟಿ-20 ಪಂದ್ಯ ಗೆದ್ದ ಟೀಮ್ ಇಂಡಿಯಾ –ರನೌಟ್ ಮಾಡಿಸಿದ ಗಿಲ್ ಮೇಲೆ ರೋಹಿತ್ ಶರ್ಮಾ ಕಿಡಿಕಿಡಿ..!

ಮೊದಲ ಟಿ-20 ಪಂದ್ಯ ಗೆದ್ದ ಟೀಮ್ ಇಂಡಿಯಾ –ರನೌಟ್ ಮಾಡಿಸಿದ ಗಿಲ್ ಮೇಲೆ ರೋಹಿತ್ ಶರ್ಮಾ ಕಿಡಿಕಿಡಿ..!

ಹೊಸ ವರ್ಷದಲ್ಲಿ ಮೊದಲ ಪಂದ್ಯ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ.  ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರಿಜೆಕ್ಟ್ ಮಾಡಿದ್ದು ಕೊಹ್ಲಿ? – ವಿರಾಟ್ ಕೊಹ್ಲಿಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ? – ಇದಪ್ಪಾ ಸ್ನೇಹ ಅಂದ್ರೆ..!

14 ತಿಂಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ರೀ ಎಂಟ್ರಿ ಪಡೆದ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೇ ಗೆಲುವು ಪಡೆದಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ 6 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ.

ಭಾರತ ತಂಡದ ಆಲ್ ರೌಂಡರ್ ಶಿವಂ ದುಬೆ ಅಫ್ಘಾನಿಸ್ತಾನ ವಿರುದ್ಧ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಬೌಲರ್‌ಗಳನ್ನು ಹೊಗಳಿದ್ದಾರೆ.  ತುಂಬಾನೆ ಚಳಿ ಇತ್ತು. ಚೆಂಡು ಬೆರಳಿನ ತುದಿಗೆ ಹೊಡೆದಾಗ ನೋವಾಯಿತು. ಆದರೆ, ಈಗ ನಾನು ಚೆನ್ನಾಗಿದ್ದೇನೆ. ಬಹಳಷ್ಟು ಧನಾತ್ಮಕ ಅಂಶಗಳನ್ನು ಈ ಆಟದಿಂದ ನಾವು ಪಡೆದುಕೊಂಡಿದ್ದೇವೆ, ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ. ಈ ಪರಿಸ್ಥಿತಿ ಸುಲಭವಾಗಿರಲಿಲ್ಲ. ನಮ್ಮ ಸ್ಪಿನ್ನರ್‌ಗಳು ನಿಜವಾಗಿಯೂ ಉತ್ತಮವಾಗಿ ಬೌಲ್ ಮಾಡಿದರು ಮತ್ತು ಸೀಮರ್‌ಗಳು ಸಹ ತಮ್ಮ ಕೆಲಸವನ್ನು ಮಾಡಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ತನ್ನ ರನೌಟ್ ಬಗ್ಗೆ ಮಾತನಾಡಿದ ರೋಹಿತ್, ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಆಗ ಹತಾಶರಾಗುತ್ತೀರಿ, ನಾವು ತಂಡಕ್ಕಾಗಿ ರನ್ ಗಳಿಸಲು ಬಯಸುತ್ತೇವೆ. ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಆದರೆ, ನಾವು ಪಂದ್ಯವನ್ನು ಗೆದ್ದಿದ್ದೇವೆ, ಅದು ಹೆಚ್ಚು ಮುಖ್ಯವಾಗಿದೆ. ನಾನು ಗಿಲ್ ಇನ್ನಷ್ಟು ಆಡಬೇಕು ಎಂದು ಬಯಸಿದ್ದೆ, ದುರದೃಷ್ಟವಶಾತ್ ಅವರು ದೊಡ್ಡ ಇನ್ನಿಂಗ್ಸ್ ಆಡಲಿಲ್ಲ ಎಂದು ರೋಹಿತ್‌ಶರ್ಮಾ ಹೇಳಿದ್ದಾರೆ.

ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ, ರೋಹಿತ್ ಶರ್ಮಾ ಮುಂದೆ ಹೋಗಿ ಮಿಡ್-ಆಫ್ ಕಡೆಗೆ ಚೆಂಡನ್ನು ಅಟ್ಟಿ ರನ್‌ಗಳಿಗಾಗಿ ಓಡಿದರು. ಆಗ ಮಿಡ್ ಆಫ್ ಫೀಲ್ಡರ್ ಡೈವ್ ಮಾಡುವ ಮೂಲಕ ಚೆಂಡನ್ನು ನಿಲ್ಲಿಸಿದರು. ಅತ್ತ ರೋಹಿತ್ ಒಂದು ರನ್​ಗೆಂದು ಗಿಲ್ ಅವರನ್ನು ಕರೆದರು. ಆದರೆ, ಗಿಲ್ ಚೆಂಡನ್ನು ನೋಡುತ್ತಲೇ ಇದ್ದರಷ್ಟೆ ವಿನಃ ರನ್​ಗೆಂದು ಓಡಲಿಲ್ಲ. 2 ಹೆಜ್ಜೆ ಮುಂದೆ ಬಂದು ಪುನಃ ಕ್ರೀಸ್‌ಗೆ ಮರಳಿದರು. ರೋಹಿತ್ ರನ್‌ಗಾಗಿ ಕೂಗಾಡುತ್ತಿದ್ದರೂ ಗಿಲ್ ಕದಲಲಿಲ್ಲ. ಪರಿಣಾಮ ರೋಹಿತ್ ಕ್ರೀಸ್‌ಗೆ ಮರಳಲು ಸಾಧ್ಯವಾಗದೆ ರನೌಟ್ ಆದರು. ಇದರಿಂದ ಕೋಪಗೊಂಡ ರೋಹಿತ್ ಎಲ್ಲರ ಮುಂದೆ ಶುಭ್​ಮನ್ ಮೇಲೆ ರೇಗಾಡಿದ ಪ್ರಸಂಗವೂ ನಡೆಯಿತು.

Sulekha