RO-KO ಅಬ್ಬರದ ಜೊತೆಯಾಟ ಗೆದ್ದ ಟೀಮ್ ಇಂಡಿಯಾ – ರಾಂಚಿಯಲ್ಲಿ ಕ್ರಿಕೆಟ್ ರಾಜನ 52ನೇ ಶತಕ

RO-KO ಅಬ್ಬರದ ಜೊತೆಯಾಟ ಗೆದ್ದ ಟೀಮ್ ಇಂಡಿಯಾ – ರಾಂಚಿಯಲ್ಲಿ ಕ್ರಿಕೆಟ್ ರಾಜನ 52ನೇ ಶತಕ

ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಭಾನುವಾರದ ಬಾಡೂಟ ಉಂಡಷ್ಟೇ ಖುಷಿ ಪಟ್ಟಿದ್ದಾರೆ ಕಿಂಗ್ ಕೊಹ್ಲಿ ಫ್ಯಾನ್ಸ್. ಹೌದು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದೆ. ಜೊತೆಗೆ ರಾಂಚಿಯಲ್ಲಿ ಕ್ರಿಕೆಟ್ ರಾಜನ ಹೊಡಿಬಡಿ ಆಟದ ಜೊತೆ ಗ್ರೇಟ್ ಶತಕ ಅಭಿಮಾನಿಗಳ ಮನಗೆದ್ದಿದೆ. ಜೊತೆಗೆ ರೋ-ಕೋ ಜೊತೆಯಾಟ, ಕನ್ನಡಿಗ ಕೆ.ಎಲ್ ರಾಹುಲ್ ಅವರ ನಾಯಕನ ಜವಾಬ್ದಾರಿಯುತ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ:RCB ಫ್ಯಾನ್ಸ್ ನಿದ್ದೆಗೆಡಿಸಿದ ಇಂಗ್ಲೆಂಡ್ ಸುಂದರಿ – ಲಾರೆನ್ ಬೆಲ್ ಈಗ WPLನ ಹೊಸ ಕ್ರಶ್

ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದಿದ್ದು ಕೊನೇ ಓವರ್‌ನಲ್ಲಿ. ಈ ರೋಚಕ ಗೆಲುವು ಟೀಮ್ ಇಂಡಿಯಾ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯ ಗಳಿಗೆ ಕೂಡಾ ಹೌದು. ರಾಂಚಿಯಲ್ಲಿ ಯಥಾ ಪ್ರಕಾರ ಟಾಸ್‌ನಲ್ಲಿ ಸೋತು ಹೋಗಿತ್ತು ನಮ್ಮ ಟೀಮ್ ಇಂಡಿಯಾ. ಆದರೂ ಮೊದಲು ಬ್ಯಾಟಿಂಗ್‌ಗೆ ಬಂದ ಭಾರತ ಅಭಿಮಾನಿಗಳಿಗೆ ಎಲ್ಲೂ ಕೂಡಾ ನಿರಾಶೆ ಮಾಡಲೇ ಇಲ್ಲ. ಧೋನಿ ತವರಾದ ರಾಂಚಿ ಮೈದಾನದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಜೈಸ್ವಾಲ್ ಆರಂಭದಲ್ಲೇ ಆರ್ಭಟಿಸಲು ಆರಂಭಿಸಿದ್ದರು. ಆದರೆ, ಜೈಸ್ವಾಲ್ ಕೇವಲ 18 ರನ್ ಗಳಿಸಿ ಔಟ್ ಆದರು. ಆ ನಂತರ ಶುರುವಾಗಿದ್ದೇ RO-KO ಅಭಿಮಾನಿಗಳ ಹಬ್ಬ. ಕೊಹ್ಲಿ ಮತ್ತು ಹಿಟ್‌ಮ್ಯಾನ್ ಹೊಡಿಬಡಿ ಆಟಕ್ಕೆ ಹರಿಣಗಳ ಪಡೆ ಬಳಲಿ ಬೆಂಡಾಯ್ತು. ಇವರಿಬ್ಬರು 2ನೇ ವಿಕೆಟ್​ಗೆ 136 ರನ್‌ಗಳ ಜೊತೆಯಾಟ ಕಟ್ಟಿದರು. ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ನಂತರ ಬಂದ ರುತುರಾಜ್ ಗಾಯಕ್ವಾಡ್ ಮತ್ತು ವಾಷಿಂಗ್ಟನ್ ಸುಂದರ್ ಕೂಡಾ ಔಟಾದರು. ಆಗ ಬಂದಿದ್ದೇ ಕ್ಯಾಪ್ಟನ್ ಕೆ.ಎಲ್ ರಾಹುಲ್. ಮತ್ತೊಮ್ಮೆ ಕೆ.ಎಲ್ ಮತ್ತು ಕೊಹ್ಲಿ ಜೊತೆಯಾಟ ಅಭಿಮಾನಿಗಳಿಗೆ ಖುಷಿ ನೀಡಿತು.

ಮೊದಲು ಹೊಡಿ ಬಡಿ ಆಟಕ್ಕೆ ಒತ್ತು ಕೊಟ್ಟ ವಿರಾಟ್ ಕೊಹ್ಲಿ ನಂತರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ತಮ್ಮ 52ನೇ ಏಕದಿನ ಶತಕವನ್ನು ಪೂರೈಸಿದರು. ಈ ವೇಳೆ ನಾಯಕ ರಾಹುಲ್, ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಕೊಹ್ಲಿ 120 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 135 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇತ್ತ ನಾಯಕ ಕೆ.ಎಲ್. ರಾಹುಲ್ ಅರ್ಧಶತಕ ಬಾರಿಸಿದರೆ, ರವೀಂದ್ರ ಜಡೇಜಾ ಕೂಡ ಚುರುಕಾದ ಇನ್ನಿಂಗ್ಸ್ ಆಡಿದರು.

ನಂತರ 350 ರನ್‌ಗಳ ಗುರಿ ಪಡಿದ ದಕ್ಷಿಣ ಆಫ್ರಿಕಾ ಕೊನೇ ಓವರ್ ವರೆಗೂ ಟೀಮ್ ಇಂಡಿಯಾವನ್ನು ಕಾಡಿದರು. ಮ್ಯಾಥ್ಯೂ ಬ್ರೆಟ್ಜ್ಕಿ ಜೊತೆಯಾದ ಆಲ್​ರೌಂಡರ್ ಮಾರ್ಕೊ ಯಾನ್ಸೆನ್ 97 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಈ ವೇಳೆ ದಾಳಿಗಿಳಿದ ಕುಲ್ದೀಪ್ ಯಾದವ್ 34 ನೇ ಓವರ್‌ನಲ್ಲಿ ಇಬ್ಬರನ್ನೂ ಔಟ್ ಮಾಡುವ ಮೂಲಕ ಟೀಂ ಇಂಡಿಯಾಕ್ಕೆ ಗೆಲುವಿನ ಭರವಸೆ ನೀಡಿದರು. ಕಾರ್ಬಿನ್ ಬಾಷ್ ಮಾತ್ರ ಕೊನೇವರೆಗೂ ಕಾಡಿದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ 50ನೇ ಓವರ್​ನ ಎರಡನೇ ಎಸೆತದಲ್ಲಿ ಬಾಷ್, ರೋಹಿತ್​ಗೆ ಕ್ಯಾಚ್ ನೀಡುವ ಮೂಲಕ ಟೀಮ್ ಇಂಡಿಯಾ ರೋಚಕ ಗೆಲುವು ದಾಖಲಿಸಿತು.

Sulekha