ಲಂಕಾ ಬೇಟೆಗೆ ಬಂತು ಹೊಸ ಜೆರ್ಸಿ – ಡಬಲ್ ಸ್ಟಾರ್ ಜೆರ್ಸಿಯ ಸಂಕೇತವೇನು?
ಕೊಹ್ಲಿ, ರೋಹಿತ್‌ ನೆನಪಿನಲ್ಲಿ ಫ್ಯಾನ್ಸ್

ಲಂಕಾ ಬೇಟೆಗೆ ಬಂತು ಹೊಸ ಜೆರ್ಸಿ – ಡಬಲ್ ಸ್ಟಾರ್ ಜೆರ್ಸಿಯ ಸಂಕೇತವೇನು?ಕೊಹ್ಲಿ, ರೋಹಿತ್‌ ನೆನಪಿನಲ್ಲಿ ಫ್ಯಾನ್ಸ್

ಟೀಮ್ ಇಂಡಿಯಾ ಫ್ಯಾನ್ಸ್ ಕಾಯ್ತಿರೋ ದಿನ ಬಂದೇ ಬಿಟ್ಟಿದೆ. ಇವತ್ತಿನಿಂದಲೇ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಾವಧಿಯೂ ಸಹ ಆರಂಭವಾಗಲಿದೆ. ಜೊತೆಗೆ ಕ್ಯಾಪ್ಟನ್ ಆಗಿ ಸೂರ್ಯಕುಮಾರ್ ಯಾದವ್‌ಗೂ ಈ ಸರಣಿ ಮಹತ್ವದ್ದಾಗಿದೆ. ಇದ್ರ ಮಧ್ಯೆ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಜೆರ್ಸಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಜೆರ್ಸಿಯಲ್ಲಿ ಬದಲಾವಣೆ ತಂದಿದ್ಯಾಕೆ?. ಜೆರ್ಸಿಯಲ್ಲಿ ಅಂಥಾದ್ದೇನು ಬದಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಬಾಂಗ್ಲಾವನ್ನು ಬಗ್ಗುಬಡಿದ ಸಿಂಹಿಣಿಯರು – ಸತತ ಐದನೇ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ

ಟೀಮ್ ಇಂಡಿಯಾ ಹೊಸ ಹುರುಪು, ಹೊಸ ಕೋಚ್ , ಹೊಸ ನಾಯಕನೊಂದಿಗೆ ಲಂಕಾದಹನಕ್ಕೆ ಸಜ್ಜಾಗಿದೆ. ಇದ್ರ ಜೊತೆಗೆ ಟೀಮ್ ಇಂಡಿಯಾ ಆಟಗಾರರು ಹೊಸ ಜೆರ್ಸಿ ಜೊತೆಗೆ ಕಣಕ್ಕಿಳಿಯಲಿದ್ದಾರೆ. ವಿಶೇಷ ಜೆರ್ಸಿ ಧರಿಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರವೇಶಿಸಲಿದೆ. ಈ ಜೆರ್ಸಿಯಲ್ಲಿ ಎರಡು ಸ್ಟಾರ್‌ಗಳನ್ನು ಮುದ್ರಿಸಲಾಗಿದೆ. ಟೀಮ್ ಇಂಡಿಯಾದ ಜೆರ್ಸಿಯಲ್ಲಿರುವ ಈ ಎರಡು ಸ್ಟಾರ್‌ಗಳು ಟೀಂ ಇಂಡಿಯಾ ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿರುವುದನ್ನು ಸಂಕೇತಿಸುತ್ತದೆ. ಟಿ20 ವಿಶ್ವಕಪ್ 2024 ರ ಮೊದಲು, ಟೀಂ ಇಂಡಿಯಾದ ಜೆರ್ಸಿಯ ಮೇಲೆ ಕೇವಲ ಒಂದು ಸ್ಟಾರ್ ಮಾತ್ರ ಇತ್ತು.  ಜೂನ್ 29 ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಹೀಗಾಗಿ ತಂಡದ ಜರ್ಸಿಗೆ ಮತ್ತೊಂದು ಸ್ಟಾರ್ ಸೇರ್ಪಡೆಗೊಂಡಿದೆ.

ಬೇಸರದ ವಿಚಾರ ಏನೆಂದ್ರೆ, ಜೆರ್ಸಿಗೆ ಮತ್ತೊಂದು ಸ್ಟಾರ್ ಸೇರಲು ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಜರ್ಸಿಯನ್ನು ಧರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಇಬ್ಬರೂ ಸ್ಟಾರ್ ಆಟಗಾರರು ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಫ್ಯಾನ್ಸ್‌ಗೂ ತಮ್ಮ ಹೀರೋಗಳನ್ನ ಹೊಸ ಜೆರ್ಸಿಯಲ್ಲಿ ನೋಡಲು ಸಾದ್ಯವಾಗಲ್ಲ. ಇನ್ನು ರೋಹಿತ್ ಶರ್ಮಾ ನಿವೃತ್ತಿಯೊಂದಿಗೆ ಟೀಂ ಇಂಡಿಯಾದ ನಾಯಕನೂ ಬದಲಾಗಿದ್ದಾರೆ. ಇನ್ನೊಂದೆಡೆ ನೂತನ ನಾಯಕ ಸೂರ್ಯಕುಮಾರ್​ ಯಾದವ್​, ಉಪನಾಯಕ ಶುಭಮನ್​ ಗಿಲ್​, ಹಾರ್ದಿಕ್ ಪಾಂಡ್ಯ, ಅಕ್ಷರ್​ ಪಟೇಲ್​ ಸೇರಿ ತಂಡದ ಎಲ್ಲ ಆಟಗಾರರು ನೂತನ ಜೆರ್ಸಿ ಧರಿಸಿ ಮಿಂಚಿದ್ದಾರೆ. ಹೊಸ ಜೆರ್ಸಿ ಧರಿಸಿದ ಆಟಗಾರರ ಫೋಟೋಶೂಟ್​ನ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಲೈಟ್ಸ್​, ಕ್ಯಾಮೆರಾ, ಹೆಡ್‌ಶಾಟ್ ಎಂದು ಬರೆದುಕೊಂಡಿದೆ. ಒಟ್ನಲ್ಲಿ, ಹೊಸತನಗಳೊಂದಿಗೆ ಟೀಮ್ ಇಂಡಿಯಾ ಲಂಕಾಬೇಟೆಗೆ ಸಜ್ಜಾಗಿದೆ.

Shwetha M